ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಈಗ ಬಾಲಂಗೋಚಿಯ ಸರದಿ!

ಏನಾದರೊಂದು ಕಿರಿಕಿರಿ ಮಾಡಿ ಭಾರತವನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸಬೇಕು ಎಂಬ ಹಠ ತೊಟ್ಟಂತಿರುವ ಅಮೆರಿಕದ ಅಧ್ಯಕ್ಷ ಟ್ರಂಪ್ ಅವರು, ಈ ನಿಟ್ಟಿನಲ್ಲಿ ಥರಾವರಿ ಕಸರತ್ತು ಮಾಡುತ್ತಿರು ವಂತಿದೆ. ಆದರೆ, ಅಂತಾರಾಷ್ಟ್ರೀಯ ಬಾಂಧವ್ಯ, ದ್ವಿಪಕ್ಷೀಯ ರಾಜತಾಂತ್ರಿಕತೆ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಭಾರತದ ನಿಲುವು ಸ್ಪಷ್ಟವಾಗೇ ಇದೆ, ಅಲುಗಾಡ ದಂತಿದೆ.

ಈಗ ಬಾಲಂಗೋಚಿಯ ಸರದಿ!

Ashok Nayak Ashok Nayak Aug 6, 2025 7:28 AM

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬಾಲಲೀಲೆ ಯಾಕೋ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಭಾರತದಿಂದ ಅಮೆರಿಕಕ್ಕೆ ಆಮದಾಗುವ ಸರಕು-ಸಾಮಗ್ರಿಗಳ ಮೇಲೆ ಶೇ.25ರಷ್ಟು ಸುಂಕವನ್ನು ಹೇರಿದ್ದಾಯಿತು, ಅಮೆರಿಕದ ಕಂಪನಿಗಳು ಭಾರತೀಯ ಪ್ರತಿಭೆಗಳನ್ನು ನೌಕರಿಗೆ ನೇಮಿಸಿಕೊಳ್ಳುವ ವಿಷಯದಲ್ಲಿ ಅಪಸ್ವರವೆತ್ತಿ ಎಚ್ಚರಿಕೆ ನೀಡಿದ್ದಾಯಿತು.

ಇಷ್ಟು ಸಾಲದೆಂಬಂತೆ, ‘ಭಾರತ ಮತ್ತು ರಷ್ಯಾ ದೇಶಗಳ ಆರ್ಥಿಕತೆಗಳು ಸದ್ಯದಲ್ಲೇ ಕುಸಿಯಲಿವೆ’ ಎಂದು ಗಿಳಿಶಾಸ್ತ್ರ ಹೇಳಿದ್ದೂ ಆಯ್ತು. ಇಷ್ಟಾಗಿಯೂ ಅಮೆರಿಕಕ್ಕೆ ತೃಪ್ತಿಯಾದಂತಿಲ್ಲ, ಭಾರತ ದೆಡೆಗಿನ ಅದರ ಆರೋಪದ ಸೋನೆಮಳೆ ನಿಂತಿಲ್ಲ. ಆದರೆ ಈ ಸಲ ಅಂಥ ಕಸರತ್ತಿಗೆ ಕೈ ಹಾಕಿರು ವುದು ಟ್ರಂಪ್ ಅಲ್ಲ, ಅವರ ‘ಬಾಲಂಗೋಚಿ’ ಎನ್ನಬಹುದಾದ ಆಪ್ತ ಸಲಹೆಗಾರ ಸ್ಟೀಫನ್ ಮಿಲ್ಲರ್.

ಇದನ್ನೂ ಓದಿ: Vishwavani Editorial: ಕಾರ್ಮೋಡದಂಚಿನ ಬೆಳ್ಳಿಕಿರಣ

‘ರಷ್ಯಾದಿಂದ ಕಚ್ಚಾತೈಲದ ಖರೀದಿ ಮಾಡುವುದನ್ನು ನಿಲ್ಲಿಸುವಂತೆ ಟ್ರಂಪ್ ಅವರು ಒತ್ತಡ ಹೇರಿದ್ದರೂ ಲೆಕ್ಕಿಸದ ಭಾರತ ಈ ಖರೀದಿಯನ್ನು ಮುಂದುವರಿಸುವ ಮೂಲಕ, ಉಕ್ರೇನ್ ವಿರುದ್ಧ ದ ಯುದ್ಧದಲ್ಲಿ ರಷ್ಯಾಕ್ಕೆ ಅನುಕೂಲವಾಗಲೆಂದು ಅದಕ್ಕೆ ಹಣದ ಅನುಕೂಲವನ್ನು ಮಾಡಿಕೊಡು ತ್ತಿದೆ’ ಎಂಬುದು ಮಿಲ್ಲರ್ ಮಹಾಶಯರು ಹೇಳಿಕೊಂಡಿರುವ ಹರಿಕಥೆ!

ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಭಾರತ, ‘ಅಮೆರಿಕದ ಒತ್ತಡ ಮತ್ತು ವಿರೋಧ ವಿದ್ದರೂ ರಷ್ಯಾದಿಂದ ಕಚ್ಚಾತೈಲದ ಖರೀದಿ ಮುಂದುವರಿಯಲಿದೆ’ ಎನ್ನುವ ಮೂಲಕ ತಿರುಗೇಟು ನೀಡಿದೆ. ಏನಾದರೊಂದು ಕಿರಿಕಿರಿ ಮಾಡಿ ಭಾರತವನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸಬೇಕು ಎಂಬ ಹಠ ತೊಟ್ಟಂತಿರುವ ಅಮೆರಿಕದ ಅಧ್ಯಕ್ಷ ಟ್ರಂಪ್ ಅವರು, ಈ ನಿಟ್ಟಿನಲ್ಲಿ ಥರಾವರಿ ಕಸರತ್ತು ಮಾಡುತ್ತಿರುವಂತಿದೆ. ಆದರೆ, ಅಂತಾರಾಷ್ಟ್ರೀಯ ಬಾಂಧವ್ಯ, ದ್ವಿಪಕ್ಷೀಯ ರಾಜತಾಂತ್ರಿಕತೆ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಭಾರತದ ನಿಲುವು ಸ್ಪಷ್ಟವಾಗೇ ಇದೆ, ಅಲುಗಾಡ ದಂತಿದೆ.

ಟ್ರಂಪ್ ಮತ್ತು ಅವರ ಬಾಲಗೋಂಚಿಗಳ ಕುಹಕ ಅಥವಾ ಆರೋಪಗಳಿಂದ ಅದು ಅಲುಗಾಡುವು ದಿಲ್ಲ. ಅಮೆರಿಕ ಇದನ್ನು ಆದಷ್ಟು ಬೇಗ ಅರಿತರೆ ಒಳಿತು...