ದೀಪಾವಳಿ ಹಬ್ಬದ ಹೊಸ್ತಿಲ ರಾಜ್ಯದ ಜನತೆಗೆ ಸರಕಾರ ಶಾಕ್ ನೀಡಿದ್ದು, ಹಾಲಿನ ದರ 8 ರು. ಹೆಚ್ಚಳಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ಎಂಟು ರೂಪಾಯಿ ಪೈಕಿ ರೈತರಿಗೆ 7 ರೂಪಾಯಿ, ಇನ್ನೊಂದು ರೂಪಾಯಿ ಕೆಎಂಎಫ್ʼಗೆ ಹೋಗಲಿದ್ದು, ಕನ್ನಡ ರಾಜ್ಯೋತ್ಸವದಂದೇ ಪರಿಷ್ಕೃತ ದರ ಜಾರಿಗೆ ಬರಲಿದೆ.
ಸಚಿವರು ತಿಳಿಸಿರುವಂತೆ ದೇಶದಲ್ಲಿ ಹಾಲಿನ ಮಾರಾಟ ದರ ಸರಾಸರಿ 57 ರು. ಇದ್ದರೂ ಕರ್ನಾಟಕದಲ್ಲಿ ಪ್ರತಿ ಲೀಟರ್ಗೆ 46 ರು. ದರವಿದೆ. ಈಗ ಅದು 54 ರು. (ನೀಲಿ ಪ್ಯಾಕೆಟ್) ಆಗುತ್ತಿದೆ. ದರ ಏರಿಕೆಗೆ ಒಕ್ಕೂಟಗಳ ಬೇಡಿಕೆ ಇತ್ತು. ಏರಿಸಿದ ದರದಲ್ಲಿ ಸಿಂಹಪಾಲು ರೈತರಿಗೆ ಹೋಗುತ್ತಿರು ವುದು ಸಂತೋಷದ ವಿಷಯವೇ. ಆದರೆ, ಒಂದೇ ಏಟಿಗೆ 8 ರು. ಏರಿಸಿ ಗ್ರಾಹಕ ಬೆಚ್ಚಿ ಬೀಳುವಂತೆ ಮಾಡಿರುವುದು ದುರದೃಷ್ಟಕರ.
ಇದನ್ನೂ ಓದಿ: KMF Nandini: ಆರ್ಸಿಬಿಗೆ ಅಧಿಕೃತ ಡೈರಿ ಪಾರ್ಟ್ನರ್ ಆದ ಕೆಎಂಎಫ್ ನಂದಿನಿ; ಮೈದಾನದಲ್ಲಿ ಅಮುಲ್ ಉತ್ಪನ್ನಗಳಿಗೆ ಸ್ಪರ್ಧೆ
ಇಷ್ಟೊಂದು ದರ ಏರಿಕೆಯಿಂದ ಆಗುವ ಕ್ಯಾಸ್ಕೇಡಿಂಗ್ ಪರಿಣಾಮವನ್ನೂ ನೋಡಬೇಕು. ಈಗಾಗಲೇ ಹೋಟೆಲ್ ಮಾಲೀಕರ ಸಂಘ ಅಸಮಾಧಾನ ವ್ಯಕ್ತಪಡಿಸಿದ್ದು, ಕಾಫಿ, ಟೀ, ತಿಂಡಿ-ತಿನಿಸುಗಳ ಬೆಲೆ ಏರಿಕೆ ಮಾಡುವುದು ಅನಿವಾರ್ಯವಾಗಿದೆ ಎಂದಿದೆ. ಹಾಲು, ಮೊಸರು, ಬೆಣ್ಣೆ, ತುಪ್ಪಗಳು ಪೌಷ್ಟಿಕ ಆಹಾರ. ಮತ್ತು ಆಹಾರವೆಂಬುದು ಜನತೆಯ ಮೂಲಭೂತ ಹಕ್ಕು ಕೂಡ. ಈ ಏರಿಕೆಯಿಂದ ಸಾಮಾನ್ಯರಿಗೆ ಆಗುವ ಸಂಕಷ್ಟದ ಬಗ್ಗೆ ಮಾತಾಡಲು ಜನಸಾಮಾನ್ಯರ ಪರ ಸಂಘಟನೆಗಳೇ ಇಲ್ಲ.
ಒಂದೇ ಸಲ ಇಷ್ಟೊಂದು ಬೆಲೆ ಏರಿಸುವುದು ಅನಾಹುತಕಾರಿ. ಇದಕ್ಕೂ ಮುನ್ನ, ಹಾಲು ಹಾಗೂ ಅದರ ಉತ್ಪನ್ನಗಳಿಂದ ಬಂದ ಆದಾಯ ಎಲ್ಲಿ ಹೋಗುತ್ತಿದೆ ಎಂಬ ಪರಿಶೀಲನೆ ಆಗಬೇಕಿತ್ತು. ಬಮುಲ್, ಮನ್ಮುಲ್ ಮುಂತಾದ ಒಕ್ಕೂಟಗಳು ಇಂದು ಅಧಿಕಾರದಲ್ಲಿ ಇರುವವರ ಸಮೀಪ ವರ್ತಿಗಳ, ಸಂಬಂಧಿಕರ, ಸ್ಥಾನವಂಚಿತರ ಗಂಜಿ ಕೇಂದ್ರಗಳಾಗಿವೆ. ಒಕ್ಕೂಟಗಳ ಹೆಚ್ಚಿನ ಆದಾಯ ಇವರಿಗಾಗಿ ಸೋರಿ ಹೋಗುತ್ತಿದೆ.
ಮನ್ಮುಲ್ ಸೇರಿದಂತೆ ಕೆಲವು ಒಕ್ಕೂಟಗಳಲ್ಲಿ ಹಾಲಿನ ಪುಡಿ ಕಲಬೆರಕೆ ಮೊದಲಾದ ಅಕ್ರಮಗಳು ಕಂಡುಬಂದಿದ್ದು, ನಿರ್ದೇಶಕರನ್ನು ತನಿಖೆಗಾಗಿ ಬಂಧಿಸಿರುವ ಘಟನೆಯೂ ನಡೆದಿದೆ. ಅಕ್ರಮ, ಸೋರಿಕೆಗಳನ್ನು ನಿಲ್ಲಿಸಿದರೆ ಆದಾಯದ ಸಮರ್ಪಕ ಬಳಕೆಯೂ ಸಾಧ್ಯ. ಮಜ್ಜಿಗೆ, ತುಪ್ಪ, ಸಿಹಿತಿಂಡಿಗಳು ಸೇರಿದಂತೆ ಹಾಲಿನ ಮೌಲ್ಯವರ್ಧಿತ ಉತ್ಪನ್ನಗಳಿಂದ ಕೆಎಂಎಫ್ʼಗೆ ಸಾಕಷ್ಟು ದೊಡ್ಡ ಪ್ರಮಾಣದ ಆದಾಯವೇ ಬರುತ್ತಿದೆ. ಆದ್ದರಿಂದ ಕೆಎಂಎಫ್ ನಷ್ಟದಲ್ಲಿದೆ ಎನ್ನುವಂತಿಲ್ಲ. ಹೀಗಾಗಿ ದರ ಏರಿಕೆ ಮರುಪರಿಶೀಲನೆ ಆಗಲಿ.