ಅಮೆರಿಕ ದೇಶದೊಳಗೆ ಶತಾಯಗತಾಯ ತೂರಿಕೊಂಡು ಬಿಡಬೇಕು, ಅಲ್ಲಿನ ಸ್ವರ್ಗಸದೃಶ ಬದುಕನ್ನು ತಮ್ಮದಾಗಿಸಿಕೊಳ್ಳಬೇಕು ಎಂಬುದು ಭಾರತ ಸೇರಿದಂತೆ ಅನೇಕ ದೇಶಗಳ ಉದ್ಯೋಗಾಕಾಂಕ್ಷಿಗಳ ಹಂಬಲವಾಗಿರುತ್ತದೆ. ಇದರ ನೆರವೇರಿಕೆಗೆ ಯಥೋಚಿತ ಮಾರ್ಗ ವನ್ನು ಅಪ್ಪಿದರೆ ಪರವಾಗಿಲ್ಲ ಎನ್ನಬಹುದು. ಆದರೆ, ಅಮೆರಿಕವು ತಮ್ಮ ಮಡಿಲಿಗೆ ಸಂಪತ್ತಿನ ಧಾರೆಯನ್ನೇ ಸುರಿಸಿಬಿಡುತ್ತದೆ, ತಮಗೆ ಸುಖದ ಸುಪ್ಪತ್ತಿಗೆಯನ್ನು ಹಾಸಿ ಬಿಡುತ್ತದೆ ಎಂಬ ಭ್ರಮೆಯಲ್ಲಿ ಕೆಲವರು ನಕಲಿ ದಾಖಲೆಗಳನ್ನು ಹಿಡಿದುಕೊಂಡು ಅಥವಾ ಕಳ್ಳಮಾರ್ಗದಲ್ಲಿ ಆ ದೇಶದೊಳಗೆ ನುಸುಳುವುದಿದೆ.
ಆದರೆ ತಕ್ಷಣಕ್ಕೆ ತಪ್ಪಿಸಿಕೊಂಡರೂ, ಇಂಥ ಮಾರ್ಗೋಪಾಯಗಳು ಯಾವತ್ತಿಗೂ ಎಡವಟ್ಟಿನವೇ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ‘ಅಮೆರಿಕವನ್ನು ಮತ್ತೊಮ್ಮೆ ಮಹತ್ತರ ನೆಲೆಯಾಗಿಸುವ’ ಮಹತ್ವಾಕಾಂಕ್ಷೆಯನ್ನು ತುಂಬಿಕೊಂಡಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಈ ಕಾರ್ಯಭಾರದ ನೆರವೇರಿಕೆಗೆ ಸಮರೋಪಾದಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಇದನ್ನೂ ಓದಿ: Vishwavani Editorial: ಬಿಸುಪು ಬಿಗಿಯಾಗಿ, ಆನಂದ ಹಬ್ಬಲಿ
ಇದರ ಒಂದು ಭಾಗವಾಗಿ ಭಾರತೀಯರು ಸೇರಿದಂತೆ ವಿವಿಧ ದೇಶಗಳ ಅಕ್ರಮ ವಲಸಿಗ ರನ್ನು ದೇಶದಿಂದ ಹೊರದೂಡುವ ಮತ್ತೊಂದು ಸುತ್ತಿನ ಕಸರತ್ತಿನಲ್ಲಿ ಅವರು ತೊಡಗಿಸಿ ಕೊಂಡಿದ್ದಾರೆ. ಇದು ಭಾರತ ಸೇರಿದಂತೆ ಯಾವುದೇ ದೇಶದ ಅಕ್ರಮ ವಲಸಿಗರಿಗೆ ಒಂದು ಪಾಠವಾಗಬೇಕು.
ಅಗಾಧ ಸಂಪತ್ತಿನ ಸಂಗ್ರಹ ಅಥವಾ ಐಷಾರಾಮಿ ಜೀವನದ ಹವಣಿಕೆಯಲ್ಲಿ ಅಕ್ರಮ ವಲಸೆಗಾರಿಕೆಯ ಪಥವನ್ನು ತುಳಿಯುವವರು, ತಾಯ್ನಾಡಿಗಿಂತ ಮಿಗಿಲಾದ ಸ್ವರ್ಗ ಇರುವುದಿಲ್ಲ ಎಂಬ ಸತ್ಯವನ್ನು ಮನವರಿಕೆ ಮಾಡಿಕೊಳ್ಳಬೇಕು. ನಿರ್ದಿಷ್ಟವಾಗಿ ಭಾರತದ ವಿಷಯದಲ್ಲಿ ಹೇಳುವುದಾದರೆ, ಅಮೆರಿಕದ ಮಟ್ಟಿಗಿನ ಐಷಾರಾಮವನ್ನು ಅಲ್ಲದಿದ್ದರೂ, ಏನಾದರೊಂದು ಜೀವನೋಪಾಯವನ್ನು ಕಂಡುಕೊಂಡು ನೆಮ್ಮದಿಯಿಂದ ದಿನದೂಡು ವಂಥ ಪರಿಸ್ಥಿತಿ ನಮ್ಮಲ್ಲಿದೆ.
ಹಾಗಂತ ಆಳುಗರೂ ಕೈಕಟ್ಟಿ ಕೂರಬಾರದು; ಪ್ರತಿಭಾ ಪಲಾಯನಕ್ಕೆ ಏನೆಲ್ಲ ಅಂಶಗಳು ಕಾರಣವಾಗುತ್ತಿವೆ ಎಂಬುದನ್ನು ಮನಗಂಡು ಭಾರತದಲ್ಲಿಯೇ ವಿಪುಲ ಉದ್ಯೋಗಾವ ಕಾಶಗಳನ್ನು ಸೃಷ್ಟಿಸುವುದರ ಕಡೆಗೆ ಅವರು ಗಮನ ಹರಿಸಬೇಕು...