ಕೇಡುಗಾಲದಲ್ಲಿ ನಾಯಿ ಮೊಟ್ಟೆ ಇಡ್ತಂತೆ ಎಂಬುದೊಂದು ಮಾತು ನಮ್ಮ ಜನರ ನಡುವೆ ಚಾಲ್ತಿ ಯಲ್ಲಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಒಂದಷ್ಟು ವರಸೆಗಳನ್ನು ನೋಡಿ ದಾಗ ಈ ಮಾತು ಯಾರಿಗಾದರೂ ನೆನಪಾದರೆ ಅದೇನೂ ಅಚ್ಚರಿಯಲ್ಲ. ತನ್ನನ್ನು ಚುನಾ ಯಿಸಿದ ಜನರ ಹಿತಾಸಕ್ತಿಯನ್ನು ಕಾಪಾಡಬೇಕಾದ್ದು ಪ್ರತಿಯೊಬ್ಬ ಜನನಾಯಕನ ಆದ್ಯ ಕರ್ತವ್ಯ ಆಗಬೇಕು ಎಂಬುದೇನೋ ನಿಜ; ಆದರೆ ಜನಕಲ್ಯಾಣದ ಹುಸಿ ಹಣೆಪಟ್ಟಿಯನ್ನು ಲಗತ್ತಿಸಿಕೊಂಡು, ಕುತ್ಸಿತ ಚಿಂತನೆಗಳ ನೆರವೇರಿಕೆಗೆ ಆತ ಇಳಿದಿದ್ದೇ ಆದಲ್ಲಿ, ಅದನ್ನು ಸರ್ವಥಾ ಸ್ವೀಕರಿಸಲಾಗದು.
ಪ್ರಸ್ತುತ ಟ್ರಂಪ್ ಮಹಾಶಯರು ತೊಡಗಿಸಿಕೊಂಡಿರುವುದು ಇಂಥ ‘ಸ್ವೀಕಾರಾರ್ಹವಲ್ಲದ’ ಕಾರ್ಯ ಗಳಲ್ಲೇ. ಅಮೆರಿಕಕ್ಕೆ ತೆರಳುವವರು ಪಡೆಯಬೇಕಾಗುವ ವೀಸಾದ ವಾರ್ಷಿಕ ಶುಲ್ಕವನ್ನು ಅತಿರೇಕದ ಮಟ್ಟಕ್ಕೆ ಏರಿಸಿ ಹಲವರ ಹುಬ್ಬೇರಿಸಿದ್ದ ಟ್ರಂಪ್, ಕೆಲ ತಿಂಗಳ ಹಿಂದೆ ‘ಸುಂಕ ಸಮರ’ಕ್ಕೂ ಮುಂದಾ ಗಿದ್ದನ್ನು ಜಗತ್ತೇ ಕಂಡಿದೆ.
ಇದನ್ನೂ ಓದಿ: Vishwavani Editorial: ವೆನೆಜುವೆಲಾಕ್ಕೆ ಬೇಕು ಶ್ರೇಷ್ಠ ಆಡಳಿತ
ಅಮೆರಿಕಕ್ಕೆ ಆಮದಾಗುವ ಚೀನಾ ಮುಂತಾದ ಅನ್ಯದೇಶಗಳ ಸರಕುಗಳ ಮೇಲೆ ಅತಿರೇಕದ ಸುಂಕ ಹೇರಿ ಕೇಕೆಹಾಕಿದ ಟ್ರಂಪ್, ‘ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಿದೆ’ ಎಂಬ ಕಾರಣವನ್ನು ಮುಂದುಮಾಡಿ ಭಾರತದ ಉತ್ಪನ್ನಗಳಿಗೂ ಇದೇ ಕ್ರಮವನ್ನು ಅನ್ವಯಿಸಿದ್ದರು. ಇದಕ್ಕೆ ಭಾರತ ಸೊಪ್ಪುಹಾಕಲಿಲ್ಲ. ಈಗ ಸದರಿ ಸುಂಕವನ್ನು ಬರೋಬ್ಬರಿ ಶೇ.500ರ ಮಟ್ಟಕ್ಕೆ ಏರಿಸುವ, ತನ್ಮೂಲಕ ಭಾರತದ ಮೇಲೆ ‘ವಾಣಿಜ್ಯಿಕ ನಿರ್ಬಂಧ’ ಹೇರುವ ದುಸ್ಸಾಹಸಕ್ಕೆ ಟ್ರಂಪ್ ಕೈಹಾಕಿದ್ದಾರೆ.
ಈ ಸಂಬಂಧದ ವಿಧೇಯಕಕ್ಕೆ ಸಹಿ ಹಾಕಿರುವ ಅವರು ಸದ್ಯದಲ್ಲೇ ಅಮೆರಿಕದ ಸಂಸತ್ತಿನಲ್ಲಿ ಅದನ್ನು ಮಂಡಿಸಲಿದ್ದಾರೆ. ಅದು ಅಂಗೀಕಾರಗೊಳ್ಳುತ್ತದೋ ಬಿಡುತ್ತದೋ ಎಂಬುದನ್ನು ಕಾಲಕ್ಕೆ ಬಿಡೋಣ. ಆದರೆ, ಇಂಥ ಐಲುದೊರೆಗಳು ಸಿಂಹಾಸನದಲ್ಲಿ ಕೂತಿದ್ದರೆ ಮಿಕ್ಕವರು ಎಷ್ಟೊಂದು ಮುಜುಗರ ಅನುಭವಿಸಬೇಕಾಗುತ್ತದೆಯಲ್ಲಾ? ಎಂಬುದು ಸದ್ಯದ ಪ್ರಶ್ನೆ. ಇದಕ್ಕೆ ಅಮೆರಿಕನ್ನರ ಬಳಿಯೂ ಉತ್ತರವಿದ್ದಂತಿಲ್ಲ!