ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಬೇಕಾದ ನಾಲ್ಕು ಸ್ಥಾನಗಳಿಗೆ ಇದೇ 18ರಂದು ನಡೆಯುವ ಚುನಾವಣೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಂಡಿದೆ. ಕಾಂಗ್ರೆಸ್‌ನಿಂದ ಎಂ.ಮಲ್ಲಿಕಾರ್ಜುನ ಖರ್ಗೆ, ಪವನ್ ಖೇರಾ, ಮನ್ಸೂರ್ ಅಲಿ ಖಾನ್ ಸ್ಪರ್ಧಿಸಿದ್ದರೆ, ಬಿಜೆಪಿಯಿಂದ ಪ್ರೊ.ಎಂ. ನಾಗರಾಜ್ ಅವರು ಸ್ಪರ್ಧಿಸಿದ್ದಾರೆ.
ಜೂನ್ 25ಕ್ಕೆ ಖರ್ಗೆ ಅವರ ಮೇಲ್ಮನೆ ಸದಸ್ಯತ್ವ ಮುಕ್ತಾಯಗೊಳ್ಳಲಿದೆ. ಬಿಜೆಪಿಯಿಂದ ಮಿತ್ರಪಕ್ಷ ಜೆಡಿಎಸ್‌ನ ಹಿರಿಯ ಮುತ್ಸದ್ದಿ ದೇವೇಗೌಡರನ್ನು ನಿಲ್ಲಿಸಬಹುದು ಎಂಬ ನಿರೀಕ್ಷೆಯಿತ್ತು. ತಾನು ಮತ್ತೊಮ್ಮೆ ರಾಜ್ಯಸಭೆ ಸ್ಥಾನದ ಆಕಾಂಕ್ಷಿಯಲ್ಲ ಎಂದು ದೇವೇಗೌಡರೇ ತಿಳಿಸಿದ್ದಾರೆ. ಮೇಲಿನ ಪಟ್ಟಿಯಲ್ಲಿ ಕಾಣಬರುವ ಇತರ ಹೆಸರ‍್ಗುಳ ಮೇಲೆ ಅಂಥ ನಿರೀಕ್ಷೆಗಳೇನೂ ಇಲ್ಲ.
ರಾಜ್ಯದವರೇ ಅಲ್ಲದ ಪವನ್ ಖೇರಾ ಥರದವರಿಂದ ಕರ್ನಾಟಕ ನಿರೀಕ್ಷಿಸುವುದಾದರೂ ಏನನ್ನು? ಆದರೆ ದೇವೇಗೌಡರು ರಾಜ್ಯಸಭೆಯಲ್ಲಿ ಇದ್ದಾಗ ಕರ್ನಾಟಕದ ಹಿತಾಸಕ್ತಿಗಾಗಿ ಸಾಕಷ್ಟು ಮಾತ ನಾಡಿದ್ದಾರೆ. ನೀರಾವರಿ ವಿಚಾರ ಬಂದಾಗ ಅವರನ್ನು ಕಟ್ಟಿ ಹಾಕುವವರೇ ಇಲ್ಲ. ಪ್ರಧಾನಿಯಾಗಿ ಗಳಿಸಿಕೊಂಡ ಅನುಭವವನ್ನೂ ಧಾರೆ ಎರೆದು ಅವರು ಕರ್ನಾಟಕಕ್ಕೆ ಆಗಬೇಕಾದ ಕೆಲಸಗಳ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ: Vishwavani Editorial: ದಾಖಲೆ ಬರೆದ ಪ್ರಧಾನಿ
ಪ್ರಧಾನಿ ಮೋದಿ ಅವರ ಜೊತೆಗಿರುವ ಆತ್ಮೀಯತೆಯ ಕಾರಣದಿಂದ ಕೆಲಸಗಳನ್ನು ಸುಸೂತ್ರವಾಗಿ ಮಾಡಿಸಿಕೊಳ್ಳುವ ಛಾತಿಯೂ ಅವರಿಗಿತ್ತು. ಮಾಜಿ ಪ್ರಧಾನಿಗಳೂ ಆದ ಈ ಹಿರಿಯ ನಾಯಕರು ಸದನದ ಎಲ್ಲ ಬಗೆಯ ಗೌರವಕ್ಕೆ ಅರ್ಹರಾಗಿದ್ದವರು. ಆದರೆ ವಯಸ್ಸು, ಅನಾರೋಗ್ಯದ ಕಾರಣ ದಿಂದ ರಾಜ್ಯಸಭೆಗೆ ಹೋಗುತ್ತಿಲ್ಲ. ಅವರ ಸ್ಥಾನದಲ್ಲಿ ಇನ್ಯಾರನ್ನಾದರೂ ಒಪ್ಪಿಕೊಳ್ಳಬೇಕು ಎಂದರೆ ಕಾಂಗ್ರೆಸ್ ಪಟ್ಟಿಯಲ್ಲಿರುವ ಖರ್ಗೆಯವರತ್ತ ನೊಡಬೇಕು. ಖರ್ಗೆ ಕೂಡ ಹಿರಿಯ ಮುತ್ಸದ್ದಿ, ಅತ್ಯುತ್ತಮ ಸದನ ಪಟು ಎಂಬ ಹಿರಿಮೆಗೆ ಪಾತ್ರರಾದವರು.
ವಿಪಕ್ಷ ನಾಯಕನಾಗಿ ತಮ್ಮ ಪಾತ್ರವನ್ನು ಸಕ್ರಿಯವಾಗಿ ನಿರ್ವಹಿಸಿದ್ದಾರೆ. ಒಂಬತ್ತು ಬಾರಿ ಶಾಸಕ ರಾಗಿ, ಎರಡು ಬಾರಿ ಕೇಂದ್ರದಲ್ಲಿ ಸಚಿವರಾಗಿ ಅನುಭವ ಹೊಂದಿದವರು. ಸದ್ಯ ಬಿಜೆಪಿಯ ಎದುರು ಪ್ರಬಲ ವಿಪಕ್ಷ ಒಕ್ಕೂಟವನ್ನು ಸಂಘಟಿಸುವ ಹೊಣೆಯನ್ನೂ ಹೊತ್ತಿದ್ದಾರೆ. ಅದೃಷ್ಟ ಅವರ ಕಡೆಗಿದ್ದಿದ್ದರೆ ಈ ಬಾರಿ ಕರ್ನಾಟಕದ ಮುಖ್ಯಮಂತ್ರಿಯೂ ಆಗಬಹುದಿತ್ತು.
ಆದರೆ ರಾಜ್ಯದಲ್ಲಿದ್ದು ಮಾಡಬೇಕಾದ ಕೆಲಸವನ್ನು ರಾಜ್ಯಸಭೆಯಲ್ಲಿದ್ದೂ ಮಾಡಬಹುದು ಎಂಬುದನ್ನು ಅವರು ತೋರಿಸಿಕೊಡಬಹುದು. ತಮಿಳುನಾಡಿನಲ್ಲಿ ಕಾಂಗ್ರೆಸ್ ಮಿತ್ರಪಕ್ಷ ಆಡಳಿತ ದಲ್ಲಿದ್ದು, ಕಾವೇರಿ ನೀರಿನಂಥ ಸಮಸ್ಯೆ ಬಂದಾಗ ಅವರ ಮನವೊಲಿಸುವುದು, ಹಲವು ನದಿ ನೀರು ತಗಾದೆಗಳ ಮಧ್ಯಸ್ಥಿಕೆ ವಹಿಸುವುದು ಮುಂತಾದ ಕೆಲಸ ಅವರ ಮುಂದಿದೆ. ದೇವೇಗೌಡರ ನಿರ್ಗಮನ ಹಾಗೂ ಖರ್ಗೆ ಆಗಮನ ರಾಜ್ಯಕ್ಕೆ ಒಳಿತನ್ನು ತರಲಿ.