ರಾಜ್ಯದಲ್ಲಿ ಜವಾಬ್ದಾರಿಯುತ ಪರಿಸರ ಪ್ರವಾಸೋದ್ಯಮ ವಿಸ್ತರಿಸಲು ಹಾಗೂ ಜಂಗಲ್ ಲಾಡ್ಜಸ್ ಆಂಡ್ ರೆಸಾರ್ಟ್ಸ್ ಆಸ್ತಿಗಳನ್ನು ಮೇಲ್ದರ್ಜೆಗೇರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ. ಕಬಿನಿ, ಬಂಡೀಪುರ ಹಾಗೂ ಕೆಮ್ಮಣ್ಣುಗುಂಡಿ ಸೇರಿದಂತೆ ಪ್ರಮುಖ ತಾಣಗಳಲ್ಲಿನ ಕೊಠಡಿಗಳು, ಸ್ವಚ್ಛತೆ, ಆತಿಥ್ಯ ಮತ್ತು ಪ್ರವಾಸಿ ಸೌಲಭ್ಯಗಳನ್ನು ಸುಧಾರಿಸಲು ವಿಶೇಷ ಆದ್ಯತೆ ನೀಡಲಾಗುತ್ತಿದೆ.
ಮುತ್ತೋಡಿ ನೇಚರ್ ಕ್ಯಾಂಪ್ ಸೇರಿದಂತೆ ಪ್ರವಾಸೋದ್ಯಮಕ್ಕೆ ಪೂರಕವಾಗಿರುವ ಸೂಕ್ತ ಅರಣ್ಯ ಪ್ರದೇಶಗಳನ್ನು ಗುರುತಿಸಿ, ಹೊಸ ಸಫಾರಿ, ಟ್ರೆಕ್ಕಿಂಗ್ ಹಾಗೂ ಇತರೆ ಪ್ರಕೃತಿ ಆಧಾರಿತ ಚಟುವಟಿಕೆ ಆರಂಭಿಸುವ ಸಾಧ್ಯತೆ ಕುರಿತು ಪರಿಶೀಲಿಸಲಾಗುತ್ತಿದೆ. ಆದರೆ, ಪರಿಸರ ಹಾಗೂ ಅರಣ್ಯ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಕೇರಳ ರಾಜ್ಯದಿಂದ ಕರ್ನಾಟಕ ತುಂಬಾ ಕಲಿಯುವುದಿದೆ.
ಸದ್ಯ ಜಂಗಲ್ ಲಾಡ್ಜಸ್ ಆಂಡ್ ರೆಸಾರ್ಟ್ಸ್ ದರಗಳನ್ನು ನೋಡಿದರೆ, ಅವುಗಳಲ್ಲಿ ಒಂದು ದಿನವಾದರೂ ಉಳಿದುಕೊಳ್ಳಲು ಶ್ರೀಸಾಮಾನ್ಯರಿಂದ ಸಾಧ್ಯವಿಲ್ಲ. ಕಬಿನಿಯ ಜಂಗಲ್ ಲಾಡ್ಜಸ್ ಆಂಡ್ ರೆಸಾರ್ಟ್ಸ್ನಲ್ಲಿ ಉಳಿಯಬೇಕಿದ್ದರೆ ಮಧ್ಯಮ ವರ್ಗದ ಕುಟುಂಬದ ಯಜಮಾನ ತನ್ನ ಕಿಡ್ನಿಯನ್ನೇ ಮಾರಬೇಕಾದೀತು. ಇದು ಯಾವುದೇ ರೀತಿಯಲ್ಲೂ ಪ್ರವಾಸೋದ್ಯಮಕ್ಕೆ ಪೋಷಕವಲ್ಲ. 25000 ರುಪಾಯಿಯಲ್ಲಿ ಇಂದು ಥಾಯ್ಲೆಂಡ್ ಪ್ರವಾಸ ಮಾಡಿ ಬರಲು ಸಾಧ್ಯವಿದೆ, ಅದರೆ ಕಬಿನಿಯಲ್ಲಿ ಒಂದು ದಿನ ಉಳಿದುಕೊಳ್ಳಲು ಅಸಾಧ್ಯ.
ಸದ್ಯ ವಿದೇಶಿಗರಿಗೆ, ಕುಬೇರರಿಗೆ ಮಾತ್ರ ದಕ್ಕುವಂತಿದೆ. ಕೆಮ್ಮಣ್ಣುಗುಂಡಿಯಲ್ಲಿ ಹಾರ್ಟಿಕಲ್ಚರ್ ಡಿಪಾರ್ಟ್ಮೆಂಟ್ ಕೈಯಲ್ಲಿದ್ದು, ಕಡಿಮೆ ದರದಲ್ಲಿ ಲಭ್ಯವಿದ್ದ ಗೆಸ್ಟ್ ಹೌಸ್ಗಳು ಜೆಎಲ್ಆರ್ ಕೈಗೆ ಸೇರಿದ ಬಳಿಕ ಚಿನ್ನಕ್ಕಿಂತ ತುಟ್ಟಿಯಾಗಿವೆ. ಕೇರಳ ಈ ವಿಚಾರದಲ್ಲಿ ಸುಲಭ ಲಭ್ಯತೆಯ ದರಗಳನ್ನೂ ಇರಿಸಿದೆ, ಪ್ರಕೃತಿಯ ಸ್ವಚ್ಛತೆಯನ್ನೂ ಕಾಪಾಡಿಕೊಂಡಿದೆ. ಇಕೋ ಟೂರಿಸಂ ಹೆಸರಿನಲ್ಲಿ ಆ ರಾಜ್ಯ, ತನ್ನಲ್ಲಿನ ಐಬಿಗಳು, ಅರಣ್ಯ ವಸತಿ ಗೃಹಗಳು, ಪಿಡಬ್ಲ್ಯುಡಿ ಅತಿಥಿ ಗೃಹಗಳಲ್ಲಿ ಪ್ರವಾಸಿಗರಿಗೂ ಉಳಿದುಕೊಳ್ಳಲು ಲಭ್ಯತೆಯದ ದರದಲ್ಲಿ ಅವಕಾಶ ನೀಡುತ್ತಿದೆ.
ನಮ್ಮಲ್ಲಿನ ಐಬಿಗಳು, ಗೆಸ್ಟ್ ಹೌಸ್ಗಳಲ್ಲಿ ಅಽಕಾರಿಗಳು, ಶಾಸಕರು- ಸಚಿವರದ್ದೇ ದರ್ಬಾರ್. ಇವರು ಬಂದಾಗ ಮಾತ್ರ ತೆರೆದುಕೊಳ್ಳುವ ಇಲ್ಲಿನ ಆತಿಥ್ಯ ವ್ಯವಸ್ಥೆ, ಉಳಿದಂತೆ ಪಾಳು ಬೀಳುತ್ತದೆ. ಅಧಿಕಾರಶಾಹಿಯ ಕೈಯಲ್ಲಿರುವ ಇವು ಅಕ್ಷರಶಃ ಭೂತ ಬಂಗಲೆಗಳಾಗಿವೆ. ಇವನ್ನೆಲ್ಲ ಸರಿಪಡಿಸದೇ ಹೋದರೆ, ಆಂತರಿಕ ಪ್ರವಾಸೋದ್ಯಮ ಬೆಳೆಯದು. ನಮ್ಮವರು ಇತರ ಕಡೆ ಪ್ರವಾಸ ಹೋಗಿ ಅಲ್ಲಿನ ಆರ್ಥಿಕತೆಯನ್ನು ಬೆಳೆಸುತ್ತಾರೆ, ಅಷ್ಟೆ.