ಕೇರಳ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸ್ತಾವಿತ ಲೋಕಸಭೆ ಕ್ಷೇತ್ರ ಪುನರ್‌ವಿಂಗಡಣೆ ಬಗ್ಗೆ ಮಾತನಾಡುತ್ತಾ ಇದರಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ವಾಗದು. ಎಲ್ಲ ರಾಜ್ಯಗಳಲ್ಲೂ ಶೇ.50ರಷ್ಟು ಸೀಟುಗಳನ್ನು ಹೆಚ್ಚಿಸಲಾಗುತ್ತದೆ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಅವರು ಕ್ಷೇತ್ರ ಪುನರ್ ವಿಂಗಡಣೆಯನ್ನು ಕರ್ನಾಟಕದಂತಹ ರಾಜ್ಯಗಳ ಧ್ವನಿ ದುರ್ಬಲಗೊಳಿಸಲೆಂದೇ ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಸಿದ್ದರಾಮಯ್ಯನವರ ಈ ಆತಂಕ ಅಸಹಜವೇನಲ್ಲ.
ಸದ್ಯದ ಅಂದಾಜು ಪ್ರಕಾರ, ಪುನರ್‌ವಿಂಗಡಣೆಯ ನಂತರ ಲೋಕಸಭೆಯ ಒಟ್ಟು ಸ್ಥಾನಗಳ ಸಂಖ್ಯೆ 800 ದಾಟಬಹುದು. ಸದ್ಯ 80 ಸ್ಥಾನಗಳನ್ನು ಹೊಂದಿರುವ ಉತ್ತರ ಪ್ರದೇಶ ಭವಿಷ್ಯದಲ್ಲಿ 140 ಸೀಟುಗಳನ್ನು ಪಡೆಯುವ ನಿರೀಕ್ಷೆ ಇದೆ. ಆದರೆ ಪ್ರಸ್ತುತ 28 ಸೀಟುಗಳನ್ನು ಹೊಂದಿರುವ ಕರ್ನಾ ಟಕ ಕೇವಲ 40 ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದೆ.
ಇದನ್ನೂ ಓದಿ: Vishwavani Editorial: ತಾತ್ವಿಕ ಅನುಮೋದನೆ; ಇರಲಿ ಎಚ್ಚರಿಕೆ
ಇದರಿಂದ ದೇಶದ ಚುಕ್ಕಾಣಿ ಹಿಡಿಯುವ ಶಕ್ತಿ ಕೇವಲ ಹಿಂದಿ ಭಾಷಿಕ ರಾಜ್ಯಗಳ ಪಾಲಾಗಲಿದೆ. ದಕ್ಷಿಣದ ರಾಜ್ಯಗಳ ಸಮಸ್ಯೆಗಳು, ಭಾಷಾ ಹಿತಾಸಕ್ತಿಗಳು ಮತ್ತು ಸಾಂಸ್ಕೃತಿಕ ಬೇಡಿಕೆಗಳು ದೆಹಲಿ ಯ ಅಧಿಕಾರದ ಅಬ್ಬರದಲ್ಲಿ ಕೇವಲ ’ಧ್ವನಿಗಳಾಗಿ’ ಉಳಿಯುತ್ತವೆಯೇ ಹೊರತು ’ನಿರ್ಧಾರ ಗಳಾಗಿ’ ಬದಲಾಗುವುದಿಲ್ಲ ಎಂಬ ಆತಂಕ ಸಾರ್ವತ್ರಿಕವಾಗಿದೆ.
ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣಗಳು ಕಳೆದ 5 ದಶಕಗಳಲ್ಲಿ ಜನಸಂಖ್ಯೆಯನ್ನು ನಿಯಂತ್ರಿಸುವ ಮೂಲಕ ತಲಾವಾರು ಆದಾಯ, ಶಿಕ್ಷಣ ಮತ್ತು ಆರೋಗ್ಯ ಸೂಚ್ಯಂಕಗಳಲ್ಲಿ ರಾಷ್ಟ್ರಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿವೆ.
ಜನಸಂಖ್ಯೆಯನ್ನು ಮಾನದಂಡವಾಗಿಟ್ಟುಕೊಂಡು ಕ್ಷೇತ್ರಗಳನ್ನು ಮರು ಹಂಚಿಕೆ ಮಾಡಿದರೆ, ಜನಸಂಖ್ಯೆ ಸ್ಫೋಟಗೊಂಡಿರುವ ಉತ್ತರ ಭಾರತದ ರಾಜ್ಯಗಳು ಹೆಚ್ಚಿನ ಸೀಟುಗಳನ್ನು ಪಡೆಯು ತ್ತವೆ. ಪುನರ್‌ವಿಂಗಡಣೆಯು ಪ್ರಾದೇಶಿಕ ಅಸಮಾನತೆಯನ್ನು ಹೆಚ್ಚಿಸಿದರೆ ಅದು ಅಂತಿಮವಾಗಿ ಪ್ರತ್ಯೇಕತೆಯ ಕೂಗಿಗೆ ಕಾರಣವಾಗಬಹುದು. ದೇಶದ ಭಾವನಾತ್ಮಕ ಏಕತೆಗೆ ಧಕ್ಕೆ ತರಬಹುದು. ರಾಜ್ಯಗಳ ಗಾತ್ರ ಏನೇ ಇರಲಿ, ಅಮೆರಿಕದಂತೆ ಮೇಲ್ಮನೆಯಲ್ಲಿ (ರಾಜ್ಯಸಭೆ) ಎಲ್ಲಾ ರಾಜ್ಯಗಳಿಗೆ ಸಮಾನ ಪ್ರಾತಿನಿಧ್ಯ ನೀಡುವ ಬಗ್ಗೆ ಚಿಂತಿಸಬೇಕಿದೆ.