ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಧರೆ ಹೊತ್ತಿ ಉರಿದರೆ ನಿಲ್ಲಲಾಗದು..

ಹಿಮಾಚಲ ಪ್ರದೇಶದಲ್ಲೂ ಮೇಘಸ್ಫೋಟ ಸಂಭವಿಸಿದೆ. ಅಲ್ಲಿನ ಕುಲು ಜಿಲ್ಲೆ ಸೇರಿದಂತೆ ಹಲವು ಭಾಗ ಗಳಲ್ಲಿ ಈಗಾಗಲೇ 350ಕ್ಕೂ ಹೆಚ್ಚು ರಸ್ತೆಗಳು ಮುಚ್ಚಿಹೋಗಿರುವ, ಹತ್ತತ್ತಿರ 600 ವಿದ್ಯುತ್ ಟ್ರಾನ್ಸ್ ಫಾರ್ಮರ್‌ಗಳಿಗೆ ಹಾನಿಯಾಗಿರುವ, 170ಕ್ಕೂ ಹೆಚ್ಚಿನ ನೀರು ಸರಬರಾಜು ಯೋಜನೆಗಳಿಗೆ ಅಡ್ಡಿಯಾಗಿ ರುವ ವರದಿಗಳು ಬಂದಿವೆ.

Vishwavani Editorial: ಧರೆ ಹೊತ್ತಿ ಉರಿದರೆ ನಿಲ್ಲಲಾಗದು..

Ashok Nayak Ashok Nayak Aug 11, 2025 7:02 AM

ಉತ್ತರಾಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯ ಕೆಲವೆಡೆ ಸಂಭವಿಸಿದ ಭೀಕರ ಮೇಘಸ್ಫೋಟ ಮತ್ತು ಅದರಿಂದ ಸೃಷ್ಟಿಯಾದ ಪ್ರವಾಹದಿಂದಾಗಿ ಎಷ್ಟೆಲ್ಲಾ ಜೀವಹಾನಿ ಮತ್ತು ಸ್ವತ್ತುನಷ್ಟ ಆದವು ಎಂಬುದು ಈಗಾಗಲೇ ಗೊತ್ತಿರುವ ಸಂಗತಿಯೇ. ಅಲ್ಲಿನ ಖೀರ್ ಗಂಗಾ ಹೊಳೆಯಲ್ಲಿ ಹೆಚ್ಚುತ್ತಲೇ ಹೋದ ನೀರಿನ ಮಟ್ಟವು ವ್ಯಾಪಕ ವಿನಾಶವನ್ನು ಉಂಟು ಮಾಡಿದ್ದು, ಹಳ್ಳಿಯೊಂದರ ಕೆಲವು ಭಾಗಗಳೇ ಕೊಚ್ಚಿಹೋಗಿದ್ದು ಹಾಗೂ ಹಲವು ಮಂದಿ ನಾಪತ್ತೆಯಾಗಿದ್ದು ಈ ಪ್ರಕೃತಿ ವಿಕೋಪದ ಭೀಕರತೆಗೆ ಸಾಕ್ಷಿ.

ಇದು ಮನದಲ್ಲಿನ್ನೂ ಹಸಿರಾಗಿರುವಾಗಲೇ ಹಿಮಾಚಲ ಪ್ರದೇಶದಲ್ಲೂ ಮೇಘಸ್ಫೋಟ ಸಂಭವಿಸಿದೆ. ಅಲ್ಲಿನ ಕುಲು ಜಿಲ್ಲೆ ಸೇರಿದಂತೆ ಹಲವು ಭಾಗಗಳಲ್ಲಿ ಈಗಾಗಲೇ 350ಕ್ಕೂ ಹೆಚ್ಚು ರಸ್ತೆಗಳು ಮುಚ್ಚಿಹೋಗಿರುವ, ಹತ್ತತ್ತಿರ 600 ವಿದ್ಯುತ್ ಟ್ರಾನ್ಸ್ ಫಾರ್ಮರ್‌ಗಳಿಗೆ ಹಾನಿಯಾಗಿರುವ, 170ಕ್ಕೂ ಹೆಚ್ಚಿನ ನೀರು ಸರಬರಾಜು ಯೋಜನೆಗಳಿಗೆ ಅಡ್ಡಿಯಾಗಿರುವ ವರದಿಗಳು ಬಂದಿವೆ.

ಇದನ್ನೂ ಓದಿ: Vishwavani Editorial: ಕಿಡಿಗೇಡಿಗಳನ್ನು ಬಲಿ ಹಾಕಿ

ಸಾಲದೆಂಬಂತೆ, ಪ್ರವಾಹ, ಭೂಕುಸಿತ ಮತ್ತು ಮನೆಕುಸಿತಗಳಿಂದಾಗಿ 200ಕ್ಕೂ ಹೆಚ್ಚು ಮಂದಿ ಅಸು ನೀಗಿದ್ದಾರೆ ಎನ್ನಲಾಗಿದೆ. ‘ಒಲೆ ಹೊತ್ತಿ ಉರಿದಡೆ ನಿಲಬಹುದಲ್ಲದೆ, ಧರೆ ಹೊತ್ತಿ ಉರಿದಡೆ ನಿಲ್ಲಲುಬಾರದು’ ಎಂಬ ಬಸವಣ್ಣನವರ ವಚನವೊಂದರ ಸಾಲು ನೆನಪಾಗುವುದು ಇಂಥ ಸಂದರ್ಭದಲ್ಲೇ.

ಪ್ರಕೃತಿ ವಿಕೋಪ ಒಮ್ಮೆ ಸಂಭವಿಸಿದರೆ, ಅದರ ಆಪೋಶನಕ್ಕೆ ಒಳಗಾಗುವವರ ಸಂಖ್ಯೆ ಹೆಚ್ಚೇ ಇರುತ್ತದೆ. ಸ್ವತ್ತುಹಾನಿಯ ಪ್ರಮಾಣವೂ ಅಗಾಧವಾಗೇ ಇರುತ್ತದೆ. ಕಾಳ್ಗಿಚ್ಚು, ನೀರಿನ ಪ್ರವಾಹ, ಭೀಕರ ಕ್ಷಾಮ ಮುಂತಾದ ಪ್ರಕೃತಿ ವಿಕೋಪಗಳನ್ನು ಸಾರಾಸಗಟಾಗಿ ತಡೆಯುವ ಶಕ್ತಿ ಹುಲು ಮಾನವರಿಗೆ ಇಲ್ಲವಾದರೂ, ಇವು ಸಂಭವಿಸುವುದಕ್ಕೆ ‘ಮನುಷ್ಯಕೃತ ಚಟುವಟಿಕೆಗಳು’ ಕಾರಣ ವಾಗಿವೆಯೇ? ಎಂಬ ಅವಲೋಕನವನ್ನಾದರೂ ಮಾಡಿಕೊಳ್ಳುವುದಕ್ಕೆ ಸಾಧ್ಯವಿದೆ.

ಕೇದಾರನಾಥ ಕ್ಷೇತ್ರದಲ್ಲಿ ಬೆಟ್ಟವನ್ನು ಅಗೆದು ಎಗ್ಗಿಲ್ಲದೆ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಕೂಡ ಅಲ್ಲಿ ಸಂಭವಿಸಿದ ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ. ಒಟ್ಟಿನಲ್ಲಿ, ವಿವೇಚನೆಯರಿತು ನಡೆದಲ್ಲಿ ಒಂದಷ್ಟು ದುರಂತಗಳ ತೀವ್ರತೆಯನ್ನು ತಗ್ಗಿಸಬಹುದು ಎಂಬುದಂತೂ ಖರೆ...