ಪಶ್ಚಿಮ ಘಟ್ಟಗಳ ಪಾಲಿಗೆ ವಿನಾಶಕಾರಿಯಾದ ಇನ್ನೊಂದು ಯೋಜನೆಗೆ ಇದೀಗ ಜೀವ ಬರುವಂತೆ ಕಾಣುತ್ತಿದೆ. ಸುಮಾರು 10 ಸಾವಿರ ಕೋಟಿ ರೂ. ವೆಚ್ಚದ ಬೇಡ್ತಿ- ವರದಾ ನದಿ ಜೋಡಣೆಯ ಡ್ರೋನ್ ಸರ್ವೆಗೆ ಟೆಂಡರ್ ಕರೆಯಲಾಗಿದೆ. 2022ರಲ್ಲಿ ಈ ಲಿಂಕ್ ಯೋಜನೆಯ ಡಿಪಿಆರ್ ಸಲ್ಲಿಕೆಯಾಗಿತ್ತು. 1992ರಿಂದಲೇ ಈ ಯೋಜನೆಯ ಪ್ರಸ್ತಾವವಿದ್ದು, ಅಂದಿನಿಂದಲೇ ಪರಿಸರದ ಕಳಕಳಿ ಉಳ್ಳವರು, ವಿವೇಕಿಗಳು ಇದನ್ನು ವಿರೋಧಿಸುತ್ತ ಬಂದಿದ್ದಾರೆ.
ಇದು ಎತ್ತಿನಹೊಳೆಯಂತೆಯೇ ಇನ್ನೊಂದು ಮೂರ್ಖ ಯೋಜನೆ. ಬಯಲು ಸೀಮೆಗೆ ಈ ಮೂಲಕ ನೀರು ತರಬಹುದು ಎಂಬ ಕನ್ನಡಿಯ ಗಂಟನ್ನು ಇವುಗಳ ಮೂಲಕ ತೋರಿಸುತ್ತ ಬರಲಾಗಿದೆ. ಪಶ್ಚಿಮಾಭಿಮುಖಿಯಾಗಿ ಹರಿದು ಅರಬಿ ಸಮುದ್ರ ಸೇರುವ ಬೇಡ್ತಿ ನದಿಯ ನೀರನ್ನು ತುಂಗಭದ್ರಾ ನದಿಯ ಉಪನದಿಯಾದ ವರದಾ ನದಿಯೊಂದಿಗೆ ಸೇರಿಸುವ ಯೋಜನೆಯಿದು.
ಇದನ್ನೂ ಓದಿ: Vishwavani Editorial: ಮತ್ತೆ ಕಾವೇರಿ ಅನ್ಯಾಯ
ಇದರಿಂದ ರಾಯಚೂರು, ಹಾವೇರಿ, ಗದಗ, ಶಿವಮೊಗ್ಗ, ಕೊಪ್ಪಳ ಸೇರಿ ಉತ್ತರ ಕರ್ನಾಟಕದ 6 ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸಬಹುದು ಎಂಬ ನಂಬಿಕೆಯಿಂದ ಕಾಗದದ ಮೇಲೆ ಹುಟ್ಟುಹಾಕಲಾದ ಯೋಜನೆ. ಜೊತೆಗೆ 1.06 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿಯ ಆಶಯವೂ ಇದೆ. ಇದೊಂದು ಅವೈಜ್ಞಾನಿಕ ವಿಚಾರ. ಇದು ಸಾಧ್ಯವೇ ಎಂಬ ಬಗ್ಗೆ ಸರಿಯಾದ ಸಮೀ ಕ್ಷೆಯೂ ಆಗಿಲ್ಲ. ಮಳೆಯಾಶ್ರಿತ ನದಿಗಳಾದ ಬೇಡ್ತಿ ಹಾಗೂ ಸೋಂದಾ ನದಿಗಳಲ್ಲಿ ಮಳೆಗಾಲ ಸಾಕಷ್ಟು ನೀರಿದ್ದರೂ, ಬೇಸಿಗೆಯ ಆರಂಭದಲ್ಲಿ ಬತ್ತುತ್ತವೆ. ವರ್ಷಪೂರ್ತಿ ನೀರಿರುವುದಿಲ್ಲ.
ಆದ್ದರಿಂದ ಇಲ್ಲಿ ಹೆಚ್ಚುವರಿ ನೀರು ಇದೆ ಎಂಬ ಊಹೆಯೇ ತಪ್ಪು. ಹಾಗೆಯೇ, ಇಲ್ಲಿ ಹರಿದು ಸಮುದ್ರ ಸೇರುವ ನೀರು ವ್ಯರ್ಥವಾಗುತ್ತದೆ ಎಂಬ ಚಿಂತನೆ ಕೂಡ ಹುಚ್ಚುತನದ್ದು. ಸಮುದ್ರ ಸೇರುವ ನೀರು ಎಂದೂ ವ್ಯರ್ಥವಲ್ಲ. ನದಿಯ ಸ್ವಾಭಾವಿಕ ಹರಿವು ಕುಂಠಿತಗೊಂಡರೆ ಸಮುದ್ರದ ಉಪ್ಪು ನೀರು ನದಿ ಮುಖಜ ಭೂಮಿಯ ಸಿಹಿನೀರಿನಾಶ್ರಯಗಳಿಗೆ ನುಗ್ಗಿ ಹಾನಿಗೆಡವುತ್ತದೆ.
ಯೋಜನೆಗಾಗಿ ಸುರಂಗ, ಬ್ಯಾರೇಜ್, ಚೆಕ್ ಡ್ಯಾಂ, ಪೈಪ್‌ಲೈನ್ ಎಂದೆಲ್ಲ ಅಮೂಲ್ಯವಾದ ಕಾಡನ್ನು ಕಡಿಯಬೇಕು. ಗುಡ್ಡ ಕತ್ತರಿಸಬೇಕು. ಇದರ ಫಲಿತ ಏನೆಂಬುದನ್ನು ವಯನಾಡಿನಲ್ಲಿ ನೋಡಿದ್ದಾ ಗಿದೆ. ಯೋಜನೆಯಿಂದ ೧ ಸಾವಿರ ಹೆಕ್ಟೇರ್ ಜಮೀನು ಮುಳಯಗಡೆಯಾಗಲಿದೆ. ಅದರಲ್ಲಿ ಶ್ರೀಮಂತ ಅರಣ್ಯ, ಕೃಷಿಭೂಮಿ ಇದೆ. ನೀರಿನ ಕೊರತೆಯಿಂದ ಕಾಡಿನ ಪ್ರಾಣಿಗಳು ನಾಡಿಗೆ ಬಂದು ಮಾನವ- ವನ್ಯಪ್ರಾಣಿ ಸಂಘರ್ಷ ಹೆಚ್ಚಲಿದೆ. ಆದರೂ ರಾಜಕಾ ರಣಿಗಳು ಭಸ್ಮಾಸುರರಂತೆ ಪಶ್ಚಿಮ ಘಟ್ಟದ ನೆತ್ತಿಯ ಮೇಲೆ ಕೈಯಿಟ್ಟಿದ್ದಾರೆ.