ಅಮೆರಿಕದ ಅಧ್ಯಕ್ಷೀಯ ಗದ್ದುಗೆಗೆ ಎರಡನೆಯ ಬಾರಿಗೆ ಏರಿದಾಗಿನಿಂದಲೂ ವಿಲಕ್ಷಣವಾಗಿ ವರ್ತಿಸುತ್ತಿದ್ದರು ಡೊನಾಲ್ಡ್ ಟ್ರಂಪ್. ಮೊದಲ ಅಧಿಕಾರಾವಧಿಯಲ್ಲೇ ಇದರ ‘ಝಲಕ್’ ಗಳನ್ನು ಬಹುತೇಕರು ನೋಡಿದ್ದರಿಂದ, ಈ ವಿಲಕ್ಷಣ ವರ್ತನೆಯಿಂದ ಇಂಥವರಿಗೆ ಹೆಚ್ಚಿನ ಅಚ್ಚರಿಯೇನೂ ಆಗಲಿಲ್ಲ ಎನ್ನಬೇಕು.
ಆದರೆ, ‘ಅಮೆರಿಕದ ಹಿತಾಸಕ್ತಿಯ ರಕ್ಷಣೆ’ ಎಂಬ ಕುಂಟುನೆಪವನ್ನು ಮುಂದು ಮಾಡಿಕೊಂಡು ಟ್ರಂಪ್ ಮಹಾಶಯರು ಐಲುಪೈಲು ದೊರೆಯಂತೆ ಆಡತೊಡಗಿದಾಗ, ಒಂದಿಡೀ ಜಗತ್ತೇ ‘ಎಲ್ಲೋ ಏನೋ ಎಡವಟ್ಟಾಗಿದೆ’ ಎನ್ನುವಂತೆ ಭಾವಿಸತೊಡಗಿತು.
ಇದು, ವಿಶ್ವದ ವಿವಿಧ ದೇಶಗಳ ಸರಕುಗಳ ಮೇಲೆ ಟ್ರಂಪ್ ಅವರು ಮನಬಂದಂತೆ ಸುಂಕ ವನ್ನು ಏರಿಸಿದಾಗ ಜಾಗತಿಕ ಸಮುದಾಯದಲ್ಲಿ ಸುರಿಸಿದ ಗ್ರಹಿಕೆ. ಆದರೆ ಅಮೆರಿಕದ ಸರ್ವೋಚ್ಚ ನ್ಯಾಯಾಲಯವು ತಲೆಗೆ ಮೊಟಕಿರುವ ಪರಿಣಾಮವಾಗಿ ಟ್ರಂಪ್ ಈಗ ತಮ್ಮ ಹುಚ್ಚಾಟಕ್ಕೆ ಪೂರ್ಣವಿರಾಮವನ್ನು ಹಾಕಬೇಕಾಗಿ ಬಂದಿದೆ.
ಇದನ್ನೂ ಓದಿ: Vishwavani Editorial: ಯಾರಿಗೆ ಯಾರು ಆದರ್ಶ?!
ಅಂದರೆ, ಮುಂದಿನ 150 ದಿನಗಳ ಕಾಲ, ವಿವಿಧ ದೇಶಗಳ ಸರಕುಗಳ ಮೇಲೆ ಅವರು ಹೇರಿದ್ದ ಶೇ.50ರ ಸುಂಕವು ರದ್ದಾಗಿ, ಶೇ.10ರ ಸ್ತರಕ್ಕೆ ಅದು ಇಳಿಯಲಿದೆ. ಇದು ಜಾಗತಿಕ ಸಮುದಾಯದ ಎದುರು ಟ್ರಂಪ್‌ರ ಅಹಂ ಅನ್ನು ತಗ್ಗಿಸಿರುವುದರ ಜತೆಗೆ, ‘ಮೆರೆದವರೆಲ್ಲ ಇಳಿಯುವುದು ಸತ್ಯ’ ಎಂಬ ಸಾರ್ವಕಾಲಿಕ ಗ್ರಹಿಕೆಗೂ ಮತ್ತಷ್ಟು ಪುಷ್ಟಿ ನೀಡಿದೆ.
ರಾಜತಂತ್ರದಲ್ಲಿ, ಅದರಲ್ಲೂ ನಿರ್ದಿಷ್ಟವಾಗಿ ಅಂತಾರಾಷ್ಟ್ರೀಯ ಸಂಬಂಧಗಳ ವಿಷಯ ದಲ್ಲಿ ದುಡುಕುವುದು ಸಲ್ಲ ಎಂಬ ಸೂಚನೆಯನ್ನೂ ಇದು ಸ್ಪಷ್ಟವಾಗಿ ನೀಡಿದೆ. ಮಾನವ ಕುಲವು ಭೂಗೋಳದ ವಿವಿಧ ಭಾಗಗಳಲ್ಲಿ ಹಂಚಿಹೋಗಿದ್ದರೂ, ‘ವಸುಧೈವ ಕುಟುಂಬಕಂ’ ಎಂಬ ಸದಾಶಯದ ಅಡಿಯಲ್ಲಿ ಎಲ್ಲರೂ ಪರಸ್ಪರರ ಹಿತಕ್ಕಾಗಿ ಬಾಳಬೇಕು ಎಂಬುದು ಭಾರತದ ಕನವರಿಕೆ. ಇದು ಟ್ರಂಪ್ ಅವರಿಗೆ ಮತ್ತು ಅವರಂಥ ಇನ್ನಷ್ಟು ಆಳುಗರಿಗೆ ಅರ್ಥವಾದರೆ ಸಾಕು...!