ಪುಟ್ಟ ಮಕ್ಕಳ, ಶಿಶುಗಳ ಮೇಲೆ ಅಪರಾಧಗಳು ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ. ಬೆಂಗಳೂರಿನ ಕಾಡುಗೋಡಿಯಲ್ಲಿ ತಾಯಿಯೊಬ್ಬಳು ತನ್ನ ಪ್ರಿಯಕರನ ಜೊತೆಗೂಡಿ, ತನ್ನ ಮೊದಲ ಮದುವೆಯಲ್ಲಿ ಜನಿಸಿದ 5 ವರ್ಷದ ಮಗಳು ವೆನ್ನೆಲಳನ್ನು ಸಾಯಿಸಿ ದ್ದಾಳೆ.
ಕೊಂದ ರೀತಿಯೂ ಬಣ್ಣಿಸಲಾಗದಷ್ಟು ಆಘಾತಕಾರಿಯಾಗಿದೆ. ಈ ಕೇಸ್‌ನ್ನು ಗಂಭೀರವಾಗಿ ತೆಗೆದುಕೊಳ್ಳದಿದ್ದ ಪೊಲೀಸರ ಮೇಲೆ ಕ್ರಮಕ್ಕೂ ಆದೇಶವಾಗಿದೆ. ಕೇರಳದ ತಿರುವನಂತ ಪುರಂನಲ್ಲೂ ಇಂಥದೇ ಪ್ರಕರಣ ವರದಿಯಾಗಿದೆ. ಒಂದೂವರೆ ವರ್ಷದ ಮುಗ್ಧ ಬಾಲಕ ಅರ್ಶಿದ್ ಎಂಬಾತನನ್ನು ಆಕೆಯ ತಾಯಿಯ ಪ್ರಿಯಕರ ಉಸಿರುಗಟ್ಟಿಸಿ ಕೊಂದಿದ್ದಾನೆ.
ಮಗುವಿನ ದೇಹದ ಮೇಲೆ ಸಿಗರೇಟ್‌ನಿಂದ ಸುಟ್ಟ ಕಲೆಗಳಿದ್ದುದು, ಕೊಲೆಯ ಬರ್ಬರತೆಗೆ ಸಾಕ್ಷಿ. ಹುಡುಕುತ್ತ ಹೋದರೆ ಇಂಥ ಹಲವು ಪ್ರಕರಣಗಳು ಸಿಗಬಹುದು ಹಾಗೂ ಮಕ್ಕಳ ನ್ನು ನಾವು ನೋಡಿಕೊಳ್ಳುವ ರೀತಿಗೆ ಕನ್ನಡಿ ಹಿಡಿಯಬಹುದು. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಪ್ರಕಾರ, 2024ರಲ್ಲಿ ಭಾರತದಲ್ಲಿ ಮಕ್ಕಳ ವಿರುದ್ಧದ ಅಪರಾಧಗಳ 1,87,702 ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ: Vishwavani Editorial: ಗೌಡರ ನಿರ್ಗಮನ, ಖರ್ಗೆ ಆಗಮನ
ಅಂದರೆ ಪ್ರತಿದಿನ ಮಕ್ಕಳ ವಿರುದ್ಧ ಸರಾಸರಿ 514ಕ್ಕೂ ಹೆಚ್ಚು ಅಪರಾಧ, ಪ್ರತಿ ಗಂಟೆಗೆ 21ಕ್ಕೂ ಹೆಚ್ಚು ಅಪರಾಧಗಳು ಮತ್ತು ದೇಶಾದ್ಯಂತ ಪ್ರತಿ ಮೂರು ನಿಮಿಷಕ್ಕೆ ಒಂದು ಅಪರಾಧ ನಡೆಯುತ್ತಿದೆ.
ಮತ್ತಿದು ಪ್ರತಿವರ್ಷ ಹೆಚ್ಚಾಗುತ್ತಿದೆ. ಈ ಅಪರಾಧಗಳಲ್ಲಿ ಪೋಕ್ಸೋ ಕೇಸ್ ಸೇರಿದಂತೆ ಎಲ್ಲ ಬಗೆಯದೂ ಇದೆ. ಇದರಲ್ಲಿ ಸೈಬರ್‌ಕ್ರೈಮ್ ಕೂಡ ಸೇರಿದೆ. ಹೆಣ್ಣು ಮಕ್ಕಳ ಮೇಲೆ ಹೆಚ್ಚಿನ ಪ್ರಮಾಣದ ಅಪರಾಧಗಳು ಸಂಭವಿಸುತ್ತಿವೆ. ಹೆಚ್ಚಿನ ಬಾರಿ ಅಪರಿಚಿತರು ನಡೆಸುವ ಕ್ರೈಮ್‌ಗಳು ಕಡಿಮೆ. ಪರಿಚಿತರು, ಸಂಬಂಧಿಕರು, ಮನೆಯಲ್ಲೇ ಇರುವವರು ನಡೆಸುವ ಅಪರಾಧಗಳು ಭಯಾನಕವಾಗಿರುತ್ತವೆ. ಇವುಗಳಲ್ಲಿ ಹಲವು ಪ್ರಕರಣಗಳ ದೂರು ಕೂಡ ದಾಖಲಾಗುವುದಿಲ್ಲ, ವರದಿಯಾಗುವುದಿಲ್ಲ.
ನಮ್ಮ ದೇಶದಲ್ಲಿ ಧ್ವನಿಯೇ ಇಲ್ಲದ ಒಂದು ಸಮುದಾಯ ಇದ್ದರೆ ಅದು ಶೋಷಿತ ಮಕ್ಕಳದ್ದು. ಮಕ್ಕಳ ಹಕ್ಕುಗಳ ಸಂಘಟನೆಗಳು, ಇಂಥ ಪ್ರಕರಣಗಳು ವರದಿಯಾದಾಗ ಅವುಗಳನ್ನು ಪರಿಶೀಲಿಸುವ ರೂಢಿ ಇದೆಯೋ ಇಲ್ಲವೋ ತಿಳಿಯದು.
ಇಂಥದೇ ಹಲ್ಲೆ, ಕ್ರೈಂ ನಡೆಯುತ್ತಿದೆ ಎಂದು ಅಕ್ಕಪಕ್ಕದವರ ಗಮನಕ್ಕೆ ಬಂದರೆ ದೂರು ನೀಡುವ ಪ್ರಜ್ಞಾವಂತಿಕೆಯನ್ನಾದರೂ ರೂಢಿಸಿಕೊಳ್ಳಬೇಕು. ನಮಗೇಕೆ ಎಂದು ಸುಮ್ಮನಿರ ಬಾರದು. ಮಕ್ಕಳ ಮೇಲಿನ ಅಪರಾಧಗಳಿಗೆ ತಕ್ಷಣ ತನಿಖೆ, ವಿಚಾರಣೆ ನಡೆದು ಕಠಿಣ ಶಿಕ್ಷೆಯಾಗಬೇಕು. ಪೊಲೀಸರೂ ನಿರ್ಲಕ್ಷ್ಯ ತೊರೆದು ಕ್ರಿಯಾಶೀಲರಾದರೆ ಪಾತಕಿ ಗಳನ್ನು ಹದ್ದುಬಸ್ತಿನಲ್ಲಿ ಇಡಬಹುದು.