ಈಗ ಮಳೆಗಾಲ ಎಂದು ಹೇಳುವ ಯಾವ ಸೂಚನೆಯೂ ರಾಜಧಾನಿ, ಅದರ ಸುತ್ತಮುತ್ತ ಹಾಗೂ ಬಯಲು ಸೀಮೆಯಲ್ಲಿ ಕಾಣಿಸುತ್ತಿಲ್ಲ. ಮಲೆನಾಡಿನ ಹಲವು ಕಡೆ ಅಲ್ಪಸ್ವಲ್ಪ ಮಳೆಯಾಗಿದೆ ಅಷ್ಟೆ. ಜೂನ್ ತಿಂಗಳಲ್ಲಿ ಏನೂ ಮಳೆಯಾಗದೆ, ಅಣೆಕಟ್ಟುಗಳು ಒಣಗಿಯೇ ಇದ್ದವು. ನಂತರ ಜುಲೈಯಲ್ಲಿ ಸ್ವಲ್ಪ ಬಂತಾದರೂ ಅದೂ ವಾಡಿಕೆಯ ಮಳೆಯಲ್ಲ. ಅಣೆಕಟ್ಟುಗಳಲ್ಲಿ ಶೇ.50ರಷ್ಟೂ ನೀರು ತುಂಬಿಲ್ಲ. ಈ ನಡುವೆ, ಮಳೆಗಾಲದಲ್ಲೂ ರಾಜ್ಯದ 16 ಜಿಲ್ಲೆಗಳಲ್ಲಿ 30 ಡಿಗ್ರಿ ಸೆಲ್ಷಿಯಸ್‌ಗೂ ಅಧಿಕ ತಾಪಮಾನ ದಾಖಲಾಗಿದೆ.
ರಾಜಧಾನಿ ಹಾಗೂ ಮಲೆನಾಡಿನ ಹಲವು ಕಡೆಗಳಲ್ಲಿ ಒಂದೆರಡು ಮಳೆ ಬಿದ್ದ ಕೂಡಲೇ ವಾತಾ ವರಣ ತಂಪಾಗುತ್ತಿತ್ತು. ಆದರೆ ಈ ಸಲ ಅಂಥದೇನೂ ಕಾಣುತ್ತಿಲ್ಲ. ಬೆಂಗಳೂರಿನಲ್ಲಿ ಗರಿಷ್ಠ ಅಂದರೆ 33 ಡಿಗ್ರಿ ದಾಖಲಾಗಿದೆ. ಉಳಿದ ಜಿಲ್ಲೆಗಳಲ್ಲಿ 30 ರಿಂದ 38 ಡಿಗ್ರಿ. ರಾಜ್ಯದಲ್ಲಿ ಶೇ.29ರಷ್ಟು ಮಳೆಯ ಕೊರತೆ ಕಾಣಿಸಿದೆ.
ಇದನ್ನೂ ಓದಿ: Vishwavani Editorial: ನಾಡಗೀತೆಯಲ್ಲಿ ಬೌದ್ಧ ಧರ್ಮ
ಕರಾವಳಿ, ಉತ್ತರ ಕರ್ನಾಟಕದಲ್ಲಿ ಬಿಸಿ ವಾತಾವರಣ. ಹೀಟ್ ವೇವ್‌ನ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಈ ಹೊತ್ತಿನಲ್ಲಿ ಬೀಚ್‌ಗಳಿಗೆ ಹೋದರೆ ಮೈ ಸುಡುವ ಬಿಸಿಲು ಕಾಣಿಸುತ್ತಿದೆ. ಮಳೆ ಮಾರುತಗಳೂ ದುರ್ಬಲವಾದ ಮುನ್ಸೂಚನೆಯಲ್ಲಿ ತಿಂಗಳ ಹಿಂದೆಯೇ ನೀಡಿದ್ದವು. ಇದು ಸ್ಪಷ್ಟವಾಗಿ ಬರದ ಸೂಚನೆ. ರಾಜ್ಯಕ್ಕೆ ಬರ ಅಧ್ಯಯನ ತಂಡ ಕಳುಹಿಸಿ ಎಂದು ಪ್ರಧಾನಿಗೆ ಸಿಎಂ ಪತ್ರ ಬರೆದಿದ್ದಾರೆ.
ಪತ್ರ ಬರೆದರೆ ಸಾಲದು, ಇನ್ನೂ ಅಗತ್ಯವಾದ ಇತರ ಕ್ರಮಗಳನ್ನೂ ಕೈಗೊಳ್ಳಬೇಕಿದೆ. ಮುಖ್ಯವಾಗಿ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರುಗಳಿಲ್ಲ. ಸಚಿವ ಸಂಪುಟ ವಿಸ್ತರಣೆ ಆಗದೆ, ಯಾರ ಹೊಣೆ ಏನು ಎಂದು ಗೊತ್ತಿಲ್ಲದೆ ಯಾರೂ ಕಾರ್ಯವಿಸ್ತರಣೆ ಮಾಡಲು ಸಿದ್ಧರಾಗಿಲ್ಲ. ಬರ ಪರಿಹಾರ ಕ್ರಮ ಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತಗಳಿಗೆ ಚಾಟಿ ಬೀಸಲು ಸಚಿವರು ಬೇಕು. ಬರ ನಿರ್ವಹಣೆ ಯನ್ನು ಅಧಿಕಾರಿಗಳಿಗೆ ಬಿಡುವಂತಿಲ್ಲ. ಉತ್ತರ ಕರ್ನಾಟಕದ ಹಲವು ಕಡೆಗಳಿಂದ ಗುಳೆ ಶುರುವಾಗಿದೆ.
ಕೃಷಿ ಕೂಲಿ ಕಾರ್ಮಿಕರಿಗೆ ಮನರೇಗಾ ಹೋಗಿ ವಿಬಿ ಜಿರಾಮ್ ಜಿಲ್ಲಾ ಕಾಯಿದೆ ಬಂದಿದೆ. ಅದನ್ನಾ ದರೂ ಸಮರ್ಪಕವಾಗಿ ಅನುಷ್ಠಾನಿಸಿ ದಿನಗೂಲಿ ಖಾತ್ರಿ ಒದಗಿಸುವ ಕಾರ್ಯ ಆಗಬೇಕಿದೆ. ತಾಪಮಾನ ಹೆಚ್ಚಳದಿಂದ ಜನ- ಜಾನುವಾರು ಮೇಲಾಗುವ ದುಷ್ಪರಿಣಾಮಗಳನ್ನು ನಿರ್ವಹಿಸಲು ಪಶುಸಂಗೋಪನೆ ಇಲಾಖೆ, ಆರೋಗ್ಯ ಇಲಾಖೆಗಳು ಸಜ್ಜಾಗಬೇಕಿವೆ. ಬರ ವಿಧಿಬರಹವೇ ಆದರೂ, ಅದರ ಅನುಭವಿಸುವಿಕೆ ಯ ಪ್ರಮಾಣ ಶಾಸಕಾಂಗ, ಕಾರ್ಯಾಂಗದ ಕ್ರಿಯಾಶಕ್ತಿಯನ್ನು ಅವಲಂಬಿಸಿದೆ.