ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಜೀವಿಗಳ ಜೀವ ಅಗ್ಗವಾಗದಿರಲಿ

ವಾರದ ಹಿಂದೆ ಅರಣ್ಯ ಪ್ರದೇಶದಲ್ಲಿ ಆಹಾರಕ್ಕಾಗಿ ಬೇಟೆಯಾಡುವಾಗ ತೀವ್ರವಾಗಿ ಗಾಯ ಗೊಂಡಿದ್ದ ಈ ಚೀತಾ, ಚಿಕಿತ್ಸೆಯು ಫಲಪ್ರದವಾಗದ ಕಾರಣ ಅಸುನೀಗಿತು ಎನ್ನಲಾಗಿದೆ. ಇದೂ ಸೇರಿದಂತೆ, ‘ಚೀತಾ ಯೋಜನೆ’ ಅಡಿಯಲ್ಲಿ ಅನ್ಯದೇಶಗಳಿಂದ ತರಿಸಿಕೊಳ್ಳಲಾಗಿದ್ದ ಚೀತಾಗಳ ಪೈಕಿ ಇದುವರೆಗೆ 9 ಚೀತಾ ಗಳು ಸತ್ತಿರುವುದು ನಿರ್ಲಕ್ಷಿಸುವ ಸಂಗತಿಯಂತೂ ಅಲ್ಲ.

Vishwavani Editorial: ಜೀವಿಗಳ ಜೀವ ಅಗ್ಗವಾಗದಿರಲಿ

Profile Ashok Nayak Jul 14, 2025 9:41 AM

ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ವಿಷಪ್ರಾಶನದಿಂದಾಗಿ ಐದು ಹುಲಿಗಳು ಅಸು ನೀಗಿದ ಘಟನೆಯಿನ್ನೂ ಹಚ್ಚ ಹಸಿರಾಗಿರುವಾಗಲೇ, ಅಂಥ ಮತ್ತೊಂದು ಸಾವಿನ ಸುದ್ದಿ ಅಪ್ಪಳಿಸಿದೆ. ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ 3 ಹುಲಿಮರಿಗಳು ಸಾವಿಗೀಡಾಗಿವೆ ಎಂಬುದು ತಡವಾಗಿ ಲಭ್ಯವಾಗಿರುವ ಸುದ್ದಿ.

ಸದರಿ ಹುಲಿಮರಿಗಳ ಕಳೇಬರದ ಪಂಚನಾಮೆ ಹಾಗೂ ಮರಣೋತ್ತರ ಪರೀಕ್ಷೆಯನ್ನು ನಡೆಸದೆಯೇ ಸಂಬಂಧಿತ ಅರಣ್ಯಾಧಿಕಾರಿಗಳು ಅವನ್ನು ಸುಟ್ಟು ಹಾಕಿರುವುದು ಕೂಡ ಒಂದಷ್ಟು ಅನುಮಾನಗಳನ್ನು ಹುಟ್ಟು ಹಾಕಿದೆ. ಕೂಲಂಕಷ ತನಿಖೆ ಮಾತ್ರವೇ ಇದರ ಸತ್ಯಾಸತ್ಯತೆಯನ್ನು ಬಯಲಿಗೆಳೆಯಬಲ್ಲದು. ಮತ್ತೊಂದೆಡೆ, ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ನೆಲೆಗೊಂಡಿದ್ದ, ನಮೀಬಿಯಾ ದೇಶದಿಂದ ತರಿಸಿಕೊಳ್ಳಲಾಗಿದ್ದ ‘ನಭಾ’ ಎಂಬ 8 ವರ್ಷದ ಹೆಣ್ಣು ಚೀತಾ ಸಾವನ್ನಪ್ಪಿರುವ ಸುದ್ದಿ ವರದಿಯಾಗಿದೆ.

ವಾರದ ಹಿಂದೆ ಅರಣ್ಯ ಪ್ರದೇಶದಲ್ಲಿ ಆಹಾರಕ್ಕಾಗಿ ಬೇಟೆಯಾಡುವಾಗ ತೀವ್ರವಾಗಿ ಗಾಯ ಗೊಂಡಿದ್ದ ಈ ಚೀತಾ, ಚಿಕಿತ್ಸೆಯು ಫಲಪ್ರದವಾಗದ ಕಾರಣ ಅಸುನೀಗಿತು ಎನ್ನಲಾಗಿದೆ. ಇದೂ ಸೇರಿದಂತೆ, ‘ಚೀತಾ ಯೋಜನೆ’ ಅಡಿಯಲ್ಲಿ ಅನ್ಯದೇಶಗಳಿಂದ ತರಿಸಿಕೊಳ್ಳಲಾಗಿದ್ದ ಚೀತಾಗಳ ಪೈಕಿ ಇದುವರೆಗೆ 9 ಚೀತಾಗಳು ಸತ್ತಿರುವುದು ನಿರ್ಲಕ್ಷಿಸುವ ಸಂಗತಿಯಂತೂ ಅಲ್ಲ.

ಚೀತಾಗಳು ಸೇರಿದಂತೆ, ಅಳಿವಿನ ಅಂಚಿನಲ್ಲಿರುವ ಅಪರೂಪದ ಪ್ರಭೇದದ ಪ್ರಾಣಿ ಮತ್ತು ಪಕ್ಷಿ ಗಳನ್ನು ಸಂರಕ್ಷಿಸಿ, ಸೂಕ್ತ ರೀತಿಯಲ್ಲಿ ನಿಗಾವಣೆ ಮಾಡಿ, ಸಮರ್ಥವಾಗಿ ಕಾಪಿಟ್ಟುಕೊಳ್ಳದಿದ್ದರೆ, ಮುಂಬರುವ ಪೀಳಿಗೆಗೆ ಇಂಥ ಅಪರೂಪದ ಜೀವಿಗಳನ್ನು ಚಿತ್ರಪಟಗಳಲ್ಲಿ ಮಾತ್ರವೇ ತೋರಿಸ ಬೇಕಾದ ಸ್ಥಿತಿ ಒದಗಿದರೂ ಅಚ್ಚರಿಯಿಲ್ಲ.

ಅದು ಪ್ರಾಣಿಪ್ರಿಯರ ಪಾಲಿಗೆ ನಿಜಕ್ಕೂ ಆಘಾತಕಾರಿ ಬೆಳವಣಿಗೆ ಆಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಸಂಬಂಧಪಟ್ಟವರು ಈ ಬಾಬತ್ತಿನ ಕಡೆಗೆ ಆದ್ಯಗಮನವನ್ನು ನೀಡುವಂತಾಗಲಿ ಎಂಬುದು ಸಹೃದಯಿಗಳ ಆಗ್ರಹ ಮತ್ತು ನಿರೀಕ್ಷೆ.