Vishwavani Editorial: ಇದು ನಿಜನಾಯಕನ ತಾಕತ್ತು
ಪ್ರಧಾನಿ ನರೇಂದ್ರ ಮೋದಿಯ ವರೊಂದಿಗೆ ಮಾತುಕತೆ ನಡೆಸಲು ಟ್ರಂಪ್ 4 ಬಾರಿ ದೂರವಾಣಿ ಕರೆ ಮಾಡಿದ್ದರೂ, ಅವರಿಗೆ ‘ನಾಟ್ ರೀಚಬಲ್’ ಆಗಿದ್ದಾರೆ ಮೋದಿ! ಹೀಗಾಗಿ, ‘ಭಾರತದ ಮನವೊಲಿಸುವ ಟ್ರಂಪ್ ಅವರ ಕೊನೆಯ ಕ್ಷಣದ ಕಸರತ್ತು ವಿಫಲವಾಗಿರುವುದರ ದ್ಯೋತಕವಿದು’ ಎಂದೇ ರಾಜಕೀಯ ಪಂಡಿತರು ವ್ಯಾಖ್ಯಾನಿಸುತ್ತಿದ್ದಾರಂತೆ.


‘ಏರುವನು ರವಿ ಏರುವನು, ಬಾನೊಳು ಸಣ್ಣಗೆ ತೋರುವನು; ಏರಿದವನು ಚಿಕ್ಕವನಿರಬೇಕಲೆ ಎಂಬ ಮಾತನು ಸಾರುವನು’- ಇದು ಶಾಲೆಗಳಲ್ಲಿ ಓದುವಾಗ ನಾವು ಪದ್ಯಸಾಲಿನಲ್ಲಿ ಕಲಿತಿರುವ ಪಾಠ.
ಪಂಜೆ ಮಂಗೇಶರಾಯರು ಬರೆದಿರುವ ‘ಮೂಡುವನು ರವಿ ಮೂಡುವನು’ ಪದ್ಯದಲ್ಲಿ ಬರುವ ಈ ಸಾಲುಗಳು, ‘ಉನ್ನತ ಸ್ಥಿತಿಗೇರಿದವರು ಅಹಂಕಾರದ ಕೂಪದಲ್ಲಿ ಸಿಲುಕದೆ ಹೇಗೆ ವಿನಯವಂತಿಕೆ ಯನ್ನು ರೂಢಿಸಿಕೊಳ್ಳಬೇಕು’ ಎಂಬುದನ್ನು ಸೂಚ್ಯವಾಗಿ ಹೇಳುತ್ತವೆ. ದಶಕಗಳಿಂದಲೂ ‘ವಿಶ್ವದ ದೊಡ್ಡಣ್ಣ’ ಎಂದೇ ಬೀಗುತ್ತಿರುವ ಅಮೆರಿಕ ದೇಶದ ಈಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಧೋರಣೆ-ಧಾರ್ಷ್ಟ್ಯ ಇತ್ಯಾದಿಗಳನ್ನು ಜೀರ್ಣಿಸಿಕೊಳ್ಳಲಾಗದವರಿಗೆ ಈ ಸಾಲುಗಳು ನೆನಪಾಗಿದ್ದರೆ ಅಚ್ಚರಿಯೇನಿಲ್ಲ.
ಇದನ್ನೂ ಓದಿ: Vishwavani Editorial: ಸನಾತನಿಗಳು ಜಾಗೃತರಾಗಲಿ
‘ತನ್ನನ್ನು ಬಿಟ್ಟರೆ ಇಲ್ಲ’ ಎಂಬಂತೆ ಠೇಂಕಾರ ಮೆರೆಯುತ್ತಿರುವ ಟ್ರಂಪ್ ಅವರ ವಿರುದ್ಧ ಜಾಗತಿಕ ಸಮುದಾಯ ನಿಧಾನವಾಗಿ ಒಗ್ಗೂಡುತ್ತಿದೆ, ‘ವಿರೋಧಿ-ಅಲೆ’ಯೊಂದು ನಿರುದ್ವಿಗ್ನವಾಗಿ ರೂಪು ಗೊಳ್ಳುತ್ತಿದೆ. ಪರದೇಶಿ ಮಾಲುಗಳ ಮೇಲೆ ಅತಿರೇಕದ ಪ್ರಮಾಣದಲ್ಲಿ ಸುಂಕ ಏರಿಸಿ ಮೆರೆಯು ತ್ತಿರುವ ಟ್ರಂಪ್, ಅದಕ್ಕಾಗಿ ಪಶ್ಚಾತ್ತಾಪ ಪಡುವ ಕಾಲವೂ ಸನ್ನಿಹಿತವಾಗಿದೆ ಎನಿಸುತ್ತದೆ.
ಇದರ ಮೊದಲ ‘ಡೋಸ್’ ಭಾರತದಿಂದಲೇ ಸಿಕ್ಕಿದೆ. ಕಾರಣ, ಪ್ರಧಾನಿ ನರೇಂದ್ರ ಮೋದಿಯ ವರೊಂದಿಗೆ ಮಾತುಕತೆ ನಡೆಸಲು ಟ್ರಂಪ್ 4 ಬಾರಿ ದೂರವಾಣಿ ಕರೆ ಮಾಡಿದ್ದರೂ, ಅವರಿಗೆ ‘ನಾಟ್ ರೀಚಬಲ್’ ಆಗಿದ್ದಾರೆ ಮೋದಿ! ಹೀಗಾಗಿ, ‘ಭಾರತದ ಮನವೊಲಿಸುವ ಟ್ರಂಪ್ ಅವರ ಕೊನೆಯ ಕ್ಷಣದ ಕಸರತ್ತು ವಿಫಲವಾಗಿರುವುದರ ದ್ಯೋತಕವಿದು’ ಎಂದೇ ರಾಜಕೀಯ ಪಂಡಿತರು ವ್ಯಾಖ್ಯಾ ನಿಸುತ್ತಿದ್ದಾರಂತೆ. ಇದುವರೆಗೂ, ಅಮೆರಿಕದ ಕಣ್ಣ ಇಶಾರೆಗೆ ತಕ್ಕಂತೆ (ಅದು ಉಚಿತವೇ ಇರಲಿ, ಅನುಚಿತವೇ ಇರಲಿ) ಡೊಗ್ಗು ಸಲಾಮು ಹೊಡೆಯುವುದು ವಿಶ್ವದ ವಿವಿಧ ರಾಷ್ಟ್ರಗಳ ನಾಯಕರ ಚಾಳಿಯಾಗಿತ್ತು.
ಆದರೆ ಇಂಥದಕ್ಕೆಲ್ಲಾ ತಾವು ಸೊಪ್ಪು ಹಾಕುವುದಿಲ್ಲ ಎಂಬ ಸೂಚ್ಯ ವರ್ತನೆಯ ಮೂಲಕ ಪ್ರಧಾನಿ ಮೋದಿಯವರು ಟ್ರಂಪ್‌ಗೆ ‘ರಾಜತಾಂತ್ರಿಕ ತಪರಾಕಿ’ ಯನ್ನು ಸರಿಯಾಗೇ ನೀಡಿದ್ದಾರೆ. ‘ಮೇಲೆ ಏರಿದವನು ಚಿಕ್ಕವನಿರಬೇಕು’ ಎಂಬ ಹಿತನುಡಿಯನ್ನು ಕಿವಿಗೆ ಹಾಕಿಕೊಳ್ಳದವರು ಇಂಥ ಪೆಟ್ಟನ್ನು ತಿನ್ನಲೇ ಬೇಕು ಬಿಡಿ!