ರಾಜ್ಯ ಸಚಿವ ಸಂಪುಟ ವಿಸ್ತರಣೆ ಇಂದು ನಾಳೆ ಎಂದು ಮುಂದೆ ಹೋಗುತ್ತಲೇ ಇದೆ. ಸಿಎಂ ಡಿಕೆ ಶಿವಕುಮಾರ್ ಅವರು ಸಿದ್ಧಪಡಿಸಿದ ಪಟ್ಟಿಯ ಜೊತೆಗೆ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರ ಪಟ್ಟಿಗಳು ಹಾಗೂ ಹೈಕಮಾಂಡ್‌ನದೇ ಆದ ಒಂದು ಪಟ್ಟಿಯೂ ಇರುವುದರಿಂದ ಒಮ್ಮತಕ್ಕೆ ಬರುವಲ್ಲಿ ತಡವಾಗುತ್ತಿದ್ದು, ವಿಸ್ತರಣೆ ವಿಳಂಬವಾಗುತ್ತಿದೆ.
ಸದ್ಯ 20 ಸಚಿವ ಸ್ಥಾನಗಳು ಖಾಲಿ ಇವೆ. 34 ಸದಸ್ಯರ ಸಾಮರ್ಥ್ಯ ಇರುವ ಸಚಿವ ಸಂಪುಟದಲ್ಲಿ ಕೇವಲ 13 ಮಂದಿ ಸಚಿವರಷ್ಟೇ ಖಾತೆಗಳ ಹೊಣೆಗಾರಿಕೆ ವಹಿಸಿ ಕೆಲಸ ನಿರ್ವಹಿಸುತ್ತಿದ್ದಾರೆ. ಒಬ್ಬೊಬ್ಬರ ಬಳಿ ಎರಡು ಮೂರು ಖಾತೆಗಳಿವೆ. ಕೃಷಿ ಮತ್ತು ಶಿಕ್ಷಣದಂಥ ಪ್ರಮುಖ ಇಲಾಖೆಗಳಿಗೆ ಇನ್ನೂ ಪೂರ್ಣಾವಧಿ ಸಚಿವರ ನೇಮಕ ಆಗಿಲ್ಲ. ಈ ಖಾತೆಗಳು ಮುಖ್ಯಮಂತ್ರಿಯ ಬಳಿಯೇ ಇವೆ. ಜಿಲ್ಲೆಗೊಬ್ಬರಂತೆ ಉಸ್ತುವಾರಿ ಸಚಿವರನ್ನು ನೇಮಿಸಬೇಕಾಗಿತ್ತು.
ಇದನ್ನೂ ಓದಿ: Vishwavani Editorial: ಕಾವೇರಿ ನೀರಿಗೆ ಮತ್ತೆ ಕಿಚ್ಚು
ಪ್ರಸ್ತುತ ಒಬ್ಬೊಬ್ಬರ ಬಳಿ ಎರಡು ಮೂರು ಜಿಲ್ಲೆಗಳಿವೆ. ಇವೆಲ್ಲವೂ ಸರಕಾರದ ಆಡಳಿತಾತ್ಮಕ ಸಾಮರ್ಥ್ಯವನ್ನು ಸದ್ಯಕ್ಕೆ ಕುಂಠಿತಗೊಳಿಸಿವೆ. ಈ ಸಚಿವ ಸಂಪುಟ ಮಾತುಕತೆಯಲ್ಲಿಯೇ ಕಾಂಗ್ರೆಸ್ ನಾಯಕರು ರಾಜ್ಯದ ಬರ ಪರಿಸ್ಥಿತಿಯನ್ನೂ ಮರೆತು ದಿಲ್ಲಿಯಲ್ಲಿ ನಾಲ್ಕಾರು ದಿನಗಳಿಂದ ಶಿಬಿರ ಹೂಡಿದ್ದಾರೆ. ಇದು ದಿಲ್ಲಿಗೆ ಸಿಎಂ ಸೇರಿದಂತೆ ಕಾಂಗ್ರೆಸ್ ನಾಯಕರ ಈ ವಿಚಾರದಲ್ಲಿ ಮೂರನೇ ಭೇಟಿಯಾಗಿದೆ.
ಒಕ್ಕಲಿಗ, ಮುಸ್ಲಿಂ, ಲಿಂಗಾಯತ, ಪರಿಶಿಷ್ಟ ಪ್ರಾತಿನಿಧ್ಯ ಎಂಬೆಲ್ಲ ಲೆಕ್ಕಾಚಾರಗಳಲ್ಲಿ ಹೊತ್ತು ಕಳೆಯುತ್ತಿರುವ ನಾಯಕರಿಗೆ, ರಾಜ್ಯದ ನೈಜ ಸನ್ನಿವೇಶದ ಅರಿವೇ ಇದ್ದಂತಿಲ್ಲ. ಸರಕಾರದ ಮುಂದೆ ಈಗಿರುವ ಕಠಿಣ ಸವಾಲು ಎಂದರೆ ರಾಜ್ಯದಲ್ಲಿರುವ ಬರ ಪರಿಸ್ಥಿತಿ. ಜೂನ್‌ನಲ್ಲಿ ಶೇ.30ರಷ್ಟೇ ಮಳೆಯಾಗಿತ್ತು. ಜುಲೈನಲ್ಲಿ ಸ್ವಲ್ಪ ಮಳೆ ಬಂದಿದ್ದರೂ ಅಣೆಕಟ್ಟುಗಳು ಅರ್ಧದಷ್ಟೂ ತುಂಬಿಲ್ಲ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗದೆ ಜಲಾಶಯಗಳು ಬರಿದಾಗಿ ಇದೀಗ ತಮಿಳು ನಾಡಿಗೆ ನೀರು ಬಿಡಬೇಕಾದ ಜಲ ಸಂಕಟವೂ ಬಾಧಿಸುತ್ತಿದೆ.
ಎಸ್‌ಐಆರ್ ಪ್ರಕ್ರಿಯೆ ಸಮರ್ಪಕವಾಗಿಲ್ಲ. ಆ ಕುರಿತು ಧ್ವನಿಯೆತ್ತಲೂ ಸಚಿವರಿಲ್ಲ. ಎಲ್ಲರೂ ತನ್ನ ಸ್ಥಾನ ಭದ್ರಪಡಿಸುವಿಕೆಯಲ್ಲಿ ಬ್ಯುಸಿಯಾಗಿದ್ದಾರೆ. ಸಂಪುಟ ಪೂರ್ಣ ಪ್ರಮಾಣದಲ್ಲಿ ರಚನೆ ಯಾಗದೆ, ಸಚಿವರಿಲ್ಲದೆ ಯಾವ ಇಲಾಖೆಯೂ ಚಲಿಸುವುದಿಲ್ಲ. ಬರ ಪರಿಸ್ಥಿತಿಯ ನಿರ್ವಹಣೆಯಲ್ಲಿ ಪೂರ್ತಿಯಾಗಿ ಅಧಿಕಾರಿಗಳಿಗೆ ಬಿಡಲು ಸಾಧ್ಯವಿಲ್ಲ. ಸಂಪುಟ ವಿಸ್ತರಣೆ ಎಂಬುದು ಬರೀ ಕಾಂಗ್ರೆಸ್‌ನ ವಿಷಯವಲ್ಲ, ಅದು ರಾಜ್ಯಕ್ಕೆ ಸಂಬಂಧಿಸಿದ ಆಡಳಿತಾತ್ಮಕ ಸಂಗತಿ. ತಕ್ಷಣ ಸಂಪುಟ ವಿಸ್ತರಣೆ ಯಾಗಿ, ಸಚಿವರು ರಂಗಕ್ಕಿಳಿಯಲಿ.