ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದಸರಾ ಟಿಕೆಟ್ ಗೊಂದಲ

ಅಕ್ಟೋಬರ್ 11ರಿಂದ 21ರವರೆಗೆ ಮೈಸೂರಿನಲ್ಲಿ ನಡೆಯಲಿರುವ ನಾಡಹಬ್ಬ ದಸರಾದ ಉತ್ಸವ ಗಳಿಗೆ ಸಾರ್ವಜನಿಕರಿಗೆ ಪ್ರವೇಶ ನೀಡುವ ಟಿಕೆಟ್‌ಗಳ ಬುಕ್ಕಿಂಗ್ ಆರಂಭವಾಗಿದೆ. 6500 ರೂಪಾಯಿ ಬೆಲೆಯ ಗೋಲ್ಡನ್ ಟಿಕೆಟ್ ಕೂಡ ದೊರೆಯುತ್ತಿದ್ದು, ಉಳಿದಂತೆ ಜಂಬೂ ಸವಾರಿ, ಪಂಜಿನ ಕವಾಯತು ಇತ್ಯಾದಿಗಳಿಗೆ ಬೇರೆ ಬೇರೆ ದರದ ಟಿಕೆಟ್ ಗಳಿವೆ.

ಅಕ್ಟೋಬರ್ 11ರಿಂದ 21ರವರೆಗೆ ಮೈಸೂರಿನಲ್ಲಿ ನಡೆಯಲಿರುವ ನಾಡಹಬ್ಬ ದಸರಾದ ಉತ್ಸವ ಗಳಿಗೆ ಸಾರ್ವಜನಿಕರಿಗೆ ಪ್ರವೇಶ ನೀಡುವ ಟಿಕೆಟ್‌ಗಳ ಬುಕ್ಕಿಂಗ್ ಆರಂಭವಾಗಿದೆ. 6500 ರೂಪಾಯಿ ಬೆಲೆಯ ಗೋಲ್ಡನ್ ಟಿಕೆಟ್ ಕೂಡ ದೊರೆಯುತ್ತಿದ್ದು, ಉಳಿದಂತೆ ಜಂಬೂ ಸವಾರಿ, ಪಂಜಿನ ಕವಾಯತು ಇತ್ಯಾದಿಗಳಿಗೆ ಬೇರೆ ಬೇರೆ ದರದ ಟಿಕೆಟ್ ಗಳಿವೆ.

ಕಳೆದ ಬಾರಿ, ಗೋಲ್ಡನ್ ಪಾಸ್ ಪಡೆದವರು ಕಾರ್ಯಕ್ರಮದ ವೇಳೆಗೆ ಅರಮನೆ ಆವರಣಕ್ಕೆ ಬರುವಷ್ಟರಲ್ಲಿ ಅವರಿಗಾಗಿ ಮೀಸಲಾಗಿದ್ದ ಆಸನಗಳನ್ನು ಯಾರು ಯಾರೋ ಆಕ್ರಮಿಸಿ ಕೊಂಡಿದ್ದರು. ಗೋಲ್ಡನ್ ಟಿಕೆಟ್‌ಗೆ ಈ ಬಾರಿ ಆಸನ ಸಂಖ್ಯೆ ನೀಡಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ. ಅದನ್ನು ಕಡ್ಡಾಯವಾಗಿ ನಿರ್ವಹಿಸುವುದು ಮುಖ್ಯ. ವಿವಿಐಪಿ ಪಾಸ್‌ಗಳನ್ನು ಈ ಬಾರಿ ಕೈ ಬಿಡಲಾಗಿದೆಯೇ ಇಲ್ಲವೇ ಎಂಬುದು ತಿಳಿದು ಬಂದಿಲ್ಲ.

ಇದನ್ನೂ ಓದಿ: Vishwavani Editorial: ಮತ್ತೆ ಕಾವೇರಿ ಅನ್ಯಾಯ

ಕಳೆದ ಬಾರಿ ಟಿಕೆಟ್, ಪಾಸ್‌ಗಳ ವಿಚಾರದಲ್ಲಿ ಭಾರಿ ಗೊಂದಲ ಸಂಭವಿಸಿತ್ತು. 6500 ಟಿಕೆಟ್ ಬೆಲೆಯೇ ಸಾಮಾನ್ಯರಿಗೆ ದುಬಾರಿ. ಆದರೆ ದಸರಾದ ಎಲ್ಲ ಉತ್ಸವಗಳನ್ನೂ ಕಾರ್ಯಕ್ರಮಗಳನ್ನು ಇದರಲ್ಲಿ ವೀಕ್ಷಿಸಬಹುದು ಎಂಬುದು ಇದಕ್ಕೆ ಸಮರ್ಥನೆ. ಇಷ್ಟು ಬೆಲೆ ತೆತ್ತೂ ಕೂಡ ಸರಿಯಾದ ಆಸನ ಸಿಗದೆ, ಜಂಬೂಸವಾರಿಯನ್ನೋ ಪಂಜಿನ ಕವಾಯತನ್ನೋ ಸರಿಯಾಗಿ ವೀಕ್ಷಿಸಲಾಗದೆ ಮೋಸ ಹೋದ ಭಾವದಲ್ಲಿ ಕಳೆದ ವರ್ಷ ಸಾವಿರಾರು ಮಂದಿ ವಾಪಸಾಗಿದ್ದಾರೆ. ಈ ಬಾರಿಯೂ ಕೆಲವೇ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ದೊರಕುವ ವ್ಯವಸ್ಥೆ ಮಾಡಲಾಗಿದೆ. ಅವಶ್ಯಕತೆ ಉಳ್ಳವರಿಗೆ ಅದೂ ಸಿಗುತ್ತದೆಂಬ ಖಾತ್ರಿ ಇಲ್ಲ. ಕಳೆದ ಬಾರಿ ಪಾಸ್‌ಗಳು ಹಣವುಳ್ಳವರು ಮತ್ತು ಪ್ರಭಾವಿಗಳಿಗೆ ದೊರೆತಿದ್ದವು.

ವಿವಿಐಪಿ ಸಂಸ್ಕೃತಿ ರಾರಾಜಿಸಿತ್ತು. ವಿಐಪಿ ಪಾಸ್‌ಗಳು ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಮಾಯ ವಾಗಿರುತ್ತವೆ. ಅಧಿಕಾರಿಗಳು ಹಾಗೂ ರಾಜಕಾರಣಿಗಳು ಅವುಗಳನ್ನು ಮಂಗಮಾಯ ಮಾಡಿ ತಮ್ಮ ಕುಟುಂಬದವರ ಕೈ ಸೇರುವಂತೆ ಮಾಡುವುದರಲ್ಲಿ ಪಾರಂಗತರು. ಹೊರ ಜಿಲ್ಲೆಗಳಿಂದ ಬಂದವರು, ಕೊನೆಯ ಕ್ಷಣದಲ್ಲಿ ದಸರಾ ಪ್ರವಾಸ ಆಯೋಜಿಸಿಕೊಂಡವರು ನಿರಾಶೆಯಿಂದ ವಾಪಸಾಗಿದ್ದರು. ಇನ್ನು ದಸರಾ ಕವಿಗೋಷ್ಠಿಗಳಷ್ಟು ತೇಪೆ ಕಾರ್ಯಕ್ರಮಗಳು ಇನ್ಯಾವುದೂ ಇಲ್ಲ.

ಯಾರು ಯಾರೋ ಕವಿಗಳ ಹೆಸರಿನಲ್ಲಿ ಲಾಬಿ ಮಾಡಿ ಗೋಷ್ಠಿಯ ಸೀಟು ಗಿಟ್ಟಿಸಿಕೊಂಡು ಕೇಳುಗರ ಕಿವಿಗಳಿಗೆ ಬೈರಿಗೆ ಕೊರೆಯುತ್ತಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಕಲಾವಿದರಿಗೆ ಸೂಕ್ತ ಮನ್ನಣೆ, ಸಂಭಾವನೆ ದೊರೆಯುವುದು ಅಪರೂಪವಾಗಿದೆ. ಇದನ್ನೆಲ್ಲ ಸರಿಪಡಿಸದೆ ಉತ್ಸವ ಮಾಡುವುದು ‘ತೋಟ ಶೃಂಗಾರ, ಒಳಗೆ ಗೋಳಿಸೊಪ್ಪು’ ಎಂದಂತಾಗುತ್ತದೆ.