ರಾಜ್ಯದ ಉದ್ಯಾನಗಳು ಮತ್ತು ತೋಟಗಾರಿಕೆ ಫಾರ್ಮ್‌ಗಳ ಗರಿಷ್ಠ ಶೇ.೫ರಷ್ಟು ಭೂಮಿಯನ್ನು ಸಾರ್ವಜನಿಕ ಮೂಲಸೌಕರ್ಯ ಹಾಗೂ ಕೃಷಿ ಆಧಾರಿತ ಯೋಜನೆಗಳಿಗೆ ಬಳಸಲು ಅವಕಾಶ ಕಲ್ಪಿಸುವ ’ಕರ್ನಾಟಕ ಸರಕಾರದ ಉದ್ಯಾನವನಗಳ ಸಂರಕ್ಷಣೆ ತಿದ್ದುಪಡಿ ವಿಧೇಯಕ-2026’ಕ್ಕೆ ವಿಧಾನಸಭೆ ಮತ್ತು ವಿಧಾನಪರಿಷತ್ತಿನಲ್ಲಿ ತರಾತುರಿಯಲ್ಲಿ, ಯಾವುದೇ ಚರ್ಚೆಯಿಲ್ಲದೆ ಅನುಮೋದನೆ ನೀಡಲಾಗಿದೆ. ಪ್ರತಿಪಕ್ಷಗಳ ವಿರೋಧ, ಗದ್ದಲದ ನಡುವೆಯೇ ಈ ವಿಧೇಯಕವನ್ನು ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಅಂಗೀಕರಿಸಿದ್ದು ಒಂದು ಚೋದ್ಯವೇ ಸರಿ.
ಪಾರ್ಕ್‌ಗಳ ಶೇ.5ರಷ್ಟು ಭೂಮಿಯನ್ನು ಮಾರಾಟ ಮಾಡಲು ಗೇಣಿ, ದೇಣಿಗೆ, ವಿನಿಮಯ, ಅಡಮಾನ ಅಥವಾ ಬೇರ್ಯಾವುದೇ ರೀತಿ ಪರಭಾರೆ ಮಾಡಲು ಇದರಿಂದ ರಾಜ್ಯ ಸರಕಾರಕ್ಕೆ ಅವಕಾಶವಾಗುತ್ತದೆ. ಹೀಗೆ ಪಾರ್ಕ್‌ಗಳಿಂದ ಕತ್ತರಿಸಿ ಕಸಿಯಲಾಗುವ ಜಮೀನಿನ ಗತಿ ಮುಂದೆ ಏನಾಗುತ್ತದೆ ಎಂದು ತಿಳಿಯಲು ಹೆಚ್ಚು ಬುದ್ಧಿವಂತಿಕೆ ಬೇಡ. ಮೇಲ್ನೋಟಕ್ಕೆ ಇದನ್ನು ಸಾರ್ವ ಜನಿಕ ಮೂಲಸೌಕರ್ಯಕ್ಕೆ ಬಳಸಲಾಗುತ್ತದೆ. ಆದರೆ ಮೂಲಸೌಕರ್ಯ ಎಂಬ ಹೆಸರಿನ ಒಳಗೆ ಏನನ್ನೆಲ್ಲ ತೂರಿಸಲಾಗುತ್ತದೆ ಎಂದು ಕಲ್ಪಿಸುವುದು ಕಷ್ಟ.
ಇದನ್ನೂ ಓದಿ: Vishwavani Editorial: ಅಭಿವೃದ್ಧಿ ನಿರೀಕ್ಷೆಯಲ್ಲಿ ರೈಲ್ವೇ
ಬಹುಕೋಟಿ ಮಾಲ್‌ಗಳ ಪಕ್ಕದ ಸಾರ್ವಜನಿಕ ಉದ್ಯಾನದ ಜಾಗವನ್ನು ಕಸಿದುಕೊಂಡು ಪಾರ್ಕಿಂಗ್‌ಗೆ ಎಂದು ನಿಯೋಜಿಸಬಹುದು. ಲಾಲ್‌ಬಾಗ್‌ನ ಬಹು ಅಮೂಲ್ಯ ಪ್ರದೇಶವನ್ನು ಕಿತ್ತುಕೊಂಡು ಶ್ರೀಮಂತರು ಸಂಚರಿಸುವ ಟನೆಲ್ ರೋಡ್‌ಗೆ ಉಪಯೋಗಿಸಬಹುದು. ಆ ಟನೆಲ್ ರೋಡ್‌ನಲ್ಲಿ ದುಬಾರಿ ಟೋಲ್ ವಿಽಸಿ ಸರಕಾರದ ಆದಾಯಕ್ಕೆ ಇನ್ನೊಂದು ಮೂಲ ಕಲ್ಪಿಸ ಬಹುದು. ಆದರೆ ಈಗಾಗಲೇ ಅತ್ಯಂತ ಸೀಮಿತವಾಗಿರುವ ಉದ್ಯಾನವನಗಳ ಜಾಗ, ಕತ್ತರಿಸಿದರೆ ಮತ್ತ ಬರುವುದೇ ಇಲ್ಲ.
ಮಕ್ಕಳ ಆಟದ, ಹಿರಿಯ ನಾಗರಿಕರ ಸಂಜೆ ಮುಂಜಾನೆಗಳ ವಾಯುವಿಹಾರದ, ನಾಗರಿಕರ ಸ್ವಚ್ಛ ಉಸಿರಾಟದ ತಾಣಗಳಾದ ಈ ಹಸಿರಿನ ಮೂಲಗಳಿಗೆ ಬೀಳುವ ಕೊಡಲಿ, ಬೆಂಗಳೂರಿನ ಘನತೆಗೇ ಬೀಳುವ ಕೊಡಲಿಯೂ ಹೌದು. ರಾಜಧಾನಿ ಬೆಂಗಳೂರು ಉದ್ಯಾನವನಗಳ ನಗರಿ ಎಂದೇ ಹೆಸರಾಗಿದೆ. ಆದರೆ ಬೆಂಗಳೂರಿನ ಕೇವಲ 14 ಶೇಕಡ ಭಾಗ ಮಾತ್ರ ಹಸಿರಾಗಿದೆ. ಆರೋಗ್ಯಕರ ನಗರ ಎನಿಸಿಕೊಳ್ಳಬೇಕಾದರೆ ಶೇ.33ರಷ್ಟು ಹಸಿರು ಇರಬೇಕು. ವರ್ಷದಿಂದ ವರ್ಷಕ್ಕೆ ರಾಜದಾನಿಯ ಹಸಿರು ಪ್ರದೇಶ ಕುಸಿಯುತ್ತಲೇ ಹೋಗುತ್ತಿದೆ.
ರಸ್ತೆ ವಿಸ್ತರಣೆಗಾಗಿ, ಫ್ಲೈ-ಓವರ್‌ಗಳ ನಿರ್ಮಾಣಕ್ಕಾಗಿ ಮರಗಳ ಕಡಿತ ಅವ್ಯಾಹತವಾಗಿದೆ. ಕತ್ತರಿಸಿದ ಒಂದು ಮರದ ಬದಲಿಗೆ ಹತ್ತು ಗಿಡ ನೆಡಬೇಕು ಎಂಬ ನಿಯಮವನ್ನೂ ಪಾಲಿಸುವವರಿಲ್ಲ. ಇದನ್ನೆಲ್ಲ ಪ್ರಶ್ನಿಸುವವರೂ ಇಲ್ಲ. ರಾಜಕಾರಣಿಗಳೂ ತಮ್ಮ ಲಾಭ ಬಾಚುವುದರಲ್ಲಿ ಆಸಕ್ತರು. ಪ್ರಜೆಗಳ ಆರೋಗ್ಯದ ಬಗ್ಗೆ ಸರಕಾರಕ್ಕೆ ಯಾವ ಕಾಳಜಿಯೂ ಇದ್ದಂತಿಲ್ಲ.