ಮಧ್ಯಪ್ರಾಚ್ಯ ವಲಯದಲ್ಲಿ ಭುಗಿಲೆದ್ದಿರುವ ಸಮರಜ್ವಾಲೆಯು ಅಲ್ಲಿ ವಿವಿಧ ತೆರನಾದ ನಷ್ಟಗಳನ್ನು ಭಾರಿ ಪ್ರಮಾಣದಲ್ಲಿ ಉಂಟುಮಾಡಿರುವುದರ ಜತೆಗೆ, ವಿಶ್ವದ ವಿವಿಧ ದೇಶಗಳಿಗೂ ತನ್ನ ಬಿಸಿಯನ್ನು ಮುಟ್ಟಿಸಿದೆ. ಅಡುಗೆ ಅನಿಲದ ಅಭಾವ ಅಪ್ಪಳಿಸಿರುವ ಹಿನ್ನೆಲೆಯಲ್ಲಿ ದೇಶದ ವಿವಿಧೆಡೆ ಹೋಟೆಲ್‌ಗಳ ವ್ಯವಹಾರಕ್ಕೆ ಸಂಚಕಾರ ಒದಗಿದೆ.
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಯ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗೇನಿಲ್ಲ. ವ್ಯವಹಾರದ ಮುಖ್ಯ ಆಧಾರವಾಗಿದ್ದ ಅಡುಗೆ ಅನಿಲದ ಪೂರೈಕೆಗೆ ಕತ್ತರಿ ಬಿದ್ದಿರುವ ಕಾರಣಕ್ಕೆ ಕೆಲವು ಹೋಟೆಲ್‌ಗಳು ವಿಧಿಯಿಲ್ಲದೆ ಬಾಗಿಲು ಮುಚ್ಚಿಕೊಂಡಿ ದ್ದರೆ, ಮತ್ತೆ ಕೆಲ ಹೋಟೆಲ್‌ಗಳು ಸೌದೆ ಮತ್ತಿತರ ಪರ್ಯಾಯ ಇಂಧನಗಳನ್ನು ಬಳಸಿ ತಿಂಡಿ-ತಿನಿಸುಗಳನ್ನು ತಯಾರಿಸಿ ಗ್ರಾಹಕರ ಹೊಟ್ಟೆಯನ್ನು ತಂಪಾಗಿಸುವ ಯತ್ನದಲ್ಲಿವೆ.
ಇದನ್ನೂ ಓದಿ: Vishwavani Editorial: ಬಿಪಿಎಲ್ ಮಿತಿ ಏರಿಕೆ ಸರಿ, ಆದರೆ...
ಇದು ಎಷ್ಟು ದಿನಗಳವರೆಗೆ ಎಳೆಸಿಕೊಂಡು ಹೋಗುವುದೋ ಆ ಭಗವಂತನೇ ಬಲ್ಲ. ಇಷ್ಟು ಸಾಲದೆಂಬಂತೆ, ಈಗ ಖಾದ್ಯತೈಲದ ಬೆಲೆಯೇ ಲೀಟರ್‌ಗೆ 10 ರುಪಾಯಿಯಂತೆ ಏರಿರುವು ದರಿಂದ ಗ್ರಾಹಕರಿಗೆ ಬರೆ ಬಿದ್ದಂತಾಗಿದೆ.
ಇನ್ನೇನು ಯುಗಾದಿ ಹಬ್ಬ ಸಮೀಪಿಸುತ್ತಿರುವ ಸಂದರ್ಭವಿದು, ಅಷ್ಟು ಹೊತ್ತಿಗೆ ಬೆಲೆಯೇರಿಕೆ ಎಂಬ ಪೆಡಂಭೂತ ಮತ್ತಿನ್ನಾವ ರೌದ್ರರೂಪವನ್ನು ತಳೆಯಲಿದೆ, ಯಾವೆಲ್ಲಾ ದಿನಬಳಕೆಯ ವಸ್ತುಗಳು ಇದರ ಕಬಂಧಬಾಹುವಿನಲ್ಲಿ ಸಿಲುಕಲಿವೆ? ಎಂಬ ಆತಂಕವು ಜನರನ್ನು ಕಾಡುತ್ತಿರುವುದು ಸುಳ್ಳಲ್ಲ.
ಹಬ್ಬ-ಹರಿದಿನಗಳ ಸಂದರ್ಭದಲ್ಲಿ ‘ವಿನಾಕಾರಣ’ ಬೆಲೆಯೇರಿಕೆ ಆಗುವಂಥ ಬೆಳವಣಿಗೆ ಯನ್ನು ನಮ್ಮ ಜನರು ಈಗಾಗಲೇ ಸಾಕಷ್ಟು ಬಾರಿ ಕಂಡಿದ್ದಾರೆ; ಆದರೆ ಈ ಬಾರಿಯದು ಕೊಂಚ ವಿಲಕ್ಷಣ ಕಾರಣ. ಯಾವುದೋ ಒಂದಿಷ್ಟು ದೇಶಗಳ ‘ದ್ವೇಷ-ಮತ್ಸರ’ಗಳಿಗೆ, ಯುದ್ಧದ ಸಹಭಾಗಿಗಳಲ್ಲದವರೂ ಬೆಲೆ ತೆರಬೇಕಾಗಿ ಬಂದಿರುವುದು ವಿಷಾದನೀಯ.
ಎಲ್ಲ ಸಮಸ್ಯೆಗಳಿಗೂ ಯುದ್ಧವೇ ಪರಿಹಾರ ಎಂಬ ‘ಮೂಢನಂಬಿಕೆ’ಯ ಬಿಗಿಮುಷ್ಟಿ ಯಿಂದ ಕೆಲವಷ್ಟು ಮಹಾನುಭಾವರು ಬಿಡಿಸಿಕೊಂಡು ಹೊರಬಂದು, ಸಂಘರ್ಷಕ್ಕೆ ಇತಿಶ್ರೀ ಹಾಡುವವರೆಗೂ ಈ ಅನಿಶ್ಚಿತತೆ ತಪ್ಪಿದ್ದಲ್ಲ. ಆದರೆ ಇವರಿಗೆ ಬುದ್ಧಿ ಹೇಳೋ ರ‍್ಯಾರು? ಬೆಕ್ಕಿನ ಕೊರಳಿಗೆ ಗಂಟೆ ಕಟ್ಟೋರ‍್ಯಾರು?