ದೇಶದಲ್ಲಿ ಅತಿ ಹೆಚ್ಚು ವಾಯುಮಾಲಿನ್ಯ ಹೊಂದಿರುವ ರಾಜಧಾನಿ ದಿಲ್ಲಿಯನ್ನು ಮಾಲಿನ್ಯಮುಕ್ತ ಮಾಡಲು ಅಲ್ಲಿನ ಆಡಳಿತ ಕಟ್ಟುನಿಟ್ಟಿನ ಕ್ರಮಗಳಿಗೆ ಮುಂದಾಗಿದೆ. ಹೊಸ ಇಲೆಕ್ಟ್ರಿಕ್ ನೀತಿಯನ್ನು ಅನುಮೋದಿಸಿದೆ. ಅದರಂತೆ, 2028ರ ಏ.1ರಿಂದ ಅಲ್ಲಿ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳ ನೋಂದಣಿ ಮಾತ್ರ ಮಾಡಲಾಗುತ್ತದೆ. ಹೊಸ ಪೆಟ್ರೋಲ್ ಮತ್ತು ಸಿಎನ್‌ಜಿ ಚಾಲಿತ ದ್ವಿಚಕ್ರ ವಾಹನಗಳ ನೋಂದಣಿಯನ್ನು ಹಂತಹಂತವಾಗಿ ರದ್ದುಗೊಳಿಸಲಾಗುತ್ತದೆ.
2027ರ ಜ.1ರಿಂದ ವಿದ್ಯುತ್ ಆಟೋರಿಕ್ಷಾಗಳು ಮತ್ತು ಎನ್-1 ವರ್ಗದ ಸರಕು ವಾಹನಗಳನ್ನು ಮಾತ್ರ ನೋಂದಾಯಿಸಲಾಗುತ್ತದೆ. ಇದರ ಜೊತೆಗೆ 30 ಲಕ್ಷ ರೂ.ಗಿಂದ ಕಮ್ಮಿ ಬೆಲೆಯ ಇ-ಕಾರು ಗಳು ತೆರಿಗೆ ಮುಕ್ತ ಕೂಡ ಆಗಿರುತ್ತವೆ. ಇ-ಬೈಕ್‌ಗಳು, ಇ-ಆಟೋಗಳು, ಇ-ಟ್ರಕ್‌ಗಳಿಗೆ ಸಬ್ಸಿಡಿ ಕೂಡ ದೊರೆಯಲಿದೆ. ವಾಯು ಮಾಲಿನ್ಯದಿಂದ ತತ್ತರಿಸುತ್ತಿದ್ದ, ಚಳಿಗಾಲದಲ್ಲಿ ಹೊಗೆ- ಮಂಜು ತುಂಬಿ ಕೊಂಡು ನರಕವಾಗುತ್ತಿದ್ದ ದಿಲ್ಲಿಗೆ ಇಂಥದೊಂದು ಉಪಕ್ರಮ ಅಗತ್ಯವಾಗಿತ್ತು.
ಇದನ್ನೂ ಓದಿ: Delhi Pollution: ಹಳೆಯ ಕಾರುಗಳಿಗೆ ದೆಹಲಿ ಪ್ರವೇಶ ನಿಷೇಧ; ಪಿಯುಸಿ ಪ್ರಮಾಣ ಪತ್ರ ಇದ್ದರಷ್ಟೇ ಇಂಧನ, ಏನಿದು ಹೊಸ ರೂಲ್ಸ್?
ಬೆಂಗಳೂರು ಕೂಡ ಇದನ್ನು ಮಾದರಿಯಾಗಿ ಇಟ್ಟುಕೊಂಡು ವಾಯುಮಾಲಿನ್ಯ ಕಡಿಮೆ ಮಾಡುವ ಉಪಕ್ರಮಗಳನ್ನು ಈಗಿನಿಂದಲೇ ಆರಂಬಿಸುವುದು ಸೂಕ್ತ. ಯಾಕೆಂದರೆ ಬೆಂಗಳೂರಿನಲ್ಲಿ ಈಗ ಜನಸಂಖ್ಯೆ ಸರಿಸುಮಾರು 1.50 ಕೋಟಿ ಇದೆ. ವಾಹನಗಳ ಸಂಖ್ಯೆಯೂ ಸರಿಸುಮಾರು 1.25 ಕೋಟಿ ಇದೆ. ವಾಹನಗಳ ನೋಂದಣಿ ಭರಾಟೆ ನೋಡಿದರೆ ಸದ್ಯದಲ್ಲೇ ತಲೆಗೊಂದು ವಾಹನ ಎಂಬಂತಾ ಗುವ ದಿನ ದೂರವಿಲ್ಲ.
ಬೆಂಗಳೂರು ಒಂದು ಕಾಲದಲ್ಲಿ ಉದ್ಯಾನ ನಗರಿ ಆಗಿತ್ತು. ಇಲ್ಲಿನ ಹವೆ ಸ್ವಚ್ಛವಾಗಿತ್ತು. ಈಗಲೂ ಅದೇ ಮಾತನ್ನು ಹೇಳುವುದು ಕಷ್ಟ. ಜನ ಎಲ್ಲ ಕಡೆಗಳಿಂದ ಬೆಂಗಳೂರಿನ ಹವೆ, ನೀರು, ಜಾಗ, ಉದ್ಯೋಗಾವಕಾಶಗಳಿಗೆ ಮನಸೋತು ವಲಸೆ ಬರುತ್ತಲೇ ಇದ್ದಾರೆ. ಕಟ್ಟಡಗಳು ಹೆಚ್ಚುತ್ತಲೇ ಇವೆ. ಕೈಗಾರಿಕೆಗಳೂ ಹೆಚ್ಚುತ್ತಿವೆ. ರಸ್ತೆಗಳು ವಿಸ್ತಾರವಾಗುತ್ತಿವೆ. -ಓವರ್‌ಗಳು, ಸುರಂಗ ಮಾರ್ಗಗಳು ಹೆಚ್ಚುತ್ತಿವೆ. ಈ ಹಂತದಲ್ಲಿ ಇ-ವಾಹನಗಳಿಗೆ ಹೆಚ್ಚಿನ ಆದ್ಯತೆ ನೀಡುವುದು, ಹಳೆಯ ಸರಕಾರಿ ವಾಹನಗಳನ್ನು ರಸ್ತೆಗಳಿಂದ ದೂರ ಇಡುವುದು ಆಗಬೇಕಿದೆ.
ಹದಿನೈದು ವರ್ಷಗಳಾಗಿರುವ ವಾಹನಗಳನ್ನು ಸ್ಕ್ರಾಪ್ ಮಾಡಬೇಕು ಎಂಬ ನಿಯಮವಿದೆ. ಇದು ಕಾರ್ಪೊರೇಟ್ ಕಂಪನಿಗಳಿಗೆ ಲಾಭ ಮಾಡಿಕೊಡುವ ನಿಯಮ ಹಾಗೂ ಇದರಿಂದ ಮಧ್ಯಮ ವರ್ಗದವರಿಗೆ ಹಾನಿ ಹೆಚ್ಚು. ಇದನ್ನು ಗಮನದಲ್ಲಿಟ್ಟುಕೊಂಡು ಹೊಸ ನಿಯಮಗಳನ್ನು ರೂಪಿಸ ಬೇಕು. ದುಬಾರಿ ಬೆಲೆಯ, ಹೆಚ್ಚು ಪೆಟ್ರೋಲ್ ಕುಡಿಯುವ ಹಾಗೂ ಹೊಗೆಯುಗುಳುವ ವಾಹನ ಗಳನ್ನು ನಿಯಂತ್ರಣದಲ್ಲಿಡಬೇಕು. ಬೆಂಗಳೂರು ದಿಲ್ಲಿಯಂತೆ ಆಗುವ ಮುನ್ನ ನಾವು ಎಚ್ಚೆತ್ತುಕೊಳ್ಳ ಬೇಕಿದೆ.