ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishwavani Editorial: ಮಳೆಗಾಲದ ಸನ್ನದ್ಧತೆ ಬೇಕು

ಇವು ಜನಸಾಮಾನ್ಯರಿಗೆ ಗೋಳನ್ನು ತರುತ್ತವಲ್ಲದೆ ಹಿತವನ್ನಲ್ಲ. ಸರಕಾರ ಮೊದಲೇ ಇದನ್ನೆಲ್ಲ ಯೋಜಿಸಿ ಮಳೆಗಾಲಕ್ಕೆ ಸೂಕ್ತ ತಯಾರಿ ಮಾಡಿಕೊಳ್ಳಬೇಕು. ಮಳೆ ಬಿದ್ದ ನಂತರ ಈ ಬಗ್ಗೆ ಯೋಚಿಸು ವುದಲ್ಲ. ಇನ್ನೂ ಕಾಲ ಮಿಂಚಿಲ್ಲ. ಅರ್ಧಕ್ಕೆ ಬಿಟ್ಟ ಕಾಮಗಾರಿಗಳನ್ನು ಪೂರೈಸಬೇಕು. ಮಳೆ ನೀರು ಹರಿದುಹೋಗುವ ಮತ್ತು ಇಂಗುವ ವ್ಯವಸ್ಥೆಗಳನ್ನು ಸಮರ್ಪಕಗೊಳಿಸಬೇಕು.

ಮುಂಗಾರು ಆಗಮಿಸಿದೆ. ಈಗಾಗಲೇ ಬೆಂಗಳೂರಿನಲ್ಲಿ ಬಿದ್ದ ಮಳೆಗೆ ರಸ್ತೆಗಳು ನದಿಯಂತಾಗಿವೆ. ಮಳೆ ಎಂಬುದು ರೈತರಿಗೆ, ನಾಡಿನ ಜನತೆಗೆ ಒಳ್ಳೆಯ ಸುದ್ದಿ. ಆದರೆ ನಗರವಾಸಿಗಳಿಗೆ ಮಳೆ ಎಂದರೆ ‘ಜನಜೀವನ ಅಸ್ತವ್ಯಸ್ತ’ ಎನ್ನುವಂತಾಗಿದೆ. ಅದಕ್ಕೆ ಕಾರಣ ಸ್ಥಳೀಯಾಡಳಿತಗಳ ಸೂಕ್ತ ಯೋಜನೆ ಯಿಲ್ಲದೆ ಕಾಮಗಾರಿಗಳು.

ಬೆಂಗಳೂರಿನಲ್ಲಿ ಮಾತ್ರವಲ್ಲ ಹೀಗಿರುವುದು. ಎರಡನೇ, ಮೂರನೇ ಹಂತದ ನಗರಗಳಲ್ಲಿ ಕೂಡ ಮಳೆ ಅಸ್ತವ್ಯಸ್ತತೆಯನ್ನು ತರುತ್ತದೆ. ಅಗೆದು ಹಾಕಿದ ರಸ್ತೆಗಳು, ಅರ್ಧ ಮುಗಿಸಿಟ್ಟ ಕೇಬಲ್ ವರ್ಕ್, ಇನ್ನೇನು ಗಾಳಿ ಬೀಸಿದರೆ ಮುರಿದು ಬೀಳುವಂತಿರುವ ಮರಗಳು, ಬಾಯಿ ತೆರೆದು ನುಂಗಲು ಸನ್ನದ್ಧವಾಗಿರುವ ಮ್ಯಾನ್‌ಹೋಲ್‌ಗಳು, ಸ್ವಚ್ಛಗೊಳಿಸದ ಮೋರಿಗಳು, ಹೂಳು ತುಂಬಿಕೊಂಡ ರಾಜಕಾಲುವೆಗಳು, ಶಿಥಿಲ ಟ್ರಾನ್ಸ್'ಫಾರ್ಮರ್ʼಗಳು, ಭಾರಿ ನೀರು ತುಂಬಿಕೊಳ್ಳಲು ರೆಡಿಯಾಗಿರುವ ಅಂಡರ್‌ಪಾಸ್‌ಗಳು ಮಳೆಗಾಲವನ್ನು ಸ್ವಾಗತಿಸುತ್ತವೆ.

ಇವು ಜನಸಾಮಾನ್ಯರಿಗೆ ಗೋಳನ್ನು ತರುತ್ತವಲ್ಲದೆ ಹಿತವನ್ನಲ್ಲ. ಸರಕಾರ ಮೊದಲೇ ಇದನ್ನೆಲ್ಲ ಯೋಜಿಸಿ ಮಳೆಗಾಲಕ್ಕೆ ಸೂಕ್ತ ತಯಾರಿ ಮಾಡಿಕೊಳ್ಳಬೇಕು. ಮಳೆ ಬಿದ್ದ ನಂತರ ಈ ಬಗ್ಗೆ ಯೋಚಿಸುವುದಲ್ಲ. ಇನ್ನೂ ಕಾಲ ಮಿಂಚಿಲ್ಲ. ಅರ್ಧಕ್ಕೆ ಬಿಟ್ಟ ಕಾಮಗಾರಿಗಳನ್ನು ಪೂರೈಸಬೇಕು. ಮಳೆ ನೀರು ಹರಿದುಹೋಗುವ ಮತ್ತು ಇಂಗುವ ವ್ಯವಸ್ಥೆಗಳನ್ನು ಸಮರ್ಪಕಗೊಳಿಸಬೇಕು.

ತಗ್ಗುಪ್ರದೇಶಗಳಿಗೆ ನೀರು ನುಗ್ಗುವುದು ರಾಜಧಾನಿಯ ಬಲು ದೊಡ್ಡ ಸಮಸ್ಯೆ. ಒತ್ತುವರಿ, ನೀರು ಹೋಗಲು ಜಾಗವಿಲ್ಲದಿರುವುದು ಇದಕ್ಕೆ ಕಾರಣ. ಮಳೆ ಬಂದಾಗ ನಗರದಲಿ ಪ್ರವಾಹ ಉಂಟಾಗ ಬಹುದಾದ 130ಕ್ಕೂ ಅಧಿಕ ಸ್ಥಳಗಳನ್ನು ಜಿಬಿಎ ಗುರುತಿಸಿದೆ. ಇವುಗಳಲ್ಲಿ 60ಕ್ಕೂ ಹೆಚ್ಚು ಅತಿ ಸೂಕ್ಷ್ಮ ಪ್ರದೇಶಗಳೂ ಇವೆ.

ರಾಜಕಾಲುವೆಗಳ ಹೂಳೆತ್ತುವುದು, ಅವುಗಳ ಗೋಡೆಗಳನ್ನು ಎತ್ತರಿಸುವುದು ಆಗಬೇಕು. ಮಳೆ ಬಂದಾಗ ಚರಂಡಿಗಳು ಹೂಳೆತ್ತುವುದು, ಅಪಾಯಕಾರಿ ಮರಗಳ ಕೊಂಬೆ ಕಡಿಯುವುದು, ಮರ ಬಿದ್ದರೆ ತೆರವು ಮಾಡುವುದಷ್ಟೇ ಜಿಬಿಎ ಕರ್ತವ್ಯ ಅಲ್ಲ. ಪ್ರತೀ ಮಳೆಗಾಲದಲ್ಲಿ ಕೃತಕ ನೆರೆ ರಾಜಧಾನಿಯಲ್ಲಿ ಅಲ್ಲಲ್ಲಿ ಉಲ್ಬಣಿಸುತ್ತದೆ. ಇದನ್ನು ತಡೆಗಟ್ಟಲು ಶಾಶ್ವತ ಕ್ರಮಗಳನ್ನು ಕೈಗೊಳ್ಳದೇ ಹೋದರೆ ಪ್ರತೀ ವರ್ಷವೂ ಅನಾಹುತ ಕಟ್ಟಿಟ್ಟ ಬುತ್ತಿ.

ಗ್ರಾಮೀಣ ಪ್ರದೇಶಗಳಲ್ಲಿ, ನದಿ ತೀರದ ತಾಣಗಳಲ್ಲಿ ಬೇರೆಯದೇ ಸವಾಲುಗಳಿವೆ. ಸ್ಥಳೀಯಾ ಡಳಿತಗಳನ್ನು ಈ ಬಗ್ಗೆ ಎಚ್ಚರಿಸಿ ಸನ್ನದ್ಧ ಸ್ಥಿತಿಯಲ್ಲಿರಿಸಬೇಕು. ತುರ್ತು ಕಾರ್ಯಾಚರಣೆ ಪಡೆಗಳನ್ನು ಸಜ್ಜುಗೊಳಿಸಬೇಕು. ತುರ್ತು ಸಹಾಯವಾಣಿಗಳನ್ನು ಚಾಲನೆಗೆ ತರಬೇಕು. ಆಸ್ತಿಪಾಸ್ತಿ, ಜೀವಹಾನಿಯನ್ನು ತಡೆಯಲು ಸೂಕ್ತ ಯೋಜನೆ ಹಾಕಿಕೊಳ್ಳಬೇಕಿದೆ.