ಅಧಿಕಾರದ ಗದ್ದುಗೆಯನ್ನು ಸುತ್ತುವರಿಯುವ ‘ಪ್ರಭಾವ’ ವಲಯಗಳು, ತತ್ಪರಿಣಾಮವಾಗಿ ಗದ್ದುಗೆಗೆ ದಕ್ಕಿಬಿಡುವ ತಾಕತ್ತು ಹೀಗೆ ಸಾಕಷ್ಟು ಕಾರಣಗಳಿಂದಾಗಿ ಸಿಂಹಾಸನವನ್ನು ತಮ್ಮದಾಗಿಸಿಕೊಳ್ಳಲು ಮಹತ್ವಾಕಾಂಕ್ಷಿಗಳು ಇನ್ನಿಲ್ಲದ ಕಸರತ್ತು ನಡೆಸುವುದು ಅನೂಚಾನವಾಗಿ ಬೆಳೆದುಕೊಂಡು ಬಂದಿರುವ ಸಂಪ್ರದಾಯ.
ಇತಿಹಾಸವಷ್ಟೇ ಏಕೆ, ಪುರಾಣ, ರಾಮಾಯಣ-ಮಹಾಭಾರತಗಳನ್ನು ಒಮ್ಮೆ ತಡಕಿದರೂ ಮುಖಕ್ಕೆ ರಪ್ಪನೆ ರಾಚುವ ಅಪ್ರಿಯಸತ್ಯವಾಗುತ್ತದೆ ಈ ಹಗ್ಗಜಗ್ಗಾಟ. ಅಧಿಕಾರ ದಕ್ಕದೆ ಹತಾಶರಾದವರು, ತಮ್ಮ ಎದುರಾಳಿಯ ಒಂದಿಡೀ ಕುಲವನ್ನೇ ನಿರ್ನಾಮ ಮಾಡಲು ಪಣತೊಟ್ಟ ಉದಾಹರಣೆಗಳೂ ಇಂಥ ಕಥನಗಳಲ್ಲಿ ಸಾಕಷ್ಟು ಸಿಗುತ್ತವೆ.
ಇದನ್ನೂ ಓದಿ: Vishwavani Editorial: ಅಮಲುದ್ರವ್ಯಗಳ ಆಟಾಟೋಪ
ಒಟ್ಟಿನಲ್ಲಿ ಗದ್ದುಗೆಗಾಗಿನ ಹಗ್ಗಜಗ್ಗಾಟ ಸಾರ್ವಕಾಲಿಕ, ಸಾರ್ವತ್ರಿಕ. ಆದರೆ ಅದು ಬಿಟ್ಟೂ ಬಿಡದಂತೆ ನಡೆಯುತ್ತಲೇ ಇದ್ದರೆ, ‘ಕದನ ಕುತೂಹಲ’ ರಾಗದ ಆಲಾಪನೆಯಾಗುವ ಬದಲು, ‘ಹೇಸಿಗೆ ತುಂಬಿದ ಹೇಷಾರವ’ ಆಗಿ ಬಿಡುತ್ತದೆ. ಅಂಥ ಕೆನೆತವನ್ನೂ, ಅದರ ಹಿಂದಿನ ಗೊಣಗಾಟವನ್ನೂ ಜನರು ಹೆಚ್ಚು ದಿನ ಸಹಿಸಿಕೊಳ್ಳಲಾರರು.
ಕಾರಣ, ಜನಕಲ್ಯಾಣ ಕಾರ್ಯಗಳು ಮತ್ತು ಅಭಿವೃದ್ಧಿ ಚಟುವಟಿಕೆಗಳು ಅಬಾಧಿತವಾಗಿ ಮುನ್ನಡೆ ಯಲಿ ಎಂದು ಜನರೇ ಚುನಾಯಿಸಿ ಕಳಿಸಿದಂಥವರು, ಹೀಗೆ ದಿನ ಬೆಳಗಾದರೆ ಮರೆಯಲ್ಲೇ ಕತ್ತಿ ಮಸೆಯುವಿಕೆಯಲ್ಲಿ ವ್ಯಸ್ತರಾಗಿದ್ದರೆ, ಜನರು ಹತಾಶರಾಗುವುದು ಸಹಜ ತಾನೇ? ಸಿಂಹಾಸನ ತಮ್ಮಲ್ಲೇ ಉಳಿಯಬೇಕು ಎಂದೋ ಅಥವಾ ಅದು ಮುಂದೆ ತಮಗೇ ದಕ್ಕಬೇಕು ಎಂದೋ ಹಕ್ಕನ್ನು ಮಂಡಿಸುತ್ತಿರುವವರಿಗೆ ಅವರದ್ದೇ ಆದ ಸಮರ್ಥನೆಗಳಿರಬಹುದು; ಆದರೆ ಜನಕಲ್ಯಾಣಕ್ಕೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಸಿಗಬೇಕಾದ ಮನ್ನಣೆಯನ್ನು ಅವರು ಹಿಂದಕ್ಕೆ ಸರಿಸಿ, ಈ ‘ಸಿಂಹಾ ಸನದ ಹೆಬ್ಬಯಕೆ’ಯನ್ನೇ ಪ್ರಥಮಾದ್ಯತೆಯ ಹಕ್ಕಾಗಿ ಮಾಡಿಕೊಳ್ಳಬಾರದಲ್ಲವೇ? ಚಿಕ್ಕ ಮಕ್ಕಳಿಗಾ ದರೆ ಕಿವಿಹಿಂಡಿ ಬುದ್ಧಿ ಹೇಳಬಹುದು, ಆದರೆ ರಾಜನೀತಿಯನ್ನೇ ಅರೆದು ಕುಡಿದಿರುವವರಿಗೆ ಹಾಗೆ ಹೇಳಲಾದೀತೇ? ಅದು ಅವರವರ ವಿವೇಚನೆಗೆ ಬಿಟ್ಟ ವಿಚಾರ...