ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರೈತರ ಬೇಡಿಕೆಗಳು ಅತಿರೇಕವಲ್ಲ

ವಾಸ್ತವವಾಗಿ ರೈತರ ಬೇಡಿಕೆಗಳು ಈಡೇರಿಸಲು ಸಾಧ್ಯವೇ ಇಲ್ಲ ಎಂದೇನಿಲ್ಲ. ರಾಜ್ಯ ಮತ್ತು ಕೇಂದ್ರ ಸರಕಾರಗಳು ಮನಸ್ಸು ಮಾಡಿದರೆ, ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಬಹುದು. ವಾಸ್ತವ ವಾಗಿ ಕಬ್ಬು ಬೆಳೆಗಾರರ ಬದುಕು ಇಂದು ಹಲವು ಸವಾಲುಗಳ ಸುಳಿಯಲ್ಲಿ ಸಿಲುಕಿದೆ. ಕಬ್ಬು ಬೆಳೆಯಲು ಬೀಜ, ಗೊಬ್ಬರ, ಔಷಧ, ನೀರಾವರಿ, ಕಾರ್ಮಿಕರ ಕೂಲಿ ಸೇರಿದಂತೆ ಸಾಕಷ್ಟು ಹಣ ವ್ಯಯಿಸ ಬೇಕಾಗಿದೆ.

ಕಬ್ಬಿಗೆ 5500 ರು. ಬೆಂಬಲ ಬೆಲೆ ನಿಗದಿ ಮತ್ತು ಎಂಎಸ್‌ಪಿ ಗ್ಯಾರಂಟಿ ಸೇರಿ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ರೈತರು ಶನಿವಾರ ಬಂದ್ ಗೆ ಕರೆ ನೀಡಿದ್ದಕ್ಕೆ ಉತ್ತರ ಕರ್ನಾಟಕದಾದ್ಯಂತ ಭಾರೀ ಬೆಂಬಲ ವ್ಯಕ್ತವಾಗಿದೆ. ರೈತರು ರಸ್ತೆ ತಡೆ, ಸ್ವಯಂಪ್ರೇರಿತ ಬಂದ್ ಮಾಡಿದ್ದಾರೆ. ಇದರಿಂದಾಗಿ ಸಾರ್ವಜನಿಕ ಜೀವನ ಅಸ್ತವ್ಯಸ್ತವಾಗಿದೆ. ಈ ಪ್ರತಿಭಟನೆಯ ಸ್ವರೂಪ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

ವಾಸ್ತವವಾಗಿ ರೈತರ ಬೇಡಿಕೆಗಳು ಈಡೇರಿಸಲು ಸಾಧ್ಯವೇ ಇಲ್ಲ ಎಂದೇನಿಲ್ಲ. ರಾಜ್ಯ ಮತ್ತು ಕೇಂದ್ರ ಸರಕಾರಗಳು ಮನಸ್ಸು ಮಾಡಿದರೆ, ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಬಹುದು. ವಾಸ್ತವವಾಗಿ ಕಬ್ಬು ಬೆಳೆಗಾರರ ಬದುಕು ಇಂದು ಹಲವು ಸವಾಲುಗಳ ಸುಳಿಯಲ್ಲಿ ಸಿಲುಕಿದೆ. ಕಬ್ಬು ಬೆಳೆಯಲು ಬೀಜ, ಗೊಬ್ಬರ, ಔಷಧ, ನೀರಾವರಿ, ಕಾರ್ಮಿಕರ ಕೂಲಿ ಸೇರಿದಂತೆ ಸಾಕಷ್ಟು ಹಣ ವ್ಯಯಿಸಬೇಕಾಗಿದೆ.

ಇದನ್ನೂ ಓದಿ: Vishwavani Editorial: ಬೆಚ್ಚಿ ಬೀಳಿಸಿದ ಹಾಲು ದರ

ಕೃಷಿ ವೆಚ್ಚಗಳ ನಿರಂತರ ಏರಿಕೆ, ಕಟಾವು ಮತ್ತು ಸಾಗಣೆ ವೆಚ್ಚದ ಹೊರೆ, ಕಾರ್ಖಾನೆಗಳಿಂದ ಕಬ್ಬಿನ ಬಾಕಿ ಹಣ ಪಾವತಿಯಲ್ಲಿ ವಿಳಂಬ ಹಾಗೂ ಸೂಕ್ತ ಬೆಲೆ ದೊರೆಯದಿರುವುದು ರೈತರನ್ನು ಸಂಕಷ್ಟಕ್ಕೆ ತಳ್ಳಿದೆ. ಅನ್ನದಾತರ ಬೆವರಿನ ಫಲಕ್ಕೆ ನ್ಯಾಯಯುತ ಬೆಲೆ ಸಿಗದಿದ್ದರೆ ಕೃಷಿ ವೃತ್ತಿಯ ಮೇಲೆ ಅವರಿಗಿರುವ ವಿಶ್ವಾಸ ಕುಸಿಯುವುದು ಸಹಜ. ಆದ್ದರಿಂದಲೇ ಕಬ್ಬು ಬೆಳೆಗಾರರು ನ್ಯಾಯ ಯುತ ಮತ್ತು ವೈಜ್ಞಾನಿಕ ಬೆಲೆ ನಿಗದಿ, ಕಟಾವು ಹಾಗೂ ಸಾಗಣೆ ವೆಚ್ಚಕ್ಕೆ ಸೂಕ್ತ ಪರಿಹಾರ, ಬಾಕಿ ಹಣದ ತಕ್ಷಣದ ಪಾವತಿ ಮತ್ತು ತೂಕದಲ್ಲಿ ನಡೆಯುವ ಅಕ್ರಮಗಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸುತ್ತಿದ್ದಾರೆ.

ಈ ಬೇಡಿಕೆಗಳು ಯಾವುದೇ ರೀತಿಯ ಅತಿರೇಕದ ಬೇಡಿಕೆಗಳಲ್ಲ. ಬದಲಾಗಿ ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯಬೇಕೆಂಬ ರೈತರ ನ್ಯಾಯಯುತ ಹಕ್ಕುಗಳಾಗಿವೆ. ರಾಜ್ಯ ಮತ್ತು ಕೇಂದ್ರ ಸರಕಾರವು ರೈತರ ಸಮಸ್ಯೆಗಳನ್ನು ಕೇವಲ ಪ್ರತಿಭಟನೆಗಳ ಸಂದರ್ಭದಲ್ಲಿ ಮಾತ್ರ ಆಲಿಸುವ ಪ್ರವೃತ್ತಿಯನ್ನು ಬಿಡಬೇಕು. ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಗಳೊಂದಿಗೆ ಸಭೆ ನಡೆಸಿ, ರೈತರ ಬೇಡಿಕೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು.