ಬಿಜೆಪಿ ನಾಯಕ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಜೈಲು ಶಿಕ್ಷೆ ವಿಧಿಸಲಾಗಿದೆ. 2016ರಲ್ಲಿ ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಯೋಗೇಶ್ ಗೌಡ (ಬಿಜೆಪಿ ನಾಯಕ) ಅವರ ಕೊಲೆಯಾಗಿತ್ತು. ಇದರ ವಿರುದ್ಧ ದೀರ್ಘವಾಗಿ ವಿಚಾರಣೆ ನಡೆದು ಶುಕ್ರವಾರ ಶಿಕ್ಷೆ ಪ್ರಮಾಣ ಪ್ರಕಟವಾಗಿದೆ.
ಸಿಬಿಐ ಸತತವಾಗಿ ವಿಚಾರಣೆ ನಡೆಸಿ ಕೊಲೆ ಪ್ರಕರಣದಲ್ಲಿ, ಆಡಳಿತ ಪಕ್ಷದ ನಾಯಕನಿಗೆ ಶಿಕ್ಷೆ ಕೊಡಿಸಲು ಯಶಸ್ವಿಯಾಗಿದೆ. ಇದು ಜನಪ್ರತಿನಿಧಿ ನ್ಯಾಯಾಲಯದ ತೀರ್ಪು. ಇದನ್ನು ಪ್ರಶ್ನಿಸಿ ಮೇಲಿನ ನ್ಯಾಯಾಲಯಕ್ಕೆ ಕುಲಕರ್ಣಿ ಹೋಗುವುದು ಖಚಿತ. ಅಲ್ಲಿ ಏನಾಗುತ್ತದೆ ಎನ್ನುವುದನ್ನು ಕಾದು ನೋಡಬೇಕು. ಈ ಹಿನ್ನೆಲೆಯನ್ನೆಲ್ಲ ಬದಿಗಿಟ್ಟು ಪ್ರಕರಣವನ್ನೇ ನೋಡುವುದಾದರೆ, ನ್ಯಾಯದ ಮುಷ್ಟಿಯಿಂದ ಎಂತಹ ಪ್ರಬಲರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಇಲ್ಲಿ ಸಾಬೀತಾಗಿದೆ.
ಇದನ್ನೂ ಓದಿ: MLA Vinay Kulkarni: ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಜಾ, ಜೈಲೇ ಗತಿ
ಇದು ಎಲ್ಲರಿಗೂ ಒಂದು ಪಾಠ. ಹಿಂದೊಂದು ಕಾಲವಿತ್ತು. ಕೊಲೆ, ಸುಲಿಗೆಗಳನ್ನು ಮಾಡಿ ಸಾಕ್ಷಿಗಳ ಕೊರತೆಯಿಂದ ಸಲೀಸಾಗಿ ಪಾರಾಗುತ್ತಿದ್ದರು. ಇದು ಡಿಜಿಟಲ್ ಯುಗ. ಇಲ್ಲಿ ಸಾಕ್ಷಿಗಳನ್ನು ಕೊಡುವುದು ಸುಲಭ. ನಾವು ಎಲ್ಲ ಕಡೆಯೂ ಸಿಸಿಟಿವಿಯ ಕಣ್ಗಾವಲಿನಲ್ಲಿರುತ್ತೇವೆ. ತಂತ್ರಜ್ಙಾನ ಎಷ್ಟು ಬೆಳೆದಿದೆ ಎಂದರೆ ಕೊಲೆಯಾದ ಸ್ಥಳದಲ್ಲಿ ಆರೋಪಿ ಸಣ್ಣದೇ ಕುರುಹು ಉಳಿಸಿದರೂ ಬಚಾವಾಗಲು ಸಾಧ್ಯವಿಲ್ಲ.
ಪೊಲೀಸರು ಒಂದು ಪ್ರಕರಣವನ್ನು ಭೇದಿಸಬೇಕೆಂದು ತೀರ್ಮಾನಿಸಿದರೆ, ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಮಟ್ಟಿಗೆ ತಂತ್ರಜ್ಞಾನದ ನೆರವು ಸಿಗುತ್ತದೆ. ಈ ಕಾಲಘಟ್ಟದಲ್ಲಿ ಹಿಂದಿನ ಕಾಲ ದಲ್ಲಿ ಮಾಡಿದಂತೆ ಬೇಕಾಬಿಟ್ಟಿ ಅನ್ಯಾಯವೆಸಗಿ ಪಾರಾಗಲು ಸಾಧ್ಯವಿಲ್ಲ. ಒಂದು ಕಾಲದಲ್ಲಿ ಜನ ಆತ್ಮಸಾಕ್ಷಿಯ ಮೇಲೆ ನಂಬಿಕೆಯಿಟ್ಟಿದ್ದರು.
ನ್ಯಾಯಾಲಯದಲ್ಲಿ ಒಬ್ಬ ವ್ಯಕ್ತಿ ಮೌಖಿಕವಾಗಿ ಹೇಳುವ ಸಾಕ್ಷಿಯೇ ಪ್ರಧಾನವಾಗಿರುತ್ತಿತ್ತು. ಈಗ ಅವರ ಮಾತುಗಳನ್ನು ಎಲ್ಲ ರೀತಿಯಿಂದಲೂ ಪರಿಶೀಲನೆ ಮಾಡಲಾಗುತ್ತದೆ. ಸುಳ್ಳುಗಳನ್ನು ಹೇಳಿ ನಂಬಿಸಲು ಸಾಧ್ಯವೇ ಇಲ್ಲ. ಒಬ್ಬ ವ್ಯಕ್ತಿ ತಾನೇ ಕೊಲೆ ಮಾಡಿದ್ದು ಎಂದರೂ ಅದನ್ನು ಆತ ಸಾಕ್ಷಿ ಸಮೇತ ಸಾಬೀತು ಮಾಡಬೇಕಾಗುತ್ತದೆ! ಯೋಗೇಶ್ ಕೊಲೆ ಪ್ರಕರಣದಲ್ಲಿ ಬರೀ ಜನನಾಯಕರು ಮಾತ್ರವಲ್ಲ, ಜನರೂ ಕಲಿಯಬೇಕಾಗಿದ್ದು ಬೇಕಾದಷ್ಟಿದೆ.