ದೇಶಾದ್ಯಂತ ಮಾರಾಟವಾಗುವ ಎಲ್ಲ ಬ್ರ್ಯಾಂಡ್‌ಗಳ ಪ್ಯಾಕೇಜ್ಡ್ ಕುಡಿಯುವ ನೀರಿನ ಗುಣಮಟ್ಟ ವನ್ನು ವ್ಯಾಪಕವಾಗಿ ತಪಾಸಣೆ ಮಾಡಲು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್‌ಎಸ್‌ಎಐ) ಮುಂದಾಗಿದೆ. ಪ್ರಮುಖ ಬ್ರ್ಯಾಂಡ್ ‘ಬಿಸ್ಲೆರಿ’ಯಲ್ಲಿಯೇ ಅಪಾಯ ಕಾರಿ ಅಂಶಗಳು ಕಂಡುಬಂದಿದ್ದು, ದೀರ್ಘ ಕಾಲದಿಂದ ಇದನ್ನು ಸೇವಿಸಿದವರ ಆರೋಗ್ಯದ ಬಗ್ಗೆ ಕಳವಳ ಹುಟ್ಟುವಂತಿದೆ.
ಇದರ ಜೊತೆಗೇ ಕರ್ನಾಟಕದಲ್ಲಿ ಕೂಡ, 112 ನೀರು ಶುದ್ಧೀಕರಣ ಮತ್ತು ಮಿನರಲ್ ವಾಟರ್ ಘಟಕಗಳ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಲಾಗಿದ್ದು, ಲೋಪದೋಷ ಕಂಡು ಬಂದ 12 ಫ್ಯಾಕ್ಟರಿಗಳಿಗೆ ಬೀಗ ಹಾಕಲಾಗಿದೆ. ಇದು ಬಹಳ ಆಘಾತಕಾರಿ ವಿಷಯ. ಶುದ್ಧ ನೀರು ಎಂದು ನಾವು ಭಾವಿಸಿ, ನಂಬಿ ಕುಡಿಯುವ ನೀರೇ ಹಾಲಾಹಲವಾಗಿ ಬಿಟ್ಟರೆ ಗತಿಯೇನು? ಇದರ ಬಗ್ಗೆ ಶೀಘ್ರ ತನಿಖೆ ನಡೆದು, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು.
ಇದರೊಂದಿಗೆ, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ನಗರಾಡಳಿತಗಳಿಂದ ಅನುಮತಿ ಪಡೆದು ಖಾಸಗಿಯವರು ನಡೆಸುವ ನೀರು ಶುದ್ಧೀಕರಣ ಘಟಕಗಳಿವೆ. ಐದು ರೂಪಾಯಿಗೆ ನೀರು ನೀಡುವ ಇವುಗಳನ್ನು ಸಾಮಾನ್ಯ ಜನತೆ ಹೆಚ್ಚಾಗಿ ಬಳಸುತ್ತಾರೆ. ಆದರೆ ಇವುಗಳಲ್ಲಿನ ನೀರಿಗೂ ಯಾವುದೇ ಶುದ್ಧತೆಯ ಖಾತ್ರಿ ಇಲ್ಲ.
ಇಲ್ಲಿ ಫಿಲ್ಟರ್‌ಗಳನ್ನು ಯಾವಾಗ ಚೇಂಜ್ ಮಾಡುತ್ತಾರೋ, ಮಾಡುತ್ತಾರೋ ಇಲ್ಲವೋ, ಅದೂ ತಿಳಿಯುವುದಿಲ್ಲ. ಈ ಬಗ್ಗೆ ಸಾರ್ವಜನಿಕ ನಿಗಾ ಇಡುವ ವ್ಯವಸ್ಥೆ ಆಗಬೇಕು. ಕಾವೇರಿ ನೀರು ಬಳಸುತ್ತಾರೋ, ಬೋರ್‌ವೆಲ್ ನೀರೋ, ನೀರಿನ ಪಿಎಚ್ ಪ್ರಮಾಣ ಎಷ್ಟು, ಯಾವ ಫಿಲ್ಟರ್ ಬಳಸಲಾಗುತ್ತಿದೆ, ಯಾವಾಗ ಬದಲಾಯಿಸಲಾಗಿದೆ, ಸ್ವಚ್ಛತೆಯ ವ್ಯವಸ್ಥೆ ಹೇಗೆ, ಇದೆಲ್ಲವನ್ನೂ ಬರೆದು ಪ್ರದರ್ಶಿಸುವುದು ಕಡ್ಡಾಯ ಆಗಬೇಕು.