ಕರ್ನಾಟಕದ ಶಾಲಾ ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಅನುಮತಿ ನೀಡಲಾಗಿದೆ. ಜತೆಗೆ ಹಿಂದೂ ಧರ್ಮದ ಪವಿತ್ರ ದಾರ, ರುದ್ರಾಕ್ಷಿ, ಜನಿವಾರ, ಸಿಕ್ಖರ ಪೇಟ ಸೇರಿ ಎಲ್ಲಾ ಧರ್ಮಗಳ ಧಾರ್ಮಿಕ ವಸ್ತುಗಳಿಗೂ ಅವಕಾಶವಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
2022ರಲ್ಲಿ ಈ ವಿಚಾರ ರಾಜ್ಯದಾದ್ಯಂತ ದೊಡ್ಡ ಮಟ್ಟದ ಧರ್ಮದಂಗಲ್‌ಗೆ ಕಾರಣ ವಾಗಿತ್ತು. ಉಡುಪಿಯ ಸರ್ಕಾರಿ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದ್ದಕ್ಕೆ ಪ್ರತಿಯಾಗಿ ಇತರ ವಿದ್ಯಾರ್ಥಿಗಳು ಕೇಸರಿ ಶಾಲ್ ಧರಿಸಿ ಕಾಲೇಜಿಗೆ ಬಂದಿದ್ದ ರಿಂದ ಹುಟ್ಟಿಕೊಂಡ ವಿವಾದ, ಕಾನೂನು ಸಮರಕ್ಕೂ ಕಾರಣವಾಗಿತ್ತು.
ಇದನ್ನೂ ಓದಿ: Vishwavani Editorial: ನೀಟ್ ಪತ್ರಿಕೆ ಸೋರಿಕೆ ಅಕ್ಷಮ್ಯ
ದೊಡ್ಡ ಮಟ್ಟದ ಪರ-ವಿರೋಧ ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿತ್ತು. ಸರ್ಕಾರದ ಈ ನಿರ್ಧಾರ ಮತ್ತೊಮ್ಮೆ ಜೇನುಗೂಡಿಗೆ ಕಲ್ಲು ಎಸೆದಂತಾಗಿದೆ. ಈ ವಿಚಾರ ಈಗಾಗಲೇ ಕೋರ್ಟ್‌ನಲ್ಲಿ ಒಂದು ಮಟ್ಟದ ಇತ್ಯರ್ಥವಾಗಿತ್ತು. ಅಂದಿನ ಬಿಜೆಪಿ ಸರ್ಕಾರ ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಅಡಿಯಲ್ಲಿ ಆದೇಶ ಹೊರಡಿಸಿ, ಸಮಾನತೆ, ಸಮಗ್ರತೆ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಧಾರ್ಮಿಕ ಉಡುಪುಗಳನ್ನು ಧರಿಸಿ ತರಗತಿಯೊಳಗೆ ಬರುವಂತಿಲ್ಲ ಎಂದು ತಿಳಿಸಿತ್ತು.
ಸರ್ಕಾರದ ಈ ಆದೇಶ ಪ್ರಶ್ನಿಸಿ ವಿದ್ಯಾರ್ಥಿನಿಯರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿ ದ್ದರು. ಹೈಕೋರ್ಟ್ʼನ ತ್ರಿಸದಸ್ಯ ಪೀಠವು, ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅತ್ಯಗತ್ಯ ಆಚರಣೆಯಲ್ಲ ಎಂದು ಅಭಿಪ್ರಾಯಪಟ್ಟು, ಸರ್ಕಾರದ ಸಮವಸ್ತ್ರ ಕಡ್ಡಾಯ ಆದೇಶವನ್ನು ಎತ್ತಿ ಹಿಡಿದಿತ್ತು.
ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಯಿತು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ ವಿಭಜಿತ ತೀರ್ಪು ನೀಡಿತ್ತು. ಅಂತಿಮ ತೀರ್ಪಿಗಾಗಿ ಪ್ರಕರಣ ವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗಿತ್ತು. ಇದರ ನಡುವೆಯೇ ಈ ಆದೇಶ ಹೊರಡಿಸ ಲಾಗಿದೆ. ಈಗ ಇದು ಅಗತ್ಯವಿತ್ತೇ ಎಂಬುದು ಪ್ರಶ್ನೆ.
ಸರಕಾರ ಬದಲಾದಂತೆ ಪಠ್ಯವೂ ಬದಲಾಗುವುದನ್ನು ನೋಡುತ್ತ ಬಂದಿದ್ದೇವೆ. ಈಗ ವಸ್ತ್ರ ಸಂಹಿತೆಯೂ ಬದಲಾಗುವ ಚಾಳಿ ಆರಂಭವಾಗಿದೆ. ಇದು ಒಳ್ಳೆಯ ರೂಢಿಯಲ್ಲ. ಮುಂದೆ ಇನ್ನೊಂದು ಸರಕಾರ ಬಂದರೆ, ಈ ಆದೇಶವನ್ನು ಮತ್ತೆ ಬದಲಾಯಿಸಿದರೆ ಪ್ರಶ್ನಿಸು ವಂತಿಲ್ಲ. ಇದರ ನಡುವೆ ಗೊಂದಲದಿಂದ ನಲುಗುವವರು ವಿದ್ಯಾರ್ಥಿಗಳು ಎಂಬುದನ್ನು ಮರೆಯಕೂಡದು. ಈ ಆದೇಶದ ಹಿಂದೆ ಬಿಜೆಪಿಯ ವಿರುದ್ಧದ ಜಿದ್ದು ಇದ್ದಂತಿದೆಯೇ ಹೊರತು, ವಿದ್ಯಾರ್ಥಿಗಳ ಹಿತಚಿಂತನೆಯನ್ನು ಮಾಡಿ ಈ ನಿರ್ದೇಶನ ನೀಡಿದಂತೆ ಕಾಣಿಸುತ್ತಿಲ್ಲ.