ವಿಶ್ವದಲ್ಲೇ ಬೃಹತ್ ದ್ವೀಪ ಎನಿಸಿಕೊಂಡಿರುವ ‘ಗ್ರೀನ್‌ಲ್ಯಾಂಡ್’ ಮೇಲೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಣ್ಣು ಹಾಕಿದ್ದಾರೆ. ಸಾಂಸ್ಕೃತಿಕವಾಗಿ ಈ ದ್ವೀಪವು ಡೆನ್ಮಾರ್ಕ್‌ನ ಅಧಿಕಾರ ವ್ಯಾಪ್ತಿಯಲ್ಲಿದ್ದರೂ, ಭೌಗೋಳಿಕವಾಗಿ ಅಮೆರಿಕಕ್ಕೆ ಸನಿಹದಲ್ಲಿರುವುದರಿಂದ, ಭದ್ರತಾ ಹಿತಾಸಕ್ತಿ ಯ ಕಾರಣದಿಂದ ಅದನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವುದರಲ್ಲೇ ಶ್ರೇಯವಿದೆ ಎಂದು ಟ್ರಂಪ್ ಭಾವಿಸಿದಂತಿದೆ.
ಜತೆಗೆ, ಗ್ರೀನ್‌ಲ್ಯಾಂಡ್‌ನಲ್ಲಿ ವ್ಯಾಪಿಸಿರುವ ಅಪರೂಪದ ಖನಿಜಗಳ ನಿಕ್ಷೇಪವೂ ಟ್ರಂಪ್ ಮಹಾ ಶಯರ ಕಣ್ಣು ಕುಕ್ಕಿದ್ದು, ಅದನ್ನು ತೆಗೆದು ಮಾರಿ ಗಂಟು ಮಾಡಿಕೊಳ್ಳುವ ಹುನ್ನಾರವೂ ಈ ಹಪಾ ಹಪಿಯ ಹಿಂದಿದೆ ಎನ್ನುತ್ತಾರೆ ಬಲ್ಲವರು. ಈ ಗುಪ್ತಸಂಚಿಗೆ ಐರೋಪ್ಯ ಒಕ್ಕೂಟದ ರಾಷ್ಟ್ರಗಳ ಸಹಮತವಿಲ್ಲದ ಕಾರಣ, ‘ತಮಗಾಗದ ದೇಶದ ಮೇಲಿನ ಸುಂಕವನ್ನು ಏರಿಸುವ’ ಚಾಳಿಗೆ ಟ್ರಂಪ್ ಮತ್ತೊಮ್ಮೆ ಮಣೆ ಹಾಕಿದ್ದಾರೆ ಹಾಗೂ ಈ ಒಕ್ಕೂಟದ 8 ರಾಷ್ಟ್ರಗಳ ಮೇಲೆ ಫೆಬ್ರವರಿ 1 ರಿಂದ ಅನ್ವಯವಾಗುವಂತೆ ಈ ಭಾರವನ್ನು ಹೇರಿದ್ದಾರೆ.
ಇದನ್ನೂ ಓದಿ: Vishwavani Editorial: ಹೊಣೆಗೇಡಿತನದ ಪರಮಾವಧಿ
ಇಷ್ಟು ಸಾಲದೆಂಬಂತೆ, ಇರಾನಿನ ಮೂಲಕ ರಷ್ಯಾ, ಯುರೋಪ್‌ಗೆ ತಲುಪುವ ಭಾರತದ ಚಬಹಾರ್ ಬಂದರು ಯೋಜನೆಗೂ ಅಡ್ಡಿಮಾಡಲು ಹೊರಟಿದೆ ಅಮೆರಿಕ. ಟ್ರಂಪ್‌ರ ಈ ಧೋರಣೆಗಳನ್ನೆಲ್ಲ ನೋಡಿದಾಗ, ‘ಚೇಳಿಗೆ ಪಾರುಪತ್ಯ ಕೊಟ್ಟರೆ ಜಾವಕ್ಕೆ ನಾಕು ಸಲ ಕುಟುಕುತ್ತೆ’ ಎಂಬ ಮಾತು ನೆನಪಾದರೆ ಅಚ್ಚರಿಯೇನಿಲ್ಲ.
ಯಾವುದೇ ರಾಷ್ಟ್ರದ ಮುಖ್ಯಸ್ಥರು ತಂತಮ್ಮ ತಾಯ್ನೆಲದ ರಕ್ಷಣೆಗೆ ಅಗತ್ಯ ಕ್ರಮಗಳಿಗೆ ಮುಂದಾ ಗುವುದನ್ನು ತಪ್ಪೆನ್ನಲಾಗದು. ಆದರೆ ‘ಅಮೆರಿಕದ ಹಿತರಕ್ಷಣೆ’ ಎಂಬ ಹಣೆಪಟ್ಟಿಯಡಿ ವಿಶ್ವದ ಮಿಕ್ಕ ರಾಷ್ಟ್ರಗಳನ್ನು ಹುರಿದು ಮುಕ್ಕಲು ಮುಂದಾಗಿರುವ ಟ್ರಂಪ್‌ರ ನಡೆ ಸ್ವೀಕಾರಾರ್ಹವಲ್ಲ. ಅಮೆರಿಕದ ಕಿರುಕುಳಕ್ಕೆ ಒಳಗಾಗಿರುವ ರಾಷ್ಟ್ರಗಳು ಈ ದಬ್ಬಾಳಿಕೆಯನ್ನು ವಿರೋಧಿಸಬೇಕಿದೆ.