ಬಸ್ ಟಿಕೆಟ್ ದರವನ್ನು ಶೇ.60ರವರೆಗೂ ಏರಿಸಿ ಪ್ರಯಾಣಿಕರಿಗೆ ಬರೆ ಹಾಕಿರುವ ಸರಕಾರ ಈಗ ಓಲಾ, ಉಬೆರ್ಗಳಿಗೂ ಆಟೋ ರೀತಿಯ ಮೀಟರ್ ಅಳವಡಿಸಲು ಚಿಂತಿಸುತ್ತಿದೆ. ಇದರ ಹಿಂದೆ ಆಟೋ, ಟ್ಯಾಕ್ಸಿಯವರ ಲಾಬಿ, ಒತ್ತಡ ಇರುವುದು ಸ್ಪಷ್ಟವಾಗಿಯೇ ಅರ್ಥವಾಗುತ್ತದೆ. ಇನ್ನು ಮುಂದೆ ಸರಕಾರ ವಿಧಿಸುವ ದರವನ್ನೇ ಎಲ್ಲ ಟ್ಯಾಕ್ಸಿ ಸಂಸ್ಥೆಗಳು ಪಾವತಿಸಬೇಕಂತೆ. ಇದರಿಂದ ಸರಕಾರಕ್ಕೆ ಲಾಭವಾಗುತ್ತದೋ ಇಲ್ಲವೋ, ಟ್ಯಾಕ್ಸಿಯವರಂತೂ ಲಾಭ ಮಾಡಿಕೊಳ್ಳುವ ಎಲ್ಲ ಅವಕಾಶ ಇದೆ.
ಎಂದಿನಂತೆ ಗ್ರಾಹಕನಿಗೆ ಇದು ಇನ್ನೊಂದು ಆಯಕಟ್ಟಿಗೆ ಎಳೆಯುವ ಬರೆಯೇ ಸರಿ. ಈಗ ಮೀಟರ್ ಅಳವಡಿಸಿರುವ ಆಟೋಗಳ ಕತೆ ಏನು ಎಂಬುದನ್ನು ಮೊದಲು ನೋಡಲಿ. ಸರಕಾರ ನಿಗದಿ ಪಡಿಸಿರುವ ಮೀಟರ್ ದರ ಎಷ್ಟು ಮಟ್ಟಿಗೆ ಪಾಲನೆಯಾಗುತ್ತಿದೆ? ಎಲ್ಲ ಮೀಟರ್ಗಳೂ ನ್ಯಾಯ ಯುತವಾಗಿ ಚಾಲನೆಯಲ್ಲಿ ಇವೆಯೇ? ಇದನ್ನೆಲ್ಲ ಯಾರು ಪರಿಶೀಲಿಸುತ್ತಿದ್ದಾರೆ? ಈಗ ಮೀಟರ್ ಇರುವ ಆಟೋದವರೇ ರಾತ್ರಿ ವೇಳೆ ಮೀಟರ್ಗಿಂತ ಮೂರು ನಾಲ್ಕು ಪಟ್ಟು ಹೆಚ್ಚು ದರ ವಸೂಲಿ ಮಾಡಿ ಪ್ರಯಾಣಿಕರನ್ನು ದೋಚುತ್ತಿದ್ದಾರೆ.
ಕರೆದ ಕಡೆ ಬರಲು ತಿರಸ್ಕರಿಸುವುದು, ಪ್ರಶ್ನಿಸಿದರೆ ಎಲ್ಲರೂ ಒಟ್ಟಾಗಿ ಗ್ರಾಹಕನ ಮೇಲೆ ದೊಡ್ಡ ದನಿಯಲ್ಲಿ ಮುಗಿಬಿದ್ದು ಜೀವ ಕೈಯಲ್ಲಿ ಹಿಡಿದುಕೊಳ್ಳುವಂತೆ ಮಾಡುವುದು ಮಾಮೂಲು. ಮುಂಜಾನೆ ಪರವೂರಿನಿಂದ ಬಂದು ಬಸ್ಸಿಳಿಯುವ ಪ್ರಯಾಣಿಕರು ಈ ಮೀಟರ್ ಇರುವ, ಆದರೂ ಮೀಟರ್ ಹಾಕದ ರಿಕ್ಷಾದವರ ಮೊದಲ ಬಲಿ. ಇವರು ಹೇಳಿದ್ದೇ ದರ. ಬೆಂಗಳೂರಿನಲ್ಲೆಲ್ಲೂ ಪೂರ್ವ ಪಾವತಿ ಆಟೋಗಳ ವ್ಯವಸ್ಥೆಯೂ ಸರಿಯಾಗಿ ಇಲ್ಲ.
ಪೊಲೀಸರೂ ಇರುವುದಿಲ್ಲ, ಇದ್ದರೂ ಕ್ರಮ ಕೈಗೊಳ್ಳುವುದಿಲ್ಲ. ಮೀಟರ್ಗೆ ದರ ನಿಗದಿಪಡಿಸಿದರೆ ನಿದ್ರೆ ಮಾಡಿದರೆ ಎಲ್ಲವೂ ಪರಿಹಾರ ಆಗುವುದಿಲ್ಲ. ಅದರ ಕಟ್ಟುನಿಟ್ಟಾದ ಅನುಷ್ಠಾನಕ್ಕೆ ಏನು ಮಾಡಲಾಗುತ್ತದೆ ಎಂಬುದು ಮುಖ್ಯ. ಇನ್ನು ಕರೆದ ಕಡೆ ಬರುವುದು ತಮಗೆ ಅವಮಾನ ಎಂದೇ ಆಟೋದವರ ಭಾವನೆ. ಇದರಿಂದೆಲ್ಲ ಪಾರಾಗಲು ಜನತೆ ಆಪ್ಗಳ ಮೊರೆ ಹೋಗಿದ್ದಾರೆ.
ರ್ಯಾಪಿಡೋ ಮೊದಲಾದ ಬೈಕ್ ಟ್ಯಾಕ್ಸಿಗಳನ್ನು ಜನ ನೆಚ್ಚಿರುವುದೂ ಇದಕ್ಕೇ. ಆದರೆ ಸರಕಾರ ಈಗ ಆ ಬೈಕ್ ಟ್ಯಾಕ್ಸಿಗಳನ್ನೇ ಮುಗಿಸಲು ಮುಂದಾಗಿದೆ. ಎಲ್ಲದಕ್ಕೂ ದರ ಏರಿಸಿ, ಸಾಮಾನ್ಯ ಜನತೆ ಬದುಕಲು ಅಸಾಧ್ಯವಾಗುವಂತೆ ಮಾಡಿ, ಈ ಸರಕಾರ ಸಾಧಿಸುವುದಾದರೂ ಏನನ್ನು?