ಬಗ್ಗಿದವನಿಗೇ ಗುದ್ದು ಎಂಬುದು ಕಾವೇರಿ ನೀರಿನ ತಗಾದೆ ವಿಚಾರದಲ್ಲಿ ನಿಜವಾಗಿದೆ. ಕೇಂದ್ರ ಸರಕಾರ, ಪ್ರಾಧಿಕಾರ, ಕೋರ್ಟ್ ಎಲ್ಲವೂ ಕರ್ನಾಟಕವನ್ನು ಜಗ್ಗಿಸಿ ಕೆಳಗೆ ಬೀಳಿಸಿ ಮೇಲೆ ರುದ್ರನರ್ತನ ಮಾಡುತ್ತಿವೆ. ಕಾವೇರಿ ನೀರಿನ ಹಂಚಿಕೆ ವಿಚಾರದಲ್ಲಿ ಮಂಗಳವಾರ ರಾಜ್ಯಕ್ಕೆ ಎದುರಾದ ಎರಡು ಶಾಕ್‌ಗಳು ಇದಕ್ಕೆ ಸಾಕ್ಷಿ. ಈ ಹಿಂದೆ ಜುಲೈನಲ್ಲಿ, ಕರ್ನಾಟಕ ಮೇಕೆದಾಟು ಯೋಜನೆ ಆರಂಭಿಸಲು ತಮಿಳುನಾಡಿನ ಸಮ್ಮತಿ ಪಡೆಯಬೇಕಿಲ್ಲ ಎಂದು ಕೇಂದ್ರ ಜನಶಕ್ತಿ ಸಚಿವರು ರಾಜ್ಯಸಭೆಯಲ್ಲಿ ತಿಳಿಸಿದ್ದರು. ಆದರೆ ನಿನ್ನೆಯ ಬೆಳವಣಿಗೆಯಲ್ಲಿ, ಅದೇ ಸಚಿವರೇ ಉಲ್ಟಾ ಹೊಡೆದಿದ್ದು, ಕರ್ನಾಟಕ ನೂತನ ಯೋಜನೆ ಆರಂಭಿಸುವಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿಯಮಗಳಿಗೆ ಬದ್ಧವಾಗಿರಬೇಕು ಎಂದಿದೆ.
ಕೇಂದ್ರ ಸರಕಾರ ಯಾರ ಒತ್ತಡಕ್ಕೆ ಮಣಿದಿದೆಯೋ ಗೊತ್ತಿಲ್ಲ. ಹಾಗೇ, ತಮಿಳುನಾಡಿಗೆ ನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸಬೇಕು ಎನ್ನುವ ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶ ವನ್ನು ನಿರ್ವಹಣಾ ಪ್ರಾಧಿಕಾರ ಎತ್ತಿಹಿಡಿದಿದೆ. ಇಂದಿನಿಂದಲೇ (ಆ.12) ಪ್ರತಿದಿನ 12 ಸಾವಿರ ಕ್ಯೂಸೆಕ್ ಕಾವೇರಿ ನೀರನ್ನು ಹರಿಸಬೇಕಿದ್ದು, 15 ದಿನಗಳಲ್ಲಿ 15.50 ಟಿಎಂಸಿ ನೀರು ಬಿಡಬೇಕಿದೆ.
ಇದನ್ನೂ ಓದಿ: Vishwavani Editorial: ನ್ಯಾಯಾಂಗ ವರದಿಗಾರಿಕೆಯ ಸೂಕ್ಷ್ಮ
ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ತೀವ್ರ ಕ್ಷೀಣಿಸಿದ್ದು, ಪ್ರಮುಖ ಜಲಾಶಯಗಳಲ್ಲಿನ ನೀರು ರಾಜ್ಯದ ಜನರ ಕುಡಿಯುವ ನೀರಿನ ಅಗತ್ಯಕ್ಕೇ ಸಾಕಾಗುತ್ತಿಲ್ಲ ಎಂಬ ನೈಜ ಪರಿಸ್ಥಿತಿಯನ್ನು ಸಭೆ ಯಲ್ಲಿ ರಾಜ್ಯದ ಅಧಿಕಾರಿಗಳು ಸುದೀರ್ಘವಾಗಿ ವಿವರಿಸಿದ್ದರು. ಆದರೆ, ಕೃಷಿ ಚಟುವಟಿಕೆಗಳ ನೆಪವೊಡ್ಡಿ ನೀರಿಗಾಗಿ ಪಟ್ಟು ಹಿಡಿದಿದ್ದ ತಮಿಳುನಾಡಿನ ಪರವಾಗಿಯೇ ಪ್ರಾಧಿಕಾರ ತೀರ್ಮಾನ ಕೈಗೊಂಡಿದೆ.
ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಸತತವಾಗಿ ಆಗುತ್ತಿರುವ ಅನ್ಯಾಯಗಳ ಸಾಲಿಗೆ ಇದು ಹೊಸ ಸೇರ್ಪಡೆ. ಈಗಾಗಲೇ 9 ಟಿಎಂಸಿ ನೀರು ತಮಿಳುನಾಡಿಗೆ ಹರಿದುಹೋಗಿದೆ. ಜುಲೈ ಕೊನೆಯ ವಾರದಲ್ಲಿ ಸ್ವಲ್ಪ ಜೋರಾಗಿ ಸುರಿಯುವಂತೆ ಕಂಡ ಮಳೆ ಮತ್ತೆ ವಿರಳವಾಗಿದೆ.
ಹೀಗಾಗಿ, ಕಾವೇರಿ ಜಲಾನಯನ ಪ್ರದೇಶದಿಂದ ಸಾಕಷ್ಟು ನೀರು ಈಗ ಜಲಾಶಯ ಸೇರುತ್ತಿಲ್ಲ. ಹೀಗಾಗಿ ಜಲಾಶಯಗಳ ಒಡಲು ಮತ್ತೆ ಬರಿದಾಗುವ ಭೀತಿ ಎದುರಾಗಿದೆ. ಇದು ಸಂಕಷ್ಟ ವರ್ಷ. ನೀರು ಹಂಚಿಕೆಗೆ ಸಂಕಷ್ಟ ಸೂತ್ರವೊಂದು ಬೇಕು ಎಂದು ರಾಜ್ಯ ಪಟ್ಟು ಹಿಡಿದು ನಿಲ್ಲುವವರೆಗೆ ಇಂಥ ಅನ್ಯಾಯ ನಮಗೆ ಆಗುತ್ತಲೇ ಇರುತ್ತದೆ. ಕಾವೇರಿ ಹೋರಾಟದ ಕಿಚ್ಚು ಮತ್ತೆ ಉಲ್ಬಣಿಸ ಲಿದ್ದು, ಸರಕಾರ ಇದನ್ನು ಹೇಗೆ ನಿಭಾಯಿಸಲಿದೆಯೋ ನೋಡಬೇಕು.