ದಿನಗಳೆದಂತೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಒಂದೊಂದೇ ಬಣ್ಣಗಳು ಬಯಲಾ ಗುತ್ತಿವೆ. ಸಾಕಷ್ಟು ಅಂತಾರಾಷ್ಟ್ರೀಯ ಯುದ್ಧಗಳನ್ನು ನಿಲ್ಲಿಸಿರುವ ತಮಗೆ ನೊಬೆಲ್ ಶಾಂತಿ ಪುರಸ್ಕಾರ ದಕ್ಕಲೇಬೇಕು ಎಂದು ಇನ್ನಿಲ್ಲದಂತೆ ಹಠ ಹಿಡಿದಿದ್ದ ಟ್ರಂಪ್ ಮಹಾಶಯರು, ಆ ಕಾಲಘಟ್ಟ ಮುಗಿಯುತ್ತಿದ್ದಂತೆ ಇರಾನ್‌ನ ಅಂತಃಕಲಹದಲ್ಲಿ ಮೂಗು ತೂರಿಸುತ್ತಿದ್ದಾರೆ. ಅದಕ್ಕೆ ಇನ್ನಷ್ಟು ಪ್ರಚೋದನೆ ನೀಡುವ ಮೂಲಕ ತಾವು ಧರಿಸಿಕೊಂಡಿದ್ದ ‘ಶಾಂತಿದೂತ’ ಎಂಬ ಮುಖ ವಾಡವನ್ನು ತಾವೇ ಕಳಚಿಟ್ಟಿದ್ದಾರೆ.
ಅಗತ್ಯ ವಸ್ತುಗಳ ಬೆಲೆಯಲ್ಲಿ ತೀವ್ರ ಏರಿಕೆ, ಅರಾಜಕತೆ ಮುಂತಾದ ಕಾರಣಗಳಿಗೆ ಇರಾನ್‌ನಲ್ಲಿ ಜನರಿಂದ ಪ್ರತಿಭಟನಾ ಸ್ವರೂಪದ ಸಂಘರ್ಷ ನಡೆಯುತ್ತಿರುವುದು ಗೊತ್ತಿರುವ ಸಂಗತಿಯೇ.
ಇದನ್ನೂ ಓದಿ: Vishwavani Editorial: ಇರಾನ್ ಬಿಕ್ಕಟ್ಟಿಂದ ಅಮೆರಿಕಕ್ಕೇನು ಲಾಭ?
ಸಾಧ್ಯವಾದರೆ, ಇದನ್ನು ತಹಬಂದಿಗೆ ತರುವ ನಿಟ್ಟಿನಲ್ಲಿ ಪ್ರಸ್ತಾವಗಳನ್ನು ಮುಂದು ಮಾಡಬೇಕಿದ್ದ ‘ಶಾಂತಿದೂತ’ ಟ್ರಂಪ್ ಅವರು, ‘ನಿಮ್ಮ ಬೆಂಬಲಕ್ಕೆ ನಾವಿದ್ದೇವೆ, ಪ್ರತಿಭಟನೆಯನ್ನು ಮುಂದು ವರಿಸಿ’ ಎಂಬರ್ಥದಲ್ಲಿ ಅಭಯ ನೀಡಿರುವುದಕ್ಕೆ ಯಾವ ತಾರ್ಕಿಕ ನೆಲೆಗಟ್ಟು ಇದೆಯೋ? ಇದಕ್ಕೆ ಅವರೇ ಉತ್ತರಿಸಬೇಕು. ಇಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಉದ್ದೇಶಗಳು ಸರಿಯಿವೆಯೋ ಅಥವಾ ತಪ್ಪಾಗಿವೆಯೋ? ಎಂಬುದು ಪ್ರಶ್ನೆಯಲ್ಲ; ಈ ಸಂಘರ್ಷದ ಬೆಂಕಿಯಲ್ಲಿ ತಮ್ಮ ಮೈಕಾಯಿಸಿ ಕೊಳ್ಳಲು ಹೊರಟಿರುವ ಡೊನಾಲ್ಡ್ ಟ್ರಂಪ್ ಅವರ ಧೋರಣೆ ಮಾತ್ರ ಸಹ್ಯವಾಗುತ್ತಿಲ್ಲ, ಅಷ್ಟೇ.
ವಿಶ್ವದ ದೊಡ್ಡಣ್ಣ ಎನಿಸಿಕೊಂಡ ಅಮೆರಿಕವು ಜಾಗತಿಕ ಭೂರಾಜಕೀಯದಲ್ಲಿ ಯಾವ ರೀತಿಯಲ್ಲಿ ಬೇಕಾದರೂ ಹಸ್ತಕೇಪ ಮಾಡಬಹುದು ಮತ್ತು ಮಾಡಬಲ್ಲದು ಎಂಬ ಟ್ರಂಪ್ ಅವರ ಧಾರ್ಷ್ಟ್ಯವೇ ಇದಕ್ಕೆ ಕಾರಣವಾಗಿರಬಹುದೇ? ಈ ಪ್ರಶ್ನೆಗೆ ಉತ್ತರಿಸಲು ಅವರಿಗೆ ಸಮಯವಾದರೂ ಎಲ್ಲಿದೆ?!