ಮೇಕೆದಾಟು ಕುಡಿಯುವ ನೀರಿನ ಯೋಜನೆ ಕೈಗೊಳ್ಳಲು ನೆರೆ ರಾಜ್ಯಗಳ ಅನುಮತಿ ಕರ್ನಾಟಕಕ್ಕೆ ಬೇಕಿಲ್ಲ’ ಎಂದು ಕೇಂದ್ರ ಸರಕಾರ ರಾಜ್ಯಸಭೆಯಲ್ಲಿ ಮೊನ್ನೆ ಉತ್ತರ ನೀಡಿದ್ದು, ನಿಟ್ಟುಸಿರು ಬಿಡುತ್ತಿರುವಾಗಲೇ ರಾಜ್ಯಕ್ಕೆ ಮತ್ತೊಂದು ಹೊಡೆತ ಬಿದ್ದಿದೆ. ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 3500 ಕ್ಯುಸಕ್ ನೀರು ಹರಿಸುವಂತ ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸು ಮಾಡಿದೆ. ಸಮಿತಿಯ ಈ ಹೊಸ ನಿರ್ದೇಶನದಿಂದಾಗಿ ರಾಜ್ಯವು ಮುಂದಿನ 15 ದಿನಗಳಲ್ಲಿ ತಮಿಳುನಾಡಿಗೆ ಒಟ್ಟು 4.56 ಟಿಎಂಸಿ ನೀರನ್ನು ಹರಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಬರ ಹಾಗೂ ನೀರಿನ ಕೊರತೆಯಿಂದ ತತ್ತರಿಸುತ್ತಿರುವ ರಾಜ್ಯಕ್ಕೆ ಇದು ಮಾರಕ ಆಘಾತವೇ ಸರಿ. ರಾಜ್ಯದ ಜಲಾಶಯಗಳಲ್ಲಿ ಈಗಾಗಲೇ ಕುಡಿಯುವ ನೀರು ಮತ್ತು ಕೃಷಿಗೆ ನೀರಿನ ಅಭಾವವಿರು ವಾಗ, ಈ ಪ್ರಮಾಣದ ನೀರನ್ನು ಹೊರಗೆ ಬಿಡುವುದು ಜಲಾಶಯಗಳ ಸಂಗ್ರಹದ ಮೇಲೆ ತೀವ್ರ ಪರಿಣಾಮ ಬೀರಲಿದೆ. ಈ ಶಿಫಾರಸನ್ನು ಪ್ರಶ್ನಿಸಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ನಿರ್ವಹಣಾ ಪ್ರಾಧಿಕಾರದ ನಿರ್ಧಾರ ಅಂತಿಮ.
ಇದನ್ನೂ ಓದಿ: Viswhavani Editorial: ರಾಜ್ಯಕ್ಕೆ ಅನ್ಯಾಯದ ಸರಣಿ
ಪ್ರಾಧಿಕಾರ ಕೂಡ ನೀರು ಹರಿಸಿ ಎಂದರೆ ಕರ್ನಾಟಕ ನೀರು ಬಿಡಲೇಬೇಕಿದೆ. ಆದರೆ ಕಾವೇರಿ ಕಣಿವೆ ನಾಲ್ಕು ಪ್ರಮುಖ ಜಲಾಶಯಗಳಲ್ಲಿ ನೀರಿಲ್ಲ. ಕೃಷ್ಣರಾಜಸಾಗರ, ಕಬಿನಿ, ಹೇಮಾವತಿ ಹಾಗೂ ಹಾರಂಗಿ ಅಣೆಕಟ್ಟು ಗಳಲ್ಲಿ ಒಟ್ಟು ಸೇರಿಸಿದರೆ ಶೇ.55ರಷ್ಟೂ ನೀರು ತುಂಬಿಲ್ಲ. ಒಟ್ಟಾರೆ 63.23 ಟಿಎಂಸಿ ನೀರಿದೆ.
ಕಳೆದ ವರ್ಷ ಈ ಹೊತ್ತಿಗೆ 108.68 ಟಿಎಂಸಿ ನೀರಿತ್ತು. ಒಟ್ಟಾರೆ ಸಾಮರ್ಥ್ಯ 114.57 ಟಿಎಂಸಿ. ಮಳೆ ಕಡಿಮೆ ಇರುವುದರಿಂದ ಹರಿದು ಬರುತ್ತಿರುವ ನೀರಿನ ಸಾಮರ್ಥ್ಯ 12892 ಕ್ಯೂಸೆಕ್, ಇದು ಸಾಲದು. ಈಗ ನೀರು ತಮಿಳುನಾಡಿಗೆ ಕಳಿಸಿದರೆ ಮುಂದಿನ ದಿನಗಳಲ್ಲಿ ರಾಜ್ಯದ ನಗರಗಳಲ್ಲಿ ಕುಡಿಯುವ ನೀರಿಗೆ ತತ್ವಾರ ಆಗಲಿದೆ.
ಮುಖ್ಯವಾಗಿ ಕೆಆರ್‌ಎಸ್ ಜಲಾಶಯದಲ್ಲಿ 49.45 ಟಿಎಂಸಿ ಸಂಗ್ರಹ ಸಾಮರ್ಥ್ಯವಿದ್ದು, ಕೇವಲ 17.04 ಟಿಎಂಸಿ ಮಾತ್ರವಿದೆ. ಕಾವೇರಿ ನೀರು ಹಂಚಿಕೆಗೆ ಸಂಕಷ್ಟ ಸೂತ್ರವೊಂದು ಬೇಕು ಎಂಬುದು ಬಹು ವರ್ಷಗಳ ಬೇಡಿಕೆ. ಆದರೆ ಈ ಬೇಡಿಕೆಗೆ ಯಾವತ್ತೂ ಮನ್ನಣೆ ದೊರೆತಿಲ್ಲ. ಇದರಿಂದ ಸಂಕಷ್ಟಕ್ಕೆ ಒಳಗಾಗುತ್ತಿರುವುದು ಮಾತ್ರ ಕರ್ನಾಟಕದ ರೈತರು. ಈಗಾಗಲೇ ಅವರು ಬರ ನಿಮಿತ್ತ ದಿಂದ ಹೆಚ್ಚು ನೀರು ಬೇಡುವ ಬೆಳೆಗಳನ್ನು ಕೈಬಿಟ್ಟಿದ್ದಾರೆ. ನಾವು ಇನ್ನೂ ಎಷ್ಟು ತ್ಯಾಗ ಮಾಡಬೇಕು?