ದೇಶದ ಸಮಾಜವನ್ನು ಪ್ರಸ್ತುತ ಕಾಡುತ್ತಿರುವ ಪಿಡುಗುಗಳು ಒಂದೆರಡಲ್ಲ. ಈ ಪೈಕಿ ಮಾದಕ ವಸ್ತು ಗಳ ವ್ಯಸನಕ್ಕೆ ಒಡ್ಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿರುವುದು ಆತಂಕಕಾರಿ ಬೆಳವಣಿಗೆ. ಕರ್ನಾ ಟಕವೂ ಇದಕ್ಕೆ ಹೊರತಾಗಿಲ್ಲ. ಇದನ್ನು ಮನಗಂಡು, ರಾಜ್ಯವನ್ನು ಡ್ರಗ್ಸ್-ಮುಕ್ತ ನೆಲೆಯಾಗಿಸ ಬೇಕು ಎಂಬ ಸದಾಶಯದೊಂದಿಗೆ ರಾಜ್ಯದ ಗೃಹ ಇಲಾಖೆಯು ಈ ಪಿಡುಗಿನ ವಿರುದ್ಧ ಸಮರವನ್ನೇ ಸಾರಿರುವುದು ಗೊತ್ತಿರುವ ಸಂಗತಿಯೇ.
ಇಷ್ಟಾಗಿಯೂ ನಮ್ಮಲ್ಲಿ ಡ್ರಗ್ಸ್ ಮಾರಾಟದ ದಂಧೆ ಅವ್ಯಾಹತವಾಗಿದೆ ಎನ್ನಲಾಗುತ್ತಿದೆ. ಕಳೆದ 3 ವರ್ಷಗಳಲ್ಲಿ ಬರೋಬ್ಬರಿ 400 ಕೋಟಿ ರುಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಇಲಾಖೆಯು ವಶಕ್ಕೆ ಪಡೆದುಕೊಂಡಿರುವುದೇ ಈ ಮಾತಿಗೆ ಪುಷ್ಟಿ ನೀಡುತ್ತದೆ. ಒಂದು ಕಾಲಕ್ಕೆ ಪಂಜಾಬ್ ರಾಜ್ಯ ವನ್ನು ‘ಉಡ್ತಾ ಪಂಜಾಬ್’ ಎಂಬ ಅಡ್ಡಹೆಸರಿನಿಂದ ಕರೆಯಲಾಗುತ್ತಿತ್ತು; ಮಾದಕ ದ್ರವ್ಯಗಳ ದಾಸರ ಸಂಖ್ಯೆ ಅಲ್ಲಿ ಗಣನೀಯ ಮಟ್ಟಕ್ಕೆ ಏರಿದ್ದುದೇ ಇದಕ್ಕೆ ಕಾರಣ.
ಇದನ್ನೂ ಓದಿ: Vishwavani Editorial: ಎಲ್ಲಿ ಹೋಯಿತು ಹಬ್ಬದ ವಾತಾವರಣ?
ಕರ್ನಾಟಕವೂ ಅಂಥ ಹಂತವನ್ನು ಮುಟ್ಟದಿರಲಿ ಎಂಬುದು ಸಹೃದಯಿಗಳ ಆಶಯ. ಯುವ ಜನರಲ್ಲಿ ಹೆಚ್ಚುತ್ತಿರುವ ನಶೆಯೆಡೆಗಿನ ಒಲವು, ಅತಿರೇಕದ ಮಟ್ಟಕ್ಕೇರಿರುವ ಪಾರ್ಟಿ ಸಂಸ್ಕೃತಿ, ಮಾನಸಿಕ ಒತ್ತಡ, ನೈತಿಕ ಮೌಲ್ಯಗಳ ಕೊರತೆ ಮುಂತಾದ ಅಂಶಗಳು ಡ್ರಗ್ಸ್ ಪಿಡುಗು ಹೆಚ್ಚಲು ಕಾರಣ ಎನ್ನಲಾಗುತ್ತಿದೆ.
ಹಾಗಾಗಿ, ಈ ಕಾರಣಗಳಿಗೆ ಮದ್ದು ಅರೆಯುವ ಕೆಲಸ ಪರಿಣಾಮಕಾರಿಯಾಗಿ ನಡೆಯಬೇಕಿದೆ. ಯುವಜನರೇ ನಮ್ಮ ದೇಶದ ಆಸ್ತಿ, ಇವರ ತಳಹದಿಯನ್ನೇ ಅಲುಗಾಡಿಸಿಬಿಟ್ಟರೆ ತಮ್ಮ ಹಿತಾಸಕ್ತಿ ಗಳ ನೆರವೇರಿಕೆ ಸಲೀಸು ಎಂದು ಪರಿಭಾವಿಸುವ ವಿದೇಶಿ ಪ್ರೇರಿತ ಕುತ್ಸಿತ ಶಕ್ತಿಗಳ ಸಂಚು ಕೂಡ ಮಾದಕ ವಸ್ತುಗಳ ಜಾಲವು ವ್ಯಾಪಕವಾಗುವುದಕ್ಕೆ ಕಾರಣವಾಗಿರಬಹುದು. ಆಳುಗರು ಈ ವಿಷಯವನ್ನು ಇನ್ನಷ್ಟು ಗಂಭೀರವಾಗಿ ಪರಿಗಣಿಸಲಿ..