ಈ ವರ್ಷದ ಮುಂಗಾರು ತುಸು ಕಷ್ಟಕರವಾಗಿರಲಿದೆ. ‘ಎಲ್ ನಿನೋ’ ಚಂಡಮಾರುತ ಈಕ್ವೆಟೋರಿಯಲ್ ಫೆಸಿಫಿಕ್ ಸಾಗರ ಭಾಗದಲ್ಲಿ ರೂಪುಗೊಳ್ಳಲಾರಂಭಿಸಿದ್ದು, ಪರಿಣಾಮ ಭಾರತ ಉಪಖಂಡದಲ್ಲಿ ಜೂನ್ ಅವಧಿಯ ಮಳೆ ಪ್ರಮಾಣ ವಾಡಿಕೆಗಿಂತಲೂ ಬಹಳ ಕಡಿಮೆ ಇರಲಿದೆ.
ಬದಲಾಗಿ ಬಿಸಿಗಾಳಿಯ ಹೊಡೆತ ಹೆಚ್ಚಲಿದೆ ಎಂದು ಹವಾಮಾನ ವರದಿ ಹೇಳಿದೆ. ಕೇರಳ ಕರಾವಳಿಗೆ ಮೇ 26ರಂದು ಮುಂಗಾರು ಪ್ರವೇಶಿಸಲಿದೆ ಎಂದು ಐಎಂಡಿ ಈ ಮೊದಲು ಅಂದಾಜಿಸಿತ್ತು. ಆದರೆ ಈಗ ಮುಂಗಾರು ಆಗಮನವೂ ಒಂದು ವಾರ ತಡವಾಗಿದೆ. ಎಲ್ ನಿನೊ ಕಾರಣದಿಂದಾಗಿ ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಮಳೆ ಪ್ರಮಾಣ (ದೀರ್ಘಾವಧಿ ಸರಾಸರಿ) ಶೇ.92ರಿಂದ ಶೇ.90ಕ್ಕೆ ಇಳಿಸಲಾಗಿದೆ.
ಪರಿಣಾಮ ಜೂನ್ ತಿಂಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಲಿದೆ. ಜತೆಗೆ ಹೆಚ್ಚುವರಿ ಉಷ್ಣ ಅಲೆ ದಿನಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಐಎಂಡಿ ಎಚ್ಚರಿಸಿದೆ. ಈ ಸಲ ಬೇಸಿಗೆ ಕೂಡ ತುಸು ಹೆಚ್ಚುವರಿ ಉಷ್ಣಾಂಶವನ್ನೇ ದಾಖಲಿಸಿದೆ. ಹೀಗೆ ಬೇಸಿಗೆ ಮಳೆಗಾಲ ಎರಡೂ ಪ್ರತಿಕೂಲವಾದರೆ, ಮೊದಲ ಕಷ್ಟಕರ ದಿನಗಳು ಎದುರಾಗುವುದು ಕೃಷಿಕರಿಗೆ.
ಇದನ್ನೂ ಓದಿ: Vishwavani Editorial: ಮಳೆಗಾಲದ ಸನ್ನದ್ಧತೆ ಬೇಕು
ಜೂನ್- ಜುಲೈಯಲ್ಲಿ ವಾಡಿಕೆಯಂತೆ ಮಳೆಯಾಗದೆ ಹೋದರೆ ಖಾರಿ- ಬೆಳೆಗಳಿಗೆ ತೊಂದರೆಯಾಗುತ್ತದೆ. ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹ ಕಡಿಮೆ ಆಗಬಹುದು. ಆಹಾರ ಬೆಳೆಗಳ ನಾಟಿ ಹಾಗೂ ಇಳುವರಿ ಎರಡೂ ನೆಲಕಚ್ಚಲಿದೆ. ಈಗಾಗಲೇ ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಅದು ಕೂಡ ಕೃಷಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.
ಮಳೆ ಕೊರತೆಯನ್ನು ಎದುರಿಸಲು ಕಡಿಮೆ ನೀರು ಬಳಸುವ ಮತ್ತು ಹವಾಮಾನ ವೈಪರೀತ್ಯಕ್ಕೆ ಹೊಂದಿಕೊಳ್ಳುವ ಬೆಳೆಗಳನ್ನು ಬೆಳೆಯಲು ರೈತರಿಗೆ ಸಲಹೆ ನೀಡಲಾಗಿದೆ. ರೈತರ ನಂತರ ಇದರ ದುಷ್ಪರಿಣಾಮ ಎಲ್ಲ ಬಗೆಯ ಗ್ರಾಹಕರ ಮೇಲೆ ಆಗಲಿದೆ. ಸರಕಾರ ಎಲ್ಲರ ಹಿತರಕ್ಷಣೆಗಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ. ನೀರಿನ ಸಮರ್ಪಕ ನಿರ್ವಹಣೆ ಮತ್ತು ವಿದ್ಯುತ್ ನಿರ್ವಹಣೆಗೆ ಸರಕಾರಗಳು ಸಜ್ಜಾಗಬೇಕಿದೆ.
ಅಣೆಕಟ್ಟುಗಳಲ್ಲಿ ಕೊರತೆಯಾದರೆ ನಗರಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಆಗಬಹುದು. ಸಾರ್ವಜನಿಕರು ಮಲೆ ನೀರು ಸಂಗ್ರಹ ಅಳವಡಿಸಿಕೊಳ್ಳುವುದು ಉತ್ತಮ. ನೀರಿನ ಮಿತ ಬಳಕೆ ಎಲ್ಲದಕ್ಕಿಂತ ಒಳ್ಳೆಯದು. ಸರಕಾರಗಳಂತೆ ಪ್ರಜೆಗಳಿಗೂ ಈ ಸನ್ನಿವೇಶವನ್ನು ಎದುರಿಸಬೇಕಾದ ಜವಾಬ್ದಾರಿ ಇದೆ.