ರಾಜ್ಯದಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಹೆಸರಿನಲ್ಲಿ ನಡೆಯುತ್ತಿರುವ ಪ್ರಹಸನಗಳು, ತಮಾಷೆಗಳು ಮುಗಿಯುವಂತೆಯೇ ಕಾಣುತ್ತಿಲ್ಲ. ಇದು ಹೊರಗಿನಿಂದ ನೋಡುವವರಿಗೆ ತಮಾಷೆ. ಆದರೆ ಇದರೊಳಗೆ ಸಿಲುಕಿಕೊಂಡವರಿಗೆ ಇದು ಮುಗಿಯಲಾರದ ಚಕ್ರವ್ಯೂಹ. ಎಷ್ಟು ದಾಖಲೆ ಗಳನ್ನು ಕೊಟ್ಟರೂ, ಎಷ್ಟು ಸಾರಿ ಬಿಎಲ್‌ಒಗಳ ಬಳಿಗೆ, ಅಧಿಕಾರಿಗಳ ಹತ್ತಿರ ಎಡತಾಕಿದರೂ ಮುಗಿಯದ ಬವಣೆ. ಈಗ ಎಸ್‌ಐಆರ್ ನೋಟೀಸ್‌ಗಳ ಪರ್ವಕಾಲ.
ನಾಡೇ ಬಲ್ಲ ಹರೇಕಳ ಹಾಜಬ್ಬ ಅವರಿಗೆ ನೋಟಿಸ್ ಕೊಟ್ಟು ಹಿಂಪಡೆಯಲಾಗಿದೆ. ‘ಹರೇಕಳ ಹಾಜಬ್ಬ’ ಮತ್ತು ‘ಹಾಜಬ್ಬ’ ಎಂಬ ಹೆಸರಿನ ವ್ಯತ್ಯಾಸದಿಂದ ಹೀಗಾಗಿದೆಯಂತೆ. ಈ ನೋಟೀಸ್ ಕೊಟ್ಟವರು ಅಕ್ಷರ ಬಲ್ಲವರೋ ಅಲ್ಲವೋ ಗೊತ್ತಿಲ್ಲ. ಮೇಲುಕೋಟೆಯ ಸಮಾಜ ಸೇವಾಕರ್ತ ರೊಬ್ಬರ ಅವಳಿ ಮಕ್ಕಳಿಗೆ ಸಂಬಂಧಿಸಿ ನೋಟೀಸ್ ಬಂದಿದೆ. ಮಕ್ಕಳ ನಡುವೆ 9 ತಿಂಗಳಿಗಿಂತ ಕಡಿಮೆ ಅಂತರವಿದೆ, ಹೀಗಾಗಿ ಮತಪಟ್ಟಿಯಲ್ಲಿ ಸೇರಿಸುವ ಕುರಿತು ಸಂಶಯ ಇದೆಯಂತೆ. ಅವಳಿ ಮಕ್ಕಳ ನಡುವೆಯೂ ಒಂದು ವರ್ಷ ಅಂತರ ಇರಬೇಕು ಎಂದು ನಿಯಮ ರೂಪಿಸಿದ ಬೃಹಸ್ಪತಿ ಯಾರೋ ತಿಳಿಯದು.
ಇದನ್ನೂ ಓದಿ: SIR in Karnataka: ಹುಬ್ಬಳ್ಳಿಯ ತಮ್ಮ ನಿವಾಸದಲ್ಲೇ SIRನಲ್ಲಿ ಭಾಗಿಯಾಗಿ ಪ್ರೇರಣೆಯಾದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಗಂಡ ಹೆಂಡತಿ ನಡುವೆ 10 ವರ್ಷಕ್ಕೂ ಹೆಚ್ಚು ಅಂತರವಿದ್ದರೆ ನೋಟೀಸ್, ಪೋಷಕರಿಗೂ ಮಕ್ಕಳಿಗೂ 19 ವರ್ಷಕ್ಕಿಂತ ಕಡಿಮೆ ಅಂತರ ಇದ್ದರೆ ನೋಟೀಸ್- ಈಗಿನ ಅನೇಕ ಹಿರಿಯ ನಾಗರಿಕರು ಬಾಲ್ಯ ವಿವಾಹ ಆದವರು ಎಂಬ ಸಾಮಾಜಿಕ ವಿವರ ಇವರಿಗೆ ಗೊತ್ತಿಲ್ಲವೋ ಅಥವಾ ನಿಯಮವೇ ಹಾಗಿದೆಯೋ ತಿಳಿಯದು. ಫಾರಂ ನಂಬರ್ 6 ಕೊಟ್ಟು ಪಟ್ಟಿಯಿಂದ ಮೃತರ ಹೆಸರು ತೆಗೆಯಲು ಹೇಳಿದ್ದರೂ ತೆಗೆಯದೆ ಇಟ್ಟದ್ದರಿಂದ ಪ್ರಮಾದ. ಇನ್ನು ಹೆಸರುಗಳ ಪ್ರಮಾದ, ಒಂದಕ್ಷರ ವ್ಯತ್ಯಾಸ ಇದ್ದರೆ ಅವರ ಗತಿ ಅಧೋಗತಿ. ನೋಟೀಸ್ ತೆಗೆದುಕೊಂಡು ಬಂದವರ ಎದುರು ದಾಖಲೆ ಗಳನ್ನಿಟ್ಟುಕೊಂಡು ಕೂರಬೇಕು.
ಇನ್ನು ಕೆಲವೆಡೆ ಅಧಿಕಾರಿಗಳನ್ನೇ ಹುಡುಕಿಕೊಂಡು ಹೋಗಬೇಕು. ಅವರೂ ದಿನನಿತ್ಯ ನೂರಾರು ಜನರ ಅಹವಾಲು ಕಂಡು ಕೇಳಿ ರೋಸಿಹೋಗಿದ್ದಾರೆ. ಇದೀಗ, ನೋಟೀಸ್ ಪಡೆಯಲಿರುವ ವ್ಯಕ್ತಿ ಗಳ ಹೆಸರಿನ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರ ಹೆಸರು ತಪ್ಪಾಗಿ ಕೈಬಿಡಂತೆ ಪಾರದರ್ಶಕತೆ ಮತ್ತು ಸಮರ್ಪಕ ಅವಕಾಶ ಕಲ್ಪಿಸು ವುದು ಅತ್ಯಂತ ಮುಖ್ಯವಾಗಿದೆ.
ಮತದಾರರು ದಾಖಲೆಗಳನ್ನು ಸಲ್ಲಿಸಲು ಹಾಗೂ ಹಕ್ಕು- ಆಕ್ಷೇಪಣೆ ಸಲ್ಲಿಸಲು ಅವಧಿ ವಿಸ್ತರಣೆ ಮಾಡಬೇಕೆಂಬ ನಾಗರಿಕರ ಆಗ್ರಹವೂ ನ್ಯಾಯಯುತ ವಾಗಿದೆ. ಯಾಕೆಂದರೆ ಅಷ್ಟೊಂದು ಭಾರಿ ಪ್ರಮಾಣದ ಮತದಾರರ ಹೆಸರುಗಳ ಗೊಂದಲ, ಕೈಬಿಡುವಿಕೆ ರಾಜ್ಯದಲ್ಲಿ ಆಗಿದೆ.