ಅನುಕೂಲಸಿಂಧು ರಾಜಕಾರಣಕ್ಕೆ ಯಾವುದೇ ಎಲ್ಲೆಯಿಲ್ಲ, ಕಾಲದ ಹಂಗಿಲ್ಲ ಎಂಬ ಗ್ರಹಿಕೆಗೆ ಕಾಲಾನುಕಾಲಕ್ಕೆ ಉದಾಹರಣೆಗಳು ಸಿಗುತ್ತಲೇ ಇರುತ್ತವೆ. ಅದಕ್ಕೆ ಇತ್ತೀಚೆಗೆ ಗ್ರಾಸ ಒದಗಿಸಿರುವುದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರರ ವಿಷಯದಲ್ಲಿ ಆಗಿರುವ ಬೆಳವಣಿಗೆ.
‘ನಿತೀಶ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ರಾಜ್ಯಸಭೆಯ ಕಡೆಗೆ ಮುಖಮಾಡಲಿದ್ದಾರೆ ಮತ್ತು ಅವರ ಮಗ ನಿಶಾಂತ್ ಕುಮಾರ್ ಅವರು ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ’ ಎಂಬ ಸುದ್ದಿ ಮೊನ್ನೆ ಹರಿದಾಡಿದಾಗ, ಹಲವರ ಹುಬ್ಬೇರಿದ್ದು ನಿಜ. ಆದರೆ ಅದಕ್ಕಿಂತಲೂ ಅಚ್ಚರಿ ಮೂಡಿಸಿದ್ದು, ಈ ‘ಸ್ಥಾನಪಲ್ಲಟ’ದ ಹಿಂದೆ ಹರಿದಾಡು ತ್ತಿರುವ ಕಾರಣ.
ಇದನ್ನೂ ಓದಿ: Vishwavani Editorial: ಯುದ್ಧದ ಪಾರ್ಶ್ವ ಪರಿಣಾಮಗಳು
‘ನಿತೀಶರಿಗೆ ವಯಸ್ಸಾಗಿದ್ದು ನೆನಪಿನ ಶಕ್ತಿ ಕುಗ್ಗಿರುವುದರಿಂದ, ಅವರನ್ನು ಬದಲಾಯಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ’ ಎಂಬುದೇ ಆ ಕಾರಣವಂತೆ. ಇದೆಂಥಾ ಚೋದ್ಯ?! ವಯಸ್ಸಾಗಿರುವುದು ಮತ್ತು ನೆನಪಿನ ಶಕ್ತಿ ಕುಗ್ಗಿರುವುದು ನಿತೀಶರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಿಸುವುದಕ್ಕೆ ಹೇತುವಾಗಿವೆ ಎಂಬ ‘ಗ್ರಹಿಕೆ’ ಅಥವಾ ‘ನೆಪ’ವನ್ನೇ ನಂಬೋಣವಂತೆ.
ಹಾಗಾದರೆ, ರಾಜ್ಯಸಭಾ ಸದಸ್ಯರಾಗುವುದಕ್ಕೆ ಈ ‘ವೃದ್ಧಾಪ್ಯ’ ಮತ್ತು ‘ನೆನಪಿನ ಶಕ್ತಿ ಕುಗ್ಗಿರುವುದು’ ಅಡ್ಡಿಯಾಗುವುದಿಲ್ಲ ಎಂದು ನಮ್ಮಂಥವರು ಭಾವಿಸಬೇಕಾ? ಅಥವಾ ರಾಜ್ಯಸಭಾ ಸದಸ್ಯತ್ವ ಎಂಬುದು ಈ ಎರಡು ಕೊರತೆಗಳಿದ್ದರೂ ನಿರ್ವಹಿಸಬಹುದಾದ ‘ಹೊಣೆಗಾರಿಕೆ’ ಅಂದುಕೊಳ್ಳಬೇಕಾ? ಅಥವಾ ಇದಕ್ಕೆ ಅನುಕೂಲಸಿಂಧು ರಾಜಕಾರಣದ ಪರಮಾವಧಿ ಎಂಬ ಹಣೆಪಟ್ಟಿ ಲಗತ್ತಿಸಬೇಕಾ? ಮೇಲೆ ಉಲ್ಲೇಖಿಸಿರುವ ಆ ಎರಡು ‘ಕೊರತೆ ಗಳು’ ನಿತೀಶರ ಕೈಹಿಡಿದು ಕೆಳಗೆ ಎಳೆಯುತ್ತಿದ್ದಲ್ಲಿ ಅವರು ರಾಜಕೀಯದಿಂದ ನಿವೃತ್ತರಾಗಿ ಮತ್ತಾರಾದರೂ ಉತ್ಸಾಹಿ ಯುವಕರಿಗೆ ರಾಜ್ಯಸಭಾ ಸದಸ್ಯತ್ವದ ಅವಕಾಶವನ್ನು ನೀಡಬೇಕಲ್ಲವೇ? ಎಂಬೆಲ್ಲ ಪ್ರಶ್ನೆಗಳು ಇಲ್ಲಿ ಹುಟ್ಟುತ್ತವೆ. ಆದರೆ ಇವಕ್ಕೆ ಯಾರೂ ಉತ್ತರಿಸುವುದಿಲ್ಲ ಎಂಬುದೂ ಬಹಿರಂಗ ಸತ್ಯವೇ!