ಬಿಪಿಯಿಂದ ಕುಸಿದು ಬಿದ್ದು 8ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ರಂಗಸಮುದ್ರದಲ್ಲಿ ನಡೆದಿದೆ. ಮೂರು ದಿನಗಳ ಹಿಂದೆ ದಕ್ಷಿಣ ಕನ್ನಡದ ಸುರತ್ಕಲ್ ಸಮೀಪದ ಸೂರಿಂಜೆಯಲ್ಲಿ ವಾಲಿಬಾಲ್ ಆಡುತ್ತಿದ್ದ 15 ವರ್ಷದ ಬಾಲಕನೊಬ್ಬ ದಿಢೀರ್ ಕುಸಿದುಬಿದ್ದು ಮೃತಪಟ್ಟಿದ್ದಾನೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹಾಳಸಸಿ ಎಂಬಲ್ಲಿ 6 ವರ್ಷದ ಬಾಲಕನೊಬ್ಬ ಶಾಲಾ ಆವರಣದಲ್ಲಿ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿದ್ದ ಘಟನೆ ಕಳೆದ ತಿಂಗಳು ಘಟಿಸಿತ್ತು.
ನಂದಿಬೆಟ್ಟದ ತಪ್ಪಲಿನಲ್ಲಿ ನಿನ್ನೆ ನಡೆದ ಮಾನ್ಸೂನ್ ಮ್ಯಾರಥಾನ್ ಓಟದ ವೇಳೆ 31 ವರ್ಷದ ಕ್ರೀಡಾಪಟುವೊಬ್ಬರು ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ಯಾಕೆ ಹೀಗೆ ಎಳೆಯ ಜೀವಗಳು ಆಕಸ್ಮಿಕವಾಗಿ ಹೃದಯ ಸಮಸ್ಯೆಗಳಿಂದ ಸಾವನ್ನಪ್ಪುತ್ತಿವೆ? ಈ ಪ್ರಶ್ನೆ ಕೊರೊನಾ ಸೋಂಕಿನ ಕಾಲದಿಂದಲೂ ಇದೆ. ಈ ಕುರಿತು ಹುಬ್ಬಳ್ಳಿಯ ಕೆಎಂಸಿಆರ್‌ಐನ ಬಹುವಿಭಾಗೀಯ ಸಂಶೋಧನಾ ಘಟಕ ಕೇಂದ್ರ ಸರಕಾರದ ಆರೋಗ್ಯ ಸಂಶೋಧನಾ ಇಲಾಖೆ ಜೊತೆ ಜಂಟಿಯಾಗಿ 13 ರಾಜ್ಯ ಹಾಗೂ ಕರ್ನಾಟಕದ 25 ಜಿಲ್ಲೆಗಳಲ್ಲಿ ಸಂಶೋಧನಾ ಅಧ್ಯಯನ ನಡೆಸಿದ್ದು, ವರದಿಯನ್ನು ಸರಕಾರಕ್ಕೆ ನೀಡಲಿದೆ. ಇದರಲ್ಲಿ ಹಲವು ಆಘಾತಕಾರಿ ಅಂಶಗಳು ಕಂಡುಬಂದಿವೆ.
ಇದನ್ನೂ ಓದಿ: Vishwavani Editorial: ನ್ಯಾಯಾಂಗ ವರದಿಗಾರಿಕೆಯ ಸೂಕ್ಷ್ಮ
ಪರೀಕ್ಷೆಗೆ ಒಳಪಡಿಸಿದವರಲ್ಲಿ ಶೇ.70ರಷ್ಟು ಮಕ್ಕಳು ಹೃದಯ ಸಮಸ್ಯೆಗೆ ತುತ್ತಾಗುವ ಸಂಭವ ಇರುವುದು ಬಯಲಾಗಿದೆ. ಬದಲಾದ ಜೀವನ ಶೈಲಿ, ಆಟೋಟಗಳಿಂದ ದೂರ ಉಳಿದಿದ್ದರಿಂದ ಬೊಜ್ಜು ಕಾಣಿಸಿಕೊಳ್ಳುವುದು, ಆಲ್ಕೋಹಾಲ್, ಧೂಮಪಾನ, ತಂಬಾಕು, ಜಂಕ್ ಫುಡ್ ಸೇವನೆಯಿಂದ ಅವರಲ್ಲಿನ ಎಂಡೋಥೀಲಿಯಂ, ಅಂದರೆ ಅಪಧಮನಿಯ ಒಳಪದರು ಹಾಳಾಗುತ್ತಿರುವುದು ಕಂಡು ಬಂದಿದೆ. ಇದು ಹೃದಯಾಘಾತಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು.
8 ರಿಂದ 14 ವರ್ಷದ ಶಾಲಾ ಮಕ್ಕಳು ಹಾಗೂ 18 ರಿಂದ 30 ವರ್ಷ ವಯಸ್ಸಿನ ಕಾಲೇಜು ವಿದ್ಯಾರ್ಥಿಗಳಲ್ಲಿ ಅಧ್ಯಯನ ಮಾಡಲಾಗಿದೆ. ಆದರೆ ವ್ಯಾಯಾಮ ನಿರತರಾದ ಮಕ್ಕಳೂ ಹೀಗೆ ಸಾವಿಗೆ ತುತ್ತಾಗುತ್ತಿದ್ದಾರೆ. ಆದ್ದರಿಂದ ಇನ್ನಷ್ಟು ಅಧ್ಯಯನ ನಡೆಯುವುದು ಅಗತ್ಯ. ಆದರೆ ಈಗಿನ ಅಧ್ಯಯನ ವಿಫಲ ಅನ್ನುವಂತಿಲ್ಲ. ಇದು ಸಾಕಷ್ಟು ನಿಜವೇ ಆಗಿದೆ. ಮೊದಲು ಮಕ್ಕಳಿಗೆ ಶಾಲೆಯಲ್ಲಿ ಆಟೋಟ ಪೀರಿಯಡ್‌ಗಳು ಸಾಕಷ್ಟು ಇದ್ದವು. ಇದೀಗ ಸೆಮಿಸ್ಟರ್ ಪದ್ಧತಿ ಬಂದ ಬಳಿಕ, ಪಠ್ಯವನ್ನು ಮುಗಿಸುವ ಭರದಲ್ಲಿ ವ್ಯಾಯಾಮವನ್ನು ಮಕ್ಕಳಿಂದ ಕಸಿಯಲಾಗಿದೆ.
ಸ್ಮಾರ್ಟ್ಫೋನ್ ಸೇರಿದಂತೆ ಸ್ಕ್ರೀನ್‌ಟೈಮ್ ಕೂಡ ಅಂಗಳದ ಸಮಯವನ್ನು ಕಿತ್ತುಕೊಂಡಿದೆ. ಇದೆಲ್ಲವನ್ನು ಗ್ರಹಿಸಿ ಮಕ್ಕಳ ಆರೋಗ್ಯ ರಕ್ಷಣೆಗಾಗಿ ಸಮಗ್ರ ಆರೋಗ್ಯ ನೀತಿಯೊಂದು ರೂಪುಗೊಳ್ಳಬೇಕಿದೆ. ಇಂದಿನ ಮಕ್ಕಳನ್ನು ಕಾಪಾಡಿಕೊಳ್ಳದಿದ್ದರೆ ಮುಂದಿನ ಭವಿಷ್ಯವಿಲ್ಲ.