ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishwavani Editorial: ಅಧಿವೇಶನ ನ್ಯಾಯ ಸಲ್ಲಿಸಲಿ

ನವೆಂಬರ್ 30ರಿಂದ ಡಿಸೆಂಬರ್ 3ರವರೆಗೆ ಸಂಸತ್ ಅಧಿವೇಶನ ಕರೆಯಲಾಗಿದೆ. ಕೇವಲ ಮೂರೇ ದಿವಸಗಳ ನೋಟೀಸ್‌ನಲ್ಲಿ ಕರೆಯಲಾಗಿರುವ ಈ ಅಧಿವೇಶನ ಪ್ರತಿಪಕ್ಷಗಳ ಹುಬ್ಬೇರುವಂತೆ ಮಾಡಿದೆ. ಕಳೆದ ಮಳೆಗಾಲದ ಅಧಿವೇಶನ ಸಿಜೆಪಿ ಮುಷ್ಕರ, ಎಸ್‌ಐಆರ್ ಕುರಿತ ವಾಗ್ವಿವಾದಗಳಿಗೆ ತುತ್ತಾಗಿ ಅರ್ಧದಲ್ಲೇ ಮೊಟಕುಗೊಂಡಿತ್ತು. ಇದೀಗ ವಿಶೇಷ ಅಧಿವೇಶನವೂ ಮತ್ತೊಮ್ಮೆ ರಾಜಕೀಯ ಸಂಘರ್ಷಕ್ಕೆ ಸಾಕ್ಷಿಯಾಗುವ ಸಾಧ್ಯತೆಯಿದೆ.

ನವೆಂಬರ್ 30ರಿಂದ ಡಿಸೆಂಬರ್ 3ರವರೆಗೆ ಸಂಸತ್ ಅಧಿವೇಶನ ಕರೆಯಲಾಗಿದೆ. ಕೇವಲ ಮೂರೇ ದಿವಸಗಳ ನೋಟೀಸ್‌ನಲ್ಲಿ ಕರೆಯಲಾಗಿರುವ ಈ ಅಧಿವೇಶನ ಪ್ರತಿಪಕ್ಷಗಳ ಹುಬ್ಬೇರುವಂತೆ ಮಾಡಿದೆ. ಕಳೆದ ಮಳೆಗಾಲದ ಅಧಿವೇಶನ ಸಿಜೆಪಿ ಮುಷ್ಕರ, ಎಸ್‌ಐಆರ್ ಕುರಿತ ವಾಗ್ವಿವಾದಗಳಿಗೆ ತುತ್ತಾಗಿ ಅರ್ಧದಲ್ಲೇ ಮೊಟಕುಗೊಂಡಿತ್ತು. ಇದೀಗ ವಿಶೇಷ ಅಧಿವೇಶನವೂ ಮತ್ತೊಮ್ಮೆ ರಾಜಕೀಯ ಸಂಘರ್ಷಕ್ಕೆ ಸಾಕ್ಷಿಯಾಗುವ ಸಾಧ್ಯತೆಯಿದೆ.

ಈ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ವಿಂಗಡಣೆ (ಡಿಲಿಮಿಟೇಷನ್) ಪ್ರಮುಖ ಚರ್ಚೆಯ ವಿಷಯಗಳಾಗಲಿವೆ. ಲೋಕಸಭೆಯ ಸ್ಥಾನಗಳ ಸಂಖ್ಯೆಯನ್ನು ಗರಿಷ್ಠ 850ಕ್ಕೆ ಹೆಚ್ಚಿಸುವ ಪ್ರಸ್ತಾವನೆ ಈ ಅಧಿವೇಶನದ ಕುತೂಹಲವನ್ನು ಹೆಚ್ಚಿಸಿದೆ.

ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ಕಾನೂನಿನ ಅನುಷ್ಠಾನವನ್ನು ಕ್ಷೇತ್ರ ಪುನರ್ವಿಂಗಡಣೆಯೊಂದಿಗೆ ಜೋಡಿಸುವ ಪ್ರಯತ್ನವೂ ಚರ್ಚೆಯಲ್ಲಿದೆ. ಪ್ರತಿಪಕ್ಷಗಳು ಸಂಸತ್‌ನಲ್ಲಿ ಬಹುಮತವೂ ಇಲ್ಲದ, ಉ.ಪ್ರ.ದಂಥ ರಾಜ್ಯಗಳಲ್ಲಿ ಸೀಟ್ ಶೇರಿಂಗ್‌ನಂಥ ವಿಚಾರಗಳಲ್ಲಿ ವ್ಯಸ್ತವಾಗಿರುವಾಗ ತರಾತುರಿಯಿಂದ ಅಧಿವೇಶನ ಕರೆದಿರುವುದು ಸರಕಾರದ ಜಾಣ ನಡೆ. ಈ ಬಿಲ್‌ಗಳನ್ನು ಪಾಸ್ ಮಾಡಿಸಿಕೊಳ್ಳಲು ಬಿಜೆಪಿ ಮುಂದಾದರೆ ತಡೆಯುವವರು ಇರಲಾರರು. ಈ ವಿಶೇಷ ಅಧಿವೇಶನದಲ್ಲಿ ಪ್ರಶ್ನೋತ್ತರ ಅವಧಿ, ಶೂನ್ಯವೇಳೆ ಮತ್ತು ಖಾಸಗಿ ಸದಸ್ಯರ ಕಲಾಪಗಳಿಗೆ ಅವಕಾಶವಿಲ್ಲ ಎಂಬ ಮಾಹಿತಿ ಆತಂಕಕಾರಿ.

ಇದನ್ನೂ ಓದಿ: Winter Session in Belagavi: ಬೆಳಗಾವಿ ಚಳಿಗಾಲ ಅಧಿವೇಶನಕ್ಕೆ 7 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜನೆ

ಸಂಸತ್ತು ಕೇವಲ ಸರ್ಕಾರದ ಮಸೂದೆಗಳನ್ನು ಅಂಗೀಕರಿಸುವ ವೇದಿಕೆಯಲ್ಲ. ಜನರ ಸಮಸ್ಯೆ ಗಳನ್ನು ಪ್ರಸ್ತಾಪಿಸುವ, ಸರ್ಕಾರವನ್ನು ಪ್ರಶ್ನಿಸುವ ಮತ್ತು ಆಡಳಿತದ ಲೋಪದೋಷಗಳನ್ನು ಎತ್ತಿ ಹಿಡಿಯುವ ಅತ್ಯಂತ ಮಹತ್ವದ ಪ್ರಜಾಪ್ರಭುತ್ವದ ವೇದಿಕೆ. ಅಲ್ಪಾವಧಿಯ ಅಧಿವೇಶನದಲ್ಲಿ ವಿಧೇಯಕಗಳನ್ನು ತರಾತುರಿಯಲ್ಲಿ ಅಂಗೀಕರಿಸುವ ಪ್ರಯತ್ನ ಸಲ್ಲದು.

ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವ ಉದ್ದೇಶ ಸ್ವಾಗತಾರ್ಹ. ಆದರೆ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ವಿಂಗಡಣೆ ಎರಡನ್ನೂ ಒಂದೇ ವಿಚಾರವಾಗಿ ಪರಿಗಣಿಸಿ, ಅಗತ್ಯ ಚರ್ಚೆಯಿಲ್ಲದೆ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ. ಈ ವಿಷಯದಲ್ಲಿ ಎಲ್ಲ ರಾಜ್ಯಗಳ ಅಭಿಪ್ರಾಯ ಪಡೆದು, ದಕ್ಷಿಣ ಮತ್ತು ಉತ್ತರ ಭಾರತದ ರಾಜ್ಯಗಳ ನಡುವೆ ಸಮಾನ ನ್ಯಾಯವನ್ನು ಖಾತರಿಪಡಿಸಬೇಕು.

ಜನಸಂಖ್ಯೆ ನಿಯಂತ್ರಣ, ಶಿಕ್ಷಣ, ಆರೋಗ್ಯ ಮತ್ತು ಅಭಿವೃದ್ಧಿಯಲ್ಲಿ ಉತ್ತಮ ಸಾಧನೆ ಮಾಡಿರುವ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳು ಕೇವಲ ಜನಸಂಖ್ಯೆಯ ಆಧಾರದ ಮೇಲೆ ರಾಜಕೀಯ ಪ್ರಾತಿನಿಧ್ಯದಲ್ಲಿ ಹಿಂದುಳಿಯುವಂತಾಗಬಾರದು. ಜನಸಂಖ್ಯೆ ಹೆಚ್ಚಿಸಿಕೊಂಡ ರಾಜ್ಯಗಳಿಗೆ ಹೆಚ್ಚಿನ ಸ್ಥಾನ, ಜನಸಂಖ್ಯೆ ನಿಯಂತ್ರಿಸಿದ ರಾಜ್ಯಗಳಿಗೆ ಕಡಿಮೆ ಪ್ರಾತಿನಿಧ್ಯ ಎಂಬ ಪರಿಸ್ಥಿತಿ ನಿರ್ಮಾಣ ವಾದರೆ ಅದು ಅಭಿವೃದ್ಧಿಗೆ ನೀಡುವ ಶಿಕ್ಷೆಯಾಗುತ್ತದೆ. ಸಂಸತ್ತಿನಲ್ಲಿ ಗದ್ದಲ, ಪ್ರತಿಭಟನೆ, ಸಭಾ ತ್ಯಾಗಗಳಿಗಿಂತ ವಿಚಾರಮಂಥನಕ್ಕೆ ಆದ್ಯತೆ ಸಿಗಲಿ.