ರಾಜ್ಯದಲ್ಲಿ ಬರ ಪರಿಸ್ಥಿತಿ ಕುರಿತು ಚರ್ಚಿಸಲು ಕರೆಯಲಾದ ವಿಶೇಷ ಅಧಿವೇಶನ ಹೆಚ್ಚಿನ ಫಲ ನೀಡದೆ ಮುಗಿದಿದೆ. ರೈತರಿಗೆ 2500 ರೂಪಾಯಿ ತಾತ್ಕಾಲಿಕ ಪರಿಹಾರ ನೀಡುವುದಾಗಿ ಸರಕಾರ ತಿಳಿಸಿದೆ. ಇದು ಎಲ್ಲಿಗೂ ಸಾಲದು ಎಂದು ವಿಪಕ್ಷಗಳು ವಾಗ್ದಾಳಿ ನಡೆಸಿವೆ. 2500 ರೂಪಾಯಿಗಳ ಮೊತ್ತ ರೈತರ ಕುಟುಂಬದ ಒಂದು ತಿಂಗಳ ದಿನಸಿಗೂ ಸಾಕಾಗದು. ಈ ಮೊತ್ತವನ್ನು ಯಾರು, ಏಕೆ ನಿಗದಿಪಡಿಸಿದರೋ ತಿಳಿಯದು.
ಆದರೂ ತಕ್ಷಣಕ್ಕೆ ಈ ಮೊತ್ತವನ್ನು ಎಲ್ಲ ರೈತರ ಖಾತೆಗೆ ವರ್ಗಾಯಿಸುವುದು ಒಂದು ಕ್ಷಣಿಕ, ತಾತ್ಕಾಲಿಕ ಪರಿಹಾರ ಆಗಬಲ್ಲುದು. ಆದರೆ ಬರ ಪರಿಹಾರದ ನಿರ್ಣಯ ಮಾಡುವುದು ಹೀಗಲ್ಲ. ಅದಕ್ಕೊಂದು ವೈಜ್ಞಾನಿಕ ವಿಧಾನ ಇದೆ. ತಜ್ಞರು, ಅಧಿಕಾರಿಗಳು ಸೇರಿ ಅದನ್ನು ನಡೆಸಬೇಕು. ಪ್ರತಿ ಬೆಳೆ ಬೆಳೆಯುವವರಿಗೂ ಬೇರೆ ಬೇರೆ ಮೊತ್ತ ನಿಗದಿಪಡಿಸಬೇಕು. ಆಹಾರ ಬೆಳೆಗೆ, ವಾಣಿಜ್ಯ ಬೆಳೆಗೆ ಪ್ರತ್ಯೇಕ.
ಇದನ್ನೂ ಓದಿ: Rashmi Baralu Column: ಒತ್ತಡ ಕಳೆವ ಪ್ರಯೋಗ, ನೆಮ್ಮದಿಯ ಯೋಗ
ಮಲೆನಾಡು, ಕರಾವಳಿ, ಬಯಲು ಸೀಮೆ, ನೀರಾವರಿ ಪ್ರದೇಶ, ಒಣ ಜಾಗ ಹೀಗೆ ಪ್ರತಿ ಭಾಗದಲ್ಲೂ ಎಕರೆಗೆ ಇಂತಿಷ್ಟು ಎಂದು ನಿಗದಿಪಡಿಸುವ ಅಗತ್ಯವಿರುತ್ತದೆ. ಪ್ರತಿ ಪ್ರದೇಶದ ರೈತರ ಅವಶ್ಯಕತೆ, ಕಷ್ಟ, ಕೃಷಿಯ ರೀತಿ ನೀತಿ ಪ್ರತ್ಯೇಕ. ಇದನ್ನು ಪರಿಗಣಿಸಿ ಬರದಿಂದ ಆಗಿರುವ ನಷ್ಟ ಎಷ್ಟು, ಪರಿಹಾರವೆಷ್ಟು ಎಂಬುದನ್ನು ಲೆಕ್ಕಾಚಾರ ಮಾಡಬೇಕು.
ಕೇಂದ್ರದಿಂದ ಹಣ ತರಲು ಸಾಧ್ಯವಾದರೆ 70:30 ಅಥವಾ 60:40 ಅನುಪಾತದಲ್ಲಿ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಕೇಂದ್ರದಿಂದ ಪರಿಹಾರ ಮೊತ್ತ ತರುವಲ್ಲಿ ರಾಜ್ಯ ಸರಕಾರ ಇನ್ನಷ್ಟು ಒತ್ತಡ ಹಾಕಬೇಕಿದೆ. ರಾಜ್ಯದ ಬಿಜೆಪಿ ಸಂಸದರು ಕೂಡ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಿದ್ದು, ಪಕ್ಷಭೇದ ಮರೆತು ಎಲ್ಲರೂ ರೈತರ ಹಿತ ಕಾಯಬೇಕಿದೆ.
ರೈತರ ಸಾಲ ಮನ್ನಾ ಮಾಡುವ ಕುರಿತು ಕೇಂದ್ರ ಚಿಂತಿಸಬೇಕು ಹಾಗೂ ರಾಜ್ಯವೂ ಇದಕ್ಕೆ ಒತ್ತಡ ಹಾಕಬೇಕು. ಜನರಿಗೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ವ್ಯವಸ್ಥೆ ಆಗಬೇಕಾದ್ದು ಅತ್ಯಗತ್ಯ. ಸೆಪ್ಟೆಂಬರ್ ನಂತರ ಮಳೆ ಸಂಪೂರ್ಣ ನಿಲ್ಲಲಿದ್ದು, ಮುಂದಿನ ಬೇಸಿಗೆಯಲ್ಲಿ ಬರಗಾಲದ ನಿಜ ದರ್ಶನ ಆಗಲಿದೆ. ವಿಬಿ ಜಿ ರಾಮ್‌ಜಿ ಸೇರಿದಂತೆ ಉದ್ಯೋಗ ಖಾತರಿ ಯೋಜನೆಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಈಗ ಘೋಷಿಸಿರುವ ಪರಿಹಾರ ಮೊತ್ತು ನೇರವಾಗಿ ಅರ್ಹರನ್ನು ಸೇರುವಂತೆಯೂ ಖಾತರಿಪಡಿಸಿಕೊಳ್ಳಬೇಕಿದೆ.