ಕೇರಳದಲ್ಲಿ ಕಸ್ತೂರಿರಂಗನ್ ವರದಿಯ ಭೀತಿ ಕಾಡಿತ್ತು. ಆ ರಾಜ್ಯ ನಿರಂತರ ಸಮೀಕ್ಷೆ ನಡೆಸಿ ಅದರಿಂದ ಪಾರಾಯಿತು. ತಾನು ವರದಿಯನ್ನು ಜಾರಿ ಮಾಡಲು ಸಾಧ್ಯವಿಲ್ಲ ಎಂದು ಆಧಾರಸಹಿತ ಹೇಳಿತು. ಅಂತಹದ್ದೇ ಒಂದು ಛಾತಿಯನ್ನು ಕರ್ನಾಟಕವೂ ತೋರಬೇಕು. ಆ ಬಗ್ಗೆ ಅಧಿಕೃತವಾಗಿ ಕೇಂದ್ರ ಸರ್ಕಾರಕ್ಕೆ ರಾಜ್ಯದ ಅಭಿಪ್ರಾಯ ಹೇಳಲು ಸೆ.27 ಕೊನೆ ದಿನಾಂಕವಾಗಿದೆ. ರಂಗನ್ ವರದಿಯನ್ನು ಜಾರಿ ಮಾಡುವ ಕುರಿತು ಏನೇ ತಕರಾರುಗಳಿದ್ದರೂ ಅದರೊಳಗೆ ಹೇಳಬೇಕು. ನಿಮ್ಮ ಹಿತಕಾಯುತ್ತೇವೆ, ಜನರ ಅಭಿಪ್ರಾಯ ಕೇಳಿಯೇ ಮುಂದಿನ ನಿರ್ಣಯ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳುತ್ತಿದ್ದಾರೆ.
ಆದರೆ ಅದಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ಏನು ಮಾಡಿದೆ ಎನ್ನುವುದಕ್ಕೆ ಹೇಳಿಕೊಳ್ಳು ವಂತಹ ಉತ್ತರಗಳಿಲ್ಲ. ಹಾಗೆ ನೋಡುವುದಾದರೆ ಶಿವಕುಮಾರ್ ಸಿಎಂ ಆದಮೇಲೆ ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಸಕಲೇಶಪುರದ ರೈತರನ್ನು ನೇರವಾಗಿ ಭೇಟಿ ಮಾಡಿ ಸಮಸ್ಯೆಗಳನ್ನು ಆಲಿಸಿದ್ದಾರೆ.
ಇದನ್ನೂ ಓದಿ: Vishwavani Editorial: ಫಾಲ್ಕೆ ಗೌರವಕ್ಕೆ ಕೊಂಕು ಸಲ್ಲದು
ಕಸ್ತೂರಿರಂಗನ್ ಬಗ್ಗೆ ತಮ್ಮ ಆತಂಕಗಳೇನೆಂದು ನೇರವಾಗಿ ತಾವೇ ಕೇಳಿದ್ದಾರೆ. ಯಾರೋ ಸಚಿವರನ್ನು, ಅಧಿಕಾರಿಗಳನ್ನು ಕಳುಹಿಸಿಲ್ಲ. ಇದಕ್ಕೆ ಶಿವಕುಮಾರ್ ಅವರಿಗೆ ಅಭಿನಂದನೆ ಹೇಳಲೇ ಬೇಕು. ಈ ಕೆಲಸವನ್ನು ಇನ್ನೂ ಮುಂಚೆಯೇ ರಾಜ್ಯ ಸರ್ಕಾರ ಮಾಡಿದ್ದರೆ ಮಲೆನಾಡು ಭಾಗದ ಜನರು ಒಂದಷ್ಟು ನೆಮ್ಮದಿಯಿಂದಿರುತ್ತಿದ್ದರು. ಶೃಂಗೇರಿಯ ಕೆಲವು ಅರಣ್ಯಪ್ರದೇಶಗಳು ರಕ್ಷಿತಾರಣ್ಯದ ವ್ಯಾಪ್ತಿಯಲ್ಲಿ ಬಂದು ಅಲ್ಲಿ ಒಂದೂ ಅಭಿವೃದ್ಧಿ ಕೆಲಸ ಮಾಡಲಾಗದೇ, ಒಂದು ರಸ್ತೆ ಸರಿಯಾಗದೇ, ವಿದ್ಯುತ್ ಸಂಪರ್ಕವೂ ನೆಟ್ಟಗಾಗದೇ ಸಾವಿರಾರು ಜನರು ದೀನಸ್ಥಿತಿಗೆ ತಲುಪಿ ಊರನ್ನೇ ಬಿಟ್ಟಿದ್ದಾರೆ.
ಅಂತಹವರ ನೋವು ಅನುಭವಿಸಿದವರಿಗೆ ಮಾತ್ರ ಗೊತ್ತು. ಕಸ್ತೂರಿರಂಗನ್ ವರದಿಯ ಬಗ್ಗೆ ಜನರಿಗೆ ಇರುವ ನೋವು ಅದೇ. ವಸ್ತುಸ್ಥಿತಿಯಲ್ಲಿ ಈ ವರದಿಯಲ್ಲೇನಿದೆ, ಜಾರಿ ಮಾಡಿದರೆ ಏನಾಗುತ್ತದೆ ಎಂಬ ಬಗ್ಗೆ ಬಹುತೇಕರಿಗೆ ಗೊತ್ತೂ ಇಲ್ಲ. ಇಂತಹದ್ದೊಂದು ವರದಿ ಇದೆ ಅಂತಲೂ ಗೊತ್ತಿಲ್ಲ. ಹೀಗಿರುವಾಗ ಯಾವುದೋ ವರದಿಯಂತೆ, ಅದು ಜಾರಿಯಾಗುತ್ತದಂತೆ, ಹಾಗಾಗುತ್ತದೆ, ಹೀಗಾಗು ತ್ತದೆ ಎಂಬ ಸುದ್ದಿಗಳು ಹಬ್ಬಿದರೆ ಅಲ್ಲಿನ ಜನರ ಸ್ಥಿತಿ ಏನಾಗಬಹುದು? ಈಗಾಗಲೇ ಮಲೆನಾಡಿನ ಜನರು ವಿಪರೀತ ಅಭದ್ರತೆ ಯಲ್ಲಿದ್ದಾರೆ. ಅಲ್ಲಿದ್ದವರಿಗೆ, ತಮ್ಮ ನೆಲೆಗಳನ್ನು ತೊರೆಯುವಂತೆ ಮಾಡಲು ಇಲ್ಲಿನ ನಾಯಕತ್ವ ಪಿತೂರಿ ಮಾಡುತ್ತಿದೆ ಎಂಬ ಗುಮಾನಿಯಿದೆ.
ಒಟ್ಟಾರೆ ಒಂದು ಆತಂಕ ಕಾಡುತ್ತಿರುವಾಗ ನಾಯಕತ್ವ ಸ್ಪಷ್ಟವಾದ ದಿಕ್ಕು ತೋರಲು, ಸಮಾಧಾನ ಹೇಳಲು ಸಿದ್ಧವಾಗಿರಬೇಕು. ಇಲ್ಲವೇ ಸೂಕ್ತ ಪರಿಹಾರವನ್ನಾದರೂ ಸೂಚಿಸಬೇಕು. ಇಂತಹ ಪ್ರಮುಖ ವಿಚಾರದ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನಗಳು ಹತ್ತಿರವಾಗಿರುವಾಗ ಕಾರ್ಯಾಚರಣೆ ಮಾಡಿದರೆ ಆಗುವ ಪ್ರಯೋಜನವಾದರೂ ಏನು?