ಭಾರತದ ಮಧ್ಯಮ ವರ್ಗದ ಕನಸುಗಳಿಗೆ ರೆಕ್ಕೆ ನೀಡಿದ್ದ ಐಟಿ (ಮಾಹಿತಿ ತಂತ್ರಜ್ಞಾನ) ವಲಯ ಇಂದು ಮೌನವಾಗಿ ಅಳುತ್ತಿದೆ. ಅಂತಾರಾಷ್ಟ್ರೀಯ ಟೆಕ್ ದೈತ್ಯ ಒರಾಕಲ್ ಜಾಗತಿಕವಾಗಿ ಸುಮಾರು 30000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿರುವುದು ಕೇವಲ ಒಂದು ಕಂಪನಿಯ ಆರ್ಥಿಕ ಶಿಸ್ತಿನ ಕ್ರಮವಲ್ಲ; ಬದಲಾಗಿ ಇದು ಮುಂಬರುವ ಆರ್ಥಿಕ ಸುನಾಮಿಯ ಮುನ್ಸೂಚನೆ.
ಈ ಪೈಕಿ ಭಾರತವೊಂದರ 12000 ಮಂದಿ ಬೀದಿಗೆ ಬೀಳುತ್ತಿರುವುದು ಆತಂಕಕಾರಿ ಬೆಳವಣಿಗೆ. 2026ರ ಆರಂಭಿಕ ವರದಿಗಳು ನೀಡುತ್ತಿರುವ ಅಂಕಿ-ಅಂಶಗಳು ಬೆಚ್ಚಿ ಬೀಳಿಸುವಂತಿವೆ. ಈ ವರ್ಷದ ಅಂಕಿ-ಅಂಶಗಳನ್ನು ಗಮನಿಸಿದರೆ, 2026ರ ಮೂರು ತಿಂಗಳಲ್ಲಿ ಸುಮಾರು 85,156 ಟೆಕ್ಕಿಗಳು ಕೆಲಸ ಕಳೆದುಕೊಂಡಿದ್ದಾರೆ.
ಅಂದರೆ ಪ್ರತಿದಿನ ಸರಾಸರಿ 936 ಮಂದಿ ತಮ್ಮ ಉದ್ಯೋಗದ ಗುರುತಿನ ಚೀಟಿಯನ್ನು ಕಚೇರಿಯ ಬಿಟ್ಟು ಹೊರಬರುತ್ತಿದ್ದಾರೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿ ಯಲ್ಲಿರುವ ಭಾರತಕ್ಕೆ ಇದು ಆಘಾತಕಾರಿ ಸುದ್ದಿ. ಈಗಾಗಲೇ ಕೊಲ್ಲಿ ಯುದ್ಧದ ಕಾರಣಕ್ಕೆ ಅಲ್ಲಿ ಬದುಕಿನ ಬುತ್ತಿ ಅರಸಿದ್ದ ಲಕ್ಷಾಂತರ ಭಾರತೀಯರು ಎಲ್ಲವನ್ನೂ ಬಿಟ್ಟು ಸ್ವದೇಶಕ್ಕೆ ಮರಳಿದ್ದಾರೆ.
ಇದನ್ನೂ ಓದಿ: Vishwavani Editorial: ಮರುಕಳಿಸದಿರಲಿ ಮಹಾಯುದ್ಧ
ತಿಂಗಳೊಂದಕ್ಕೆ ಲಕ್ಷಗಟ್ಟಲೆ ವೇತನ ಪಡೆಯುತ್ತಿದ್ದ ಯುವಕ/ ಯುವತಿಯರು ಒಮ್ಮಿಂದೊ ಮ್ಮೆಲೆ ತಮ್ಮ ಉದ್ಯೋಗ ಕಳೆದುಕೊಂಡರೆ ಆಗುವ ಆಘಾತ, ಮಾನಸಿಕ ತುಮುಲ ಊಹೆಗೆ ನಿಲುಕದ್ದು. ಬೆಂಗಳೂರಿನ ಕೊತ್ತನೂರು ಠಾಣಾ ವ್ಯಾಪ್ತಿಯಲ್ಲಿ ಅಂತರ್ಧರ್ಮಿಯ ವಿವಾಹ ವಾಗಿದ್ದ ದಂಪತಿ ಉದ್ಯೋಗ ಕಳೆದುಕೊಂಡ ನೋವಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು ಇದಕ್ಕೊಂದು ಉದಾಹರಣೆ.
ಐಟಿ ವಲಯದಲ್ಲಿನ ಈ ನಿರುದ್ಯೋಗ ಕೇವಲ ಅಂಕಿ-ಅಂಶಗಳಿಗೆ ಸೀಮಿತವಾಗಿಲ್ಲ. ಭಾರತ ದಂತಹ ಜನ ನಿಬಿಡ ದೇಶದಲ್ಲಿ ಇದು ’ಸಾಮಾಜಿಕ ಪಿಡುಗಾಗಿ’ ರೂಪಾಂತರಗೊಳ್ಳುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. ಕೃತಕ ಬುದ್ಧಿಮತ್ತೆ ಮತ್ತು ಆಟೊಮೇಷನ್‌ನ ಅಬ್ಬರದ ನಡುವೆ ಮಾನವ ಸಂಪನ್ಮೂಲವನ್ನು ಕೇವಲ ‘ವೆಚ್ಚ’ ಎಂದು ಪರಿಗಣಿಸುವ ಕಂಪನಿಗಳ ಧೋರಣೆ ಬದಲಾಗಬೇಕಿದೆ.
ಸರಕಾರಗಳು ಕೇವಲ ಹೂಡಿಕೆಯನ್ನು ಆಕರ್ಷಿಸುವುದಷ್ಟೇ ಅಲ್ಲದೆ, ಕೆಲಸ ಕಳೆದುಕೊಂಡ ನುರಿತ ಉದ್ಯೋಗಿಗಳಿಗೆ ಮರು-ತರಬೇತಿ ನೀಡುವ ಮತ್ತು ಅವರ ಹಿತರಕ್ಷಣೆ ಮಾಡುವ ಬಲವಾದ ನೀತಿಗಳನ್ನು ರೂಪಿಸಬೇಕಿದೆ. ಭಾರತ ಸುಶಿಕ್ಷಿತ ನಿರುದ್ಯೋಗಿಗಳ ತಾಣ ವಾಗದಂತೆ ಎಚ್ಚರಿಕೆ ವಹಿಸಬೇಕಿದೆ.