ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕ ಫೂಲ್‌ಸಿಂಗ್ ಬರೈಯಾ ಅವರು ಮಾಧ್ಯಮ ಸಂದರ್ಶನ ವೊಂದರಲ್ಲಿ ಮಾತನಾಡುತ್ತಾ, ‘ಸುಂದರ ಮಹಿಳೆಯರು ರಸ್ತೆಯಲ್ಲಿ ನಡೆಯುತ್ತಿದ್ದರೆ, ಅದರಿಂದ ಪುರುಷರು ಮನಸ್ಸಿನ ಮೇಲಿನ ಹಿಡಿತವನ್ನು ಕಳೆದುಕೊಂಡು ಅತ್ಯಾಚಾರ ಮಾಡುತ್ತಾರೆ’ ಎಂಬ ಆಣಿಮುತ್ತನ್ನು ಉದುರಿಸಿದ್ದಾರೆ.
ಮಾತ್ರವಲ್ಲದೆ, ‘ಭಾರತದಲ್ಲಿ ಬಹುತೇಕ ಅತ್ಯಾಚಾರಗಳು ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯ ದವರ ಮೇಲೆ ನಡೆಯುತ್ತಿವೆ’ ಎಂದೂ ಈ ಮಹಾಶಯರು ವ್ಯಾಖ್ಯಾನಿಸಿಬಿಟ್ಟಿದ್ದಾರೆ. ಇಂಥ ಹೊಣೆ ಗೇಡಿಗಳನ್ನು ‘ಜನಪ್ರತಿನಿಧಿ’ ಎಂದು ಬಾಯ್ತುಂಬಾ ಕರೆಯಬೇಕಾಗಿ ಬಂದಿರುವುದು ನಮ್ಮಂಥವರ ಕರ್ಮ!
ಇದನ್ನೂ ಓದಿ: Vishwavani Editorial: ಮಾನವ ಜೀವ ಇಷ್ಟೊಂದು ಅಗ್ಗವೇ?!
ಲಕ್ಷಾಂತರ ಜನರ ಆಶೋತ್ತರಗಳಿಗೆ ಸ್ಪಂದಿಸಬೇಕಾದ, ಜನಕಲ್ಯಾಣದ ಯೋಜನೆಗಳ ಜಾರಿಗೆ, ಅಭಿವೃದ್ಧಿ ಚಟುವಟಿಕೆಗಳಿಗೆ ಸರಕಾರವನ್ನು ಆಗ್ರಹಿಸಬೇಕಾದ ಮತ್ತು ಸುಶಾಸನಕ್ಕೆ ಒತ್ತು ನೀಡ ಬೇಕಾದ ಇಂಥ ಜನಪ್ರತಿನಿಧಿಗಳು ತಮ್ಮ ಬಾಯಿಯೆದುರು ಮೈಕು ಇದೆ ಎಂಬ ಕಾರಣಕ್ಕೆ ಔಚಿತ್ಯ ಪ್ರಜ್ಞೆಯಿಲ್ಲದೆ ಹೀಗೆ ಮಾತಾಡುವುದು ನಮ್ಮ ವ್ಯವಸ್ಥೆಯಲ್ಲಿನ ಅವ್ಯವಸ್ಥೆಗೆ ಹಿಡಿದಿರುವ ಕನ್ನಡಿ ಯೂ ಹೌದು.
ಅಪಾರ ವಿಷಯಜ್ಞಾನ, ಕಾರ್ಯಶ್ರದ್ಧೆ ಮತ್ತು ಜನಪರ ಕಾಳಜಿ ಇರುವವರು ಜನಪ್ರತಿನಿಧಿಗಳಾಗ ಬೇಕಿರುವುದು ಸರ್ವಕಾಲಕ್ಕೂ ಅಪೇಕ್ಷಣೀಯ; ಆದರೆ ದಿನಗಳೆದಂತೆ ಈ ಸಹಜ ಆಶಯಕ್ಕೆ ಸಂಚಕಾರ ಒದಗುತ್ತಲೇ ಇದೆ ಎಂಬುದಕ್ಕೆ ಸದರಿ ಶಾಸಕರು ತಾಜಾ ಪುರಾವೆಯಾಗಿದ್ದಾರೆ. ಪ್ರಜಾ ಪ್ರತಿನಿಧಿ ಸಭೆಗಳಿಗೆ ತಾವು ಚುನಾಯಿಸಿ ಕಳಿಸಬೇಕಾದವರು ಹೇಗಿರ ಬಾರದು ಎಂಬುದನ್ನು ಮತದಾರರು ನಿರ್ಧರಿಸುವುದಕ್ಕೆ ಇಂಥವರನ್ನು ಒಂದು ಮಾದರಿಯಾಗಿ ಇಟ್ಟುಕೊಳ್ಳಲು ಅಡ್ಡಿ ಯಿಲ್ಲ...!