ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್'ಯು) ಆವರಣವು ಕಾರಣವಲ್ಲದ ಕಾರಣಕ್ಕೆ ಮತ್ತೆ ಮತ್ತೆ ಸುದ್ದಿಯಾಗುತ್ತಲೇ ಇರುವುದನ್ನು ಬಿಡಿಸಿ ಹೇಳ ಬೇಕಿಲ್ಲ. ಮೊನ್ನೆ ಭಾನುವಾರ ತಡರಾತ್ರಿ, ಅಲ್ಲಿನ ಎಡಪಂಥೀಯ ಮತ್ತು ಬಲಪಂಥೀಯ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದಿದೆ, ಕಲ್ಲುತೂರಾಟವಾಗಿದೆ ಎಂಬ ಸುದ್ದಿ ಬಂದಿದೆ.
ಹಲವು ವಿದ್ಯಾರ್ಥಿಗಳು ಗಾಯಗೊಳ್ಳುವುದಕ್ಕೆ ಮತ್ತು ಉಪಕುಲಪತಿ ಶಾಂತಿಶ್ರೀ ಧುಲಿಪುಡಿ ಪಂಡಿತ್ ಅವರ ರಾಜೀನಾಮೆಗೆ ಎಡಪಂಥೀಯ ವಿದ್ಯಾರ್ಥಿಗಳು ಆಗ್ರಹಿಸು ವಂತಾಗುವುದಕ್ಕೂ ಈ ಬೆಳವಣಿಗೆ ಕಾರಣವಾಗಿದೆ. ಪಠ್ಯಪುಸ್ತಕಗಳಲ್ಲಿನ ಮಾಹಿತಿ, ಜ್ಞಾನ, ಪ್ರಮೇಯಗಳು, ಸೂತ್ರಗಳು, ತತ್ವ-ಸಿದ್ಧಾಂತಗಳ ಅಧ್ಯಯನಕ್ಕೆ ಒಡ್ಡಿಕೊಂಡು, ಮುಂದೆ ಬದುಕನ್ನು ಕಟ್ಟಿಕೊಳ್ಳುವುದಕ್ಕೆ ಅವನ್ನು ನೆಚ್ಚಬೇಕಾದ ವಿದ್ಯಾರ್ಥಿಗಳು ಹೀಗೆ ಯಾವುದೋ ‘ಇಸಂ’ಗಳಿಗೆ ಒಡ್ಡಿಕೊಂಡು, ತಮ್ಮ ಜೀವನದ ಗುರಿಯಿಂದ ವಿಮುಖ ವಾಗುತ್ತಿದ್ದಾರಾ? ವಿದ್ಯಾರ್ಥಿಗಳ ನಡುವಿನ ಇಂಥ ಬಿರುಕನ್ನು ಪಟ್ಟಭದ್ರ ಹಿತಾಸಕ್ತಿಗಳು ಅಥವಾ ರಾಜಕೀಯ ಶಕ್ತಿಗಳು ದುರುಪಯೋಗಪಡಿಸಿಕೊಳ್ಳುತ್ತಿವೆಯಾ? ಎಂಬ ಪ್ರಶ್ನೆಗಳು ಇಲ್ಲಿ ಹುಟ್ಟಿಕೊಳ್ಳುವುದು ಸಹಜ.
ಇದನ್ನೂ ಓದಿ: Vishwavani Editorial: ಮೆರೆದವರೆಲ್ಲ ಇಳಿಯುವುದು ಸತ್ಯ
ಹಾಗೆ ನೋಡಿದರೆ, ಇಂಥ ಸಂಘರ್ಷಗಳು ವಿವಿಗಳಲ್ಲಿ ಮಾತ್ರವಲ್ಲದೆ ಕಾಲೇಜು ಆವರಣ ಗಳನ್ನೂ ವ್ಯಾಪಿಸಿರುವುದನ್ನು ಬಿಡಿಸಿ ಹೇಳಬೇಕಿಲ್ಲ. ‘ಶ್ರದ್ಧಾವಾನ್ ಲಭತೇ ಜ್ಞಾನಂ’ ಎಂಬುದು ಭಗವದ್ಗೀತೆಯ ಒಂದು ಪ್ರಸಿದ್ಧ ವಾಕ್ಯ; ಶ್ರದ್ಧೆ, ನಂಬಿಕೆ/ನಿಷ್ಠೆ ಇರುವವನು ಜ್ಞಾನವನ್ನು ಪಡೆಯುತ್ತಾನೆ ಎಂಬುದು ಇದರರ್ಥ.
‘ವಿದ್ಯಾ ದದಾತಿ ವಿನಯಂ, ವಿನಯಾತ್ ಯಾತಿ ಪಾತ್ರತಾಂ’ ಎಂಬುದು ಇಂಥ ಮತ್ತೊಂದು ಸೂಕ್ತಿ; ಅಂದರೆ ವಿದ್ಯೆಯು ವಿನಯವನ್ನು ನೀಡುತ್ತದೆ, ವಿನಯದಿಂದ ಯೋಗ್ಯತೆ ಬರುತ್ತದೆ ಎಂದರ್ಥ. ಆದರೆ, ವಿದ್ಯಾಲಯಗಳ ಒಳಗಿನ ಇಂಥ ಸಂಘರ್ಷಗಳನ್ನು ನೋಡಿದಾಗ, ಈ ಸೂಕ್ತಿಗಳಿಗೆ ಅನ್ವರ್ಥವಾಗುವಂತೆ ವಿದ್ಯಾರ್ಥಿಗಳು ನಡೆದುಕೊಳ್ಳುತ್ತಿದ್ದಾರೆಯೇ? ಎಂಬ ಶಂಕೆ ಮೂಡುತ್ತದೆ. ಬಲ್ಲವರು ಇನ್ನಾದರೂ ವ್ಯವಸ್ಥೆಯ ಶುದ್ಧೀಕರಣಕ್ಕೆ ಮುಂದಾಗಲಿ.