ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ವಲಸಿಗರ ಸಂಖ್ಯೆ ಗಾಬರಿ ಹುಟ್ಟಿಸುವಂತಿರುವು ದನ್ನು ಗೃಹ ಇಲಾಖೆಯ ಅಂಕಿ ಅಂಶಗಳು ಬಹಿರಂಗಪಡಿಸಿವೆ. ಬೆಂಗಳೂರು ಸೇರಿ ರಾಜ್ಯಾದ್ಯಂತ ಒಟ್ಟು 13,675 ಅಕ್ರಮ ವಿದೇಶಿ ವಲಸಿಗರು ಇರುವುದನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಇವರಲ್ಲಿ 10,650 ಮಂದಿ ಬೆಂಗಳೂರಿನ ನೆಲೆಸಿರುವುದು ಗಮನಾರ್ಹವಾಗಿದೆ.
ಇದೊಂದು ಆತಂಕಪಡುವ ವಿಚಾರ. ಇನ್ನುಳಿದ ಜಿಲ್ಲೆಗಳಲ್ಲಿಯೂ ನೂರಾರು ಮಂದಿ ಪತ್ತೆಯಾಗಿ ದ್ದಾರೆ. ಕಳೆದ ಒಂದು ವಾರದಿಂದ ಬೆಂಗಳೂರು ಪೊಲೀಸರು ನಗರದ ವಿವಿಧೆಡೆ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಇದುವರೆಗೆ 71 ಶಂಕಿತ ಬಾಂಗ್ಲಾ ಪ್ರಜೆಗಳನ್ನು ವಶಕ್ಕೆ ಪಡೆಯ ಲಾಗಿದೆ. ಇದು ದಾಖಲಾದ ಅಂಕಿ ಅಂಶ. ಆದರೆ ವಿವಿಧ ಸ್ಲಂಗಳು ಹಾಗೂ ಕಟ್ಟಡ ನಿರ್ಮಾಣ ಪ್ರದೇಶಗಳಲ್ಲಿ ಅಡಗಿಕೊಂಡಿರುವ ವಲಸಿಗರು ಇನ್ನಷ್ಟು ಇರಬಹುದು. ಈ ಅಕ್ರಮ ನುಸುಳುಕೋರರು ಸುಮ್ಮನಿಲ್ಲ.
ಇದನ್ನೂ ಓದಿ: Vishwavani Editorial: ಮುತ್ತತ್ತಿ ದುರ್ಘಟನೆಯ ಪಾಠ
ಬದಲಾಗಿ ನಕಲಿ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪಾಸ್‌ಪೋರ್ಟ್, ವೋಟರ್ ಕಾರ್ಡ್ ಇತ್ಯಾದಿ ಪಡೆದುಕೊಳ್ಳುತ್ತಿದ್ದಾರೆ. ಇಂತಹ ನಕಲಿ ದಾಖಲೆಗಳನ್ನು ಬಳಸಿಕೊಂಡು ಮಾನವ ಕಳ್ಳಸಾಗಣೆ ಯಂತಹ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರು ಇದ್ದಾರೆ. ಇನ್ನು ಹಲವರು ವ್ಯವಹಾರ, ಶಿಕ್ಷಣ, ವೈದ್ಯಕೀಯ ಪ್ರವಾಸ ಹೀಗೆ ವಿವಿಧ ಮಾದರಿಯ ವೀಸಾಗಳನ್ನು ಪಡೆದು ಬರುತ್ತಾರೆ.
ವೀಸಾ ಅವಧಿ ಮುಗಿದರೂ ಅವರ ದೇಶಕ್ಕೆ ಹಿಂತಿರುಗದೆ ಇಲ್ಲಿಯೇ ಅಕ್ರಮವಾಗಿ ನೆಲೆಸುತ್ತಾರೆ. ಅಕ್ರಮ ವಿದೇಶಿ ವಲಸಿಗರ ಪೈಕಿ ಇದುವರೆಗೂ ಬೆಂಗಳೂರಿನಲ್ಲಿಯೇ 400 ಮಂದಿಯನ್ನು ಪತ್ತೆ ಹಚ್ಚಿ ಗಡಿಪಾರು(ಡಿ-ಪೋರ್ಟ್) ಮಾಡಲಾಗಿದೆ. ಇನ್ನೂ ಹಲವರು ಕಾನೂನಿನ ಕಣ್ಣಿಗೆ ಮಣ್ಣೆರಚಿ ಧೈರ್ಯವಾಗಿ ನ್ಯಾಯಾಲಯಗಳಲ್ಲಿ ಜಾಮೀನು ಕೋರುತ್ತಿರುವುದು ಅತ್ಯಂತ ಕಳವಳಕಾರಿ ಬೆಳವಣಿಗೆ. ಇಲ್ಲಿ ಬೇರೂರಿದವರು ಮಾದಕವಸ್ತು ಮಾರಾಟ, ವೇಶ್ಯಾವಾಟಿಕೆ ಮತ್ತು ಸೈಬರ್ ಕ್ರೈಂ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎನ್ನುತ್ತವೆ ಗೃಹ ಇಲಾಖೆ ಮೂಲಗಳು.
ಪತ್ತೆಯಾದ ಇಂಥ ವಿದೇಶೀಯರನ್ನು ಎಕ್ಸಿಟ್ ಪರ್ಮಿಟ್ ಪಡೆಯುವವರೆಗೂ ಇಡಲು ಒಂದೇ ಒಂದು ನಿರ್ಬಂಧ ಕೇಂದ್ರವಿದ್ದು, ಅದರ ಸಾಮರ್ಥ್ಯ 40 ಮಂದಿ ಮಾತ್ರ. ಈ ಅಕ್ರಮ ವಲಸಿಗರು ಯಾವತ್ತೂ ರಾಜ್ಯದ, ದೇಶದ ಭದ್ರತೆಗೆ ಆತಂಕ ಒಡ್ಡುವವರೇ ಆಗಿದ್ದಾರೆ. ಮೇಲೆ ಕಾಣಿಸಿದ ಅಂಕಿ ಅಂಶಗಳು ಬರೀ ತೋರಿಕೆ. ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಇರಬಹುದಾದ ವಲಸಿಗರು ನಮ್ಮ ದೇಶದ ಭದ್ರತೆಗೆ ಆತಂಕ ಒಡ್ಡುವ ಮೊದಲೇ ಅವರನ್ನು ಪತ್ತೆ ಹಚ್ಚಿ ಗಡೀಪಾರು ಮಾಡಬೇಕು. ಅಪರಾಧ ಕೃತ್ಯಗಳಲ್ಲಿ ತೊಡಗಿದವರ ಮೇಲೆ ಕಠಿಣ ಕ್ರಮಗಳಾಗಬೇಕು.