ಅಳೆದೂ ತೂಗಿ ಕರ್ನಾಟಕದ ಕಾಂಗ್ರೆಸ್ ಸರಕಾರದ ಸಚಿವ ಸಂಪುಟ ವಿಸ್ತರಣೆಯಾಗಿದೆ. ಎರಡು ಮೂರು ಪಟ್ಟಿಗಳು, ಹೈಕಮಾಂಡ್ ಜತೆಗೆ ಸತತ ತಿಕ್ಕಾಟ, ಜಾತಿ ಪ್ರಾತಿನಿಧ್ಯದ ಲೆಕ್ಕಾಚಾರ, ಹಲವು ನಾಯಕರ ಒತ್ತಡಗಳು ಇವೆಲ್ಲದರ ಫಲಿತಾಂಶ ಈ ಸಂಪುಟ ರಚನೆಯಲ್ಲಿ ಕಾಣಿಸುತ್ತಿದೆ. ಡಿ.ಕೆ.ಶಿವಕುಮಾರ್ ಅವರ ಸಂಪುಟಕ್ಕೆ ಹೊಸದಾಗಿ 19 ಸಚಿವರ ಸೇರ್ಪಡೆಯಾಗಿದೆ. ಆದರೆ ಈ ಸಂಪುಟ ವಿಸ್ತರಣೆ ಎಲ್ಲವೂ ಸರಿಯಿಲ್ಲ ಎಂಬ ಸಂದೇಶವನ್ನು ರವಾನಿಸಿದಂತಿದೆ. ಪ್ರಮಾಣ ವಚನಕ್ಕೆ ಮುನ್ನ ಎರಡೆರಡು ಬಾರಿ ಪಟ್ಟಿ ಬದಲಾವಣೆಯಾಗಿದೆ.
ಪಟ್ಟಿಯಲ್ಲಿ ಹೆಸರಿದ್ದ ಏಕೈಕ ಶಾಸಕಿ ಗಾಯತ್ರಿ ಶಾಂತನಗೌಡ ಅವರ ಹೆಸರನ್ನು ಅಂತಿಮ ಕ್ಷಣದಲ್ಲಿ ಕೈಬಿಡಲಾಗಿದೆ. ಸಂಪುಟದಲ್ಲಿ ಮಹಿಳಾ ಪ್ರಾತಿನಿಧ್ಯವೇ ಇಲ್ಲ. ಮಹಿಳಾ ಮೀಸಲಾತಿಗೆ ಕಾಂಗ್ರೆಸ್ ವಿರೋಧವಾಗಿದೆ ಎಂದು ಬಿಜೆಪಿ ಮಾಡುತ್ತಿರುವ ಆರೋಪಕ್ಕೆ ಕಾಂಗ್ರೆಸ್‌ನ ಈ ನಡೆ ಇಂಬು ನೀಡುವಂತಿದೆ. ಸಂಪುಟ ರೇಸ್‌ನಲ್ಲಿದ್ದ ಹಿರಿಯ ಶಾಸಕರು ತಮ್ಮ ಕೈತಪ್ಪಿರುವುದಕ್ಕೆ ಬಹಿರಂಗ ವಾಗಿಯೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇವರ ಮುಂದಿನ ನಡೆ ಏನಿದೆಯೋ ಗೊತ್ತಿಲ್ಲ. ಸ್ಥಾನ ವಂಚಿತರಾದ ಹಲವರ ಬೆಂಬಲಿಗರು ಪ್ರತಿಭಟನೆ ಶುರು ಮಾಡಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೂ ಮುನಿಸು ಮೂಡಿದೆ ಎನ್ನಲಾಗಿದ್ದು, ಇದೂ ಕೂಡ ಸರಕಾರದ ಕಾರ್ಯವೈಖರಿ ಮೇಲೆ ಪರಿಣಾಮ ಬೀರಬಹುದು. ಸಮಾಧಾನದ ಸಂಗತಿಯೆಂದರೆ ಅಹಿಂದ ಸಮುದಾಯಗಳಿಗೆ ಸಿಂಹಪಾಲು ದೊರೆತಿದ್ದು, ಶೇ.65ರಷ್ಟು ಜನರಿಗೆ ಸಚಿವ ಸಂಪುಟದಲ್ಲಿ ಅವಕಾಶ ಸಿಕ್ಕಿದೆ. ಏಳು ಜಿಲ್ಲೆಗಳಿಗೆ ಶೂನ್ಯ ಸ್ಥಾನ. ಈ ನಡುವೆ ವಿಧಾನ ಪರಿಷತ್ ಸಭಾಪತಿ ಹಾಗೂ ಉಪಸಭಾಪತಿ ಹೆಸರುಗಳನ್ನು ಕಾಂಗ್ರೆಸ್ ಪ್ರಕಟಿಸಿದ್ದು, ಈ ಪ್ರಕ್ರಿಯೆ ಕಾನೂನುಬದ್ಧವಾಗಿಲ್ಲ ಎಂದು ಈಗಿನ ಸಭಾಪತಿಗಳೇ ಹೇಳಿದ್ದಾರೆ. ಇದು ವಿವಾದ ಆಗುವ ಸಾಧ್ಯತೆಯಿದೆ. ಆದರೆ, ಕೊನೆಗೂ ಪೂರ್ಣ ಪ್ರಮಾಣದ ಸಂಪುಟ ಸಿದ್ಧವಾಗಿರುವುದು ಸ್ವಾಗತಾರ್ಹ.
ಇನ್ನು ಬರ ಪರಿಹಾರ, ಆಡಳಿತಾತ್ಮಕ ಕಾರ್ಯಗಳಿಗೆ ಸಚಿವರಿಲ್ಲ ಎಂಬ ನೆಪ ಹೇಳುವಂತಿಲ್ಲ. ಇನ್ನಾದರೂ ಇಲಾಖೆ ಪಡೆದ ಸಚಿವರು ವಿಜಯೋತ್ಸವ, ಸನ್ಮಾನ, ಹೊಸ ನಿವಾಸ ಕಾರು ಇತ್ಯಾದಿ ಗಳಲ್ಲಿ ಹೊತ್ತು ಕಳೆಯದೆ ಕೆಲಸ ಶುರುಮಾಡಬೇಕು. ಬರಗಾಲದ ಪರಿಹಾರ ಕಾರ್ಯಕ್ರಮ ಗಳು ತರಾತುರಿಯಲ್ಲಿ ನಡೆಯಬೇಕಿವೆ. ಬಿಡದಿ ರೈತರ ಪ್ರತಿಭಟನೆ, ಕಾವೇರಿ ತಗಾದೆ ಮೊದಲಾದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕಿದೆ. ಚುನಾವಣೆಗೆ ಒಂದೂವರೆ ವರ್ಷ ಮಾತ್ರ ಉಳಿದಿದ್ದು, ಅಷ್ಟರಲ್ಲಿ ಪಕ್ಷದ ಹಾಗೂ ಸರಕಾರದ ವರ್ಚಸ್ಸನ್ನೂ ಹೆಚ್ಚಿಸಿಕೊಳ್ಳಬೇಕಿದೆ.