ರಾಜಧಾನಿ ಬೆಂಗಳೂರಿನಲ್ಲಿ ಬ್ಯಾಂಕ್ ಎಟಿಎಂಗೆ ತುಂಬಬೇಕಿದ್ದ 7.11 ಕೋಟಿ ರು. ನಗದು ಹಾಡಹಗಲೇ ದರೋಡೆಯಾಗಿರುವುದು ಆತಂಕಕಾರಿ ಬೆಳವಣಿಗೆ. ಕಳೆದ ಐದಾರು ತಿಂಗಳಲ್ಲಿ ಇಂತಹ ಆರೇಳು ಪ್ರಕರಣಗಳು ರಾಜ್ಯದಲ್ಲಿ ನಡೆದಿವೆ. ಆದರೂ ಬ್ಯಾಂಕ್ ಮತ್ತು ಎಟಿಎಂ ಹಣದ ಸುರಕ್ಷತೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಪೊಲೀಸರು ನಿರ್ಲಕ್ಷ್ಯ ವಹಿಸಿರುವುದು ಸ್ಪಷ್ಟ.
ಕ್ಷಣಾರ್ಧದಲ್ಲಿ ಕೋಟ್ಯಂತರ ರೂಪಾಯಿ ಲೂಟಿಯಾಗುತ್ತಿದ್ದು, ಇದಕ್ಕೆ ಕಂಪನಿಗಳ ಸುರಕ್ಷತಾ ಲೋಪ ಕಾರಣವೋ ಅಥವಾ ಸಿಬ್ಬಂದಿಯ ಅಜಾಗರೂಕತೆಯೋ ಎಂಬ ಸಂಶಯ ಮೂಡಿದೆ. ಬೆಂಗಳೂರಿನಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಎಟಿಎಂಗೆ ಹಣ ತುಂಬುವ ಸಿಬ್ಬಂದಿಗಳ ಕೈವಾಡ ಇದೆ ಎಂದು ಶಂಕಿಸಲಾಗಿದೆ.
ಇದನ್ನೂ ಓದಿ: Vishwavani Editorial: ಡಿಜಿಟಲ್ ವಂಚಕರಿದ್ದಾರೆ, ಎಚ್ಚರಿಕೆ
ಸಾರಿಗೆ ಬಸ್ ಗಳಿಗೂ ಜಿಪಿಆರ್‌ಎಸ್ ವ್ಯವಸ್ಥೆ ಇರುವಾಗ ಕೋಟ್ಯಂತರ ರುಪಾಯಿ ಹಣ ಸಾಗಿಸುವ ಸಿಎಂಎಸ್ ವಾಹನಗಳು ಯಾವ ರಸ್ತೆಯಲ್ಲಿ ಚಲಿಸುತ್ತದೆ, ಎಷ್ಟು ಗಂಟೆಗೆ, ಯಾವ ಎಟಿಎಂ ತಲುಪಿದೆ ಎಂಬ ಮಾಹಿತಿ ಸಿಬ್ಬಂದಿಗಳಿಗೆ ಇಲ್ಲ ಎಂದರೆ ಇದು ಉದ್ದೇಶಪೂರ್ವಕ ನಿರ್ಲಕ್ಷ್ಯ ಎಂದು ಭಾವಿಸಬೇಕಾಗುತ್ತದೆ.
ಎಟಿಎಂ ವಾಹನದ ಚಲನವಲನದ ಬಗ್ಗೆ ಮಾಹಿತಿ ಇರುವವರೇ ಈ ಕೃತ್ಯ ಎಸಗಿರುವುದು ಸ್ಪಷ್ಟ. ಈ ಹಿಂದೆ ಮಂಗಳೂರಿನ ಉಳ್ಳಾಲ ಮತ್ತು ವಿಜಯಪುರದ ಚಡಚಣ ಮತ್ತು ಮನಗೂಳಿಯಲ್ಲಿ ನಡೆದ ಬ್ಯಾಂಕ್ ದರೋಡೆ ಪ್ರಕರಣಗಳಲ್ಲಿ ಉತ್ತರ ಭಾರತ ಮೂಲದ ದರೋಡೆಕೋರರು ಭಾಗಿಯಾಗಿದ್ದರು. ಪೊಲೀಸರು ಅಲ್ಪಾವಧಿಯಲ್ಲಿಯೇ ಈ ಪ್ರಕರಣ ವನ್ನು ಭೇದಿಸಿ, ದರೋಡೆಯಾದ ಬಹುತೇಕ ನಗದು ಮತ್ತು ಆಭರಣಗಳನ್ನು ವಶಪಡಿಸಿ ಕೊಳ್ಳಲು ಯಶಸ್ವಿಯಾಗಿದ್ದರು.
ಬೆಂಗಳೂರು ದರೋಡೆ ಪ್ರಕರಣದಲ್ಲಿ ಆರೋಪಿಗಳ ಸುಳಿವು ಲಭ್ಯವಾಗಿದೆ ಎನ್ನಲಾಗಿದೆ. ಆದರೆ ಯಾವುದೋ ರಾಜ್ಯದಿಂದ ಇಲ್ಲಿಗೆ ಬಂದು ದರೋಡೆ ನಡೆಸಲು ದುಷ್ಕರ್ಮಿಗಳಿಗೆ ಪ್ರೇರಣೆ ಏನು ಎನ್ನುವುದನ್ನು ಪತ್ತೆ ಮಾಡಬೇಕಾಗಿದೆ. ಪಾತಕಿಗಳಿಗೆ ಕರ್ನಾಟಕ ಸಾಫ್ಟ್ ಸ್ಟೇಟ್ ಎಂಬ ಭಾವನೆ ಇದ್ದಂತಿದೆ. ಈ ಭಾವನೆಯನ್ನು ಹೋಗಲಾಡಿಸಬೇಕಾದರೆ ಈಗಾಗಲೇ ಸಿಕ್ಕಿ ಬಿದ್ದ ಆರೋಪಿಗಳಿಗೆ, ಮುಂದೆ ಪಾಠವಾಗುವ ರೀತಿಯಲ್ಲಿ ಕಠಿಣ ಶಿಕ್ಷೆ ವಿಧಿಸಬೇಕು. ಮತ್ತೊಮ್ಮೆ ಇಂತಹ ಕೃತ್ಯ ಮರುಕಳಿಸದಂತೆ ಕಟ್ಟು ನಿಟ್ಟಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು.