ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishwavani Editorial: ಎಥೆನಾಲ್ ಮಿಶ್ರಣದ ಗೊಂದಲ

ಎಥೆನಾಲ್ ಮಿಶ್ರಣದ ಪೆಟ್ರೋಲ್ ಬಳಕೆಯ ಬಗ್ಗೆ ಕೇಂದ್ರ ಸರಕಾರ ಹಲವು ಸಮರ್ಥನೆಗಳನ್ನು ನೀಡಿದೆ. ದೇಶಾದ್ಯಂತ ಪೆಟ್ರೋಲ್ ಬಳಕೆದಾರರಲ್ಲಿ ಹಬ್ಬಿರುವ ಪ್ರಶ್ನೆ, ಸಂಶಯ, ಆತಂಕಗಳನ್ನು ನಿವಾರಿಸುವ ಪ್ರಯತ್ನ ಮಾಡಿದೆ. ಒಂದೆಡೆ, ಇರಾನ್- ಅಮೆರಿಕ ನಡುವೆ ನಿಂತಿದ್ದ ಕದನ ಮತ್ತೆ ಉಲ್ಬಣಿಸಿದ್ದು, ಪರಿಣಾಮ ಶರವೇಗದಲ್ಲಿ ಕಚ್ಚಾ ತೈಲ ಬೆಲೆಯೂ ಏರುತ್ತಿದೆ. ಪೆಟ್ರೋಲ್- ಡೀಸೆಲ್ ಬೆಲೆಯೂ ಮತ್ತೆ ಹೊರೆಯಾಗುವ ಆತಂಕದಲ್ಲಿರುವುದು ನಿಜ.

ಎಥೆನಾಲ್ ಮಿಶ್ರಣದ ಪೆಟ್ರೋಲ್ ಬಳಕೆಯ ಬಗ್ಗೆ ಕೇಂದ್ರ ಸರಕಾರ ಹಲವು ಸಮರ್ಥನೆಗಳನ್ನು ನೀಡಿದೆ. ದೇಶಾದ್ಯಂತ ಪೆಟ್ರೋಲ್ ಬಳಕೆದಾರರಲ್ಲಿ ಹಬ್ಬಿರುವ ಪ್ರಶ್ನೆ, ಸಂಶಯ, ಆತಂಕಗಳನ್ನು ನಿವಾರಿಸುವ ಪ್ರಯತ್ನ ಮಾಡಿದೆ. ಒಂದೆಡೆ, ಇರಾನ್- ಅಮೆರಿಕ ನಡುವೆ ನಿಂತಿದ್ದ ಕದನ ಮತ್ತೆ ಉಲ್ಬಣಿಸಿದ್ದು, ಪರಿಣಾಮ ಶರವೇಗದಲ್ಲಿ ಕಚ್ಚಾ ತೈಲ ಬೆಲೆಯೂ ಏರುತ್ತಿದೆ. ಪೆಟ್ರೋಲ್- ಡೀಸೆಲ್ ಬೆಲೆಯೂ ಮತ್ತೆ ಹೊರೆಯಾಗುವ ಆತಂಕದಲ್ಲಿರುವುದು ನಿಜ.

ಪೆಟ್ರೋಲಿಯಂ ತೈಲದ ಮೇಲಿನ ನಮ್ಮ ಅವಲಂಬನೆಯು ಯಾವತ್ತಿದ್ದರೂ ಆತಂಕಕಾರಿ. ಸ್ವಾವ ಲಂಬನೆಗಾಗಿ ಎಲೆಕ್ಟ್ರಿಕ್ ವಾಹನಗಳು, ಸೋಲಾರ್ ಇಂಧನ ಸೇರಿದಂತೆ ಹಲವು ಉಪಕ್ರಮಗಳನ್ನು ಸರಕಾರ ಕೈಗೊಂಡಿದೆ. ಆ ಹಿನ್ನೆಲೆಯಲ್ಲಿ, ಪೆಟ್ರೋಲಿಯಂ ಆಮದು ಕಡಿಮೆ ಮಾಡುವ ಹಿನ್ನೆಲೆ ಯಲ್ಲಿ ಶೇ.20ರಷ್ಟು ಎಥೆನಾಲ್ ಸೇರಿಸಿದ ಪೆಟ್ರೋಲನ್ನು (ಇ-20) ಸರಕಾರ ದೇಶಾದ್ಯಂತ ಬಳಕೆಗೆ ಬಿಟ್ಟಿದೆ. ಆದರೆ, ಬಳಕೆದಾರರಲ್ಲಿ, ಈ ಇಂಧನ ಬಳಕೆಯಿಂದ ಮೈಲೇಜ್ ಕುಸಿಯುತ್ತದೆ, ವಾಹನದ ಎಂಜಿನ್ ಕ್ಷಮತೆ ಹಾಳಾಗುತ್ತದೆ ಎಂಬ ಆತಂಕವಿದೆ. ಈ ಆತಂಕವನ್ನು ಸಮರ್ಥಿಸುವ ಡೇಟಾ ಗಳನ್ನು ವಾಹನ ಕಂಪನಿಗಳು ನೀಡಿಲ್ಲ. ಆದರೆ ಮೈಲೇಜ್ ಕುಸಿಯುವುದು ನಿಜ ಎಂದು ಸರಕಾರ ಒಪ್ಪಿಕೊಂಡಿದೆ.

ಇದನ್ನೂ ಓದಿ: Petrol, diesel price Hike: ತೈಲ ಬೆಲೆ ಹೆಚ್ಚಳ ಭಾರತದಲ್ಲೇ ಕನಿಷ್ಠ: ಪ್ರಲ್ಹಾದ್‌ ಜೋಶಿ ಸ್ಪಷ್ಟನೆ

ಭಾರತೀಯ ಗ್ರಾಹಕ ವಾಹನದ ಮೈಲೇಜನ್ನು ಮುಖ್ಯವಾಗಿ ಪರಿಗಣಿಸುತ್ತಾನೆ. ಹೀಗಾಗಿ ಸರಕಾರದ ನಿರ್ಧಾರ ಆತನ ಪಾಲಿಗೆ ನಿರಾಶಾದಾಯಕವಾಗಿದೆ. ಆದರೆ ಪರಿಸರ ಮಾಲಿನ್ಯದ ದೃಷ್ಟಿಯಿಂದ ನೋಡಿದರೆ, ಎಥೆನಾಲ್ ಮಿಶ್ರಿತ ತೈಲವು ಕಡಿಮೆ ಮಾಲಿನ್ಯಕಾರಿಯಾಗಿದೆ. ಇಂದು ದಿಲ್ಲಿ ಮೊದ ಲಾದ ನಗರಗಳು ಮಾಲಿನ್ಯದಿಂದ ಉಸಿರುಗಟ್ಟಿವೆ. ಬೆಂಗಳೂರೂ ಹಾಗಾಗುವತ್ತ ಧಾವಿಸುತ್ತಿದೆ. ನಮ್ಮ ನಗರಗಳನ್ನು ಮುಂದಿನ ತಲೆಮಾರಿಗೂ ಶುದ್ಧವಾಗಿ, ಸ್ವಚ್ಛವಾಗಿ ಉಳಿಸಿಕೊಡುವುದು ನಮ್ಮ ಕರ್ತವ್ಯ. ಆದರೆ 2023ರಿಂದ ತಯಾರಾದ ವಾಹನಗಳು ಮಾತ್ರ ಇ-20 ಇಂಧನಕ್ಕೆ ಸರಿ ಹೊಂದುತ್ತವೆ.

ಹಳೆಯ ವಾಹನಗಳಿಗೆ ಇದು ಸೂಕ್ತವಾಗಿಲ್ಲ ಎಂದು ವಾದಿಸಲಾಗುತ್ತಿದೆ. ಹಾಗೆಯೇ, ಶೇ.20ರಷ್ಟು ಎಥೆನಾಲ್ ಮಿಶ್ರಣ ಮಾಡುತ್ತಿದ್ದರೂ ಬೆಲೆ ಮಾತ್ರ ಏರುತ್ತಲೇ ಇದೆ. ದೇಶೀಯವಾಗಿ ದೊರೆಯುವ ಎಥೆನಾಲ್ ಅನ್ನು ಪೆಟ್ರೋಲ್‌ಗೆ ಮಿಶ್ರ ಮಾಡುತ್ತಿದ್ದರೂ ಪೆಟ್ರೋಲ್ ಯಾಕೆ ಅಗ್ಗವಾಗಿಲ್ಲ ಎಂಬ ಗ್ರಾಹಕರ ಪ್ರಶ್ನೆಯಲ್ಲಿ ಹುರುಳಿದೆ. ತೈಲ ಬೆಲೆ ಏರಿಕೆಯು ಎಲ್ಲ ಬಗೆಯ ಹಣದುಬ್ಬರಕ್ಕೆ ಕಾರಣ ವಾಗುತ್ತದೆ. ನಾಗರಿಕರು ಜವಾಬ್ದಾರಿಯುತರಾಗಿ, ದೇಶದ ಹಿತಚಿಂತನೆಯನ್ನೂ ಮಾಡಬೇಕಿದೆ. ಹಾಗೇ ಕೇಂದ್ರ ಸರಕಾರ ಕೂಡ, ಎಥೆನಾಲ್ ಬಗೆಗಿರುವ ಎಲ್ಲ ಗೊಂದಲಗಳನ್ನು ನಿವಾರಿಸಿ, ಬದಲಾವಣೆಗೆ ಜನತೆಯನ್ನು ಸಜ್ಜು ಮಾಡಬೇಕಿದೆ.