ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishwavani Editorial: ಎಂಆರ್‌ಪಿಎಲ್ ಸ್ಫೋಟದ ಗಂಭೀರತೆ

ಮಂಗಳೂರಿನ ಬಳಿ ಇರುವ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿ. ಘಟಕದಲ್ಲಿ ಬುಧವಾರ ಭಾರಿ ಸ್ಫೋಟ ಸಂಭವಿಸಿದ್ದು, ಒಬ್ಬ ಕಾರ್ಮಿಕ ಮೃತಪಟ್ಟು 9 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಸ್ಫೋಟದ ಸದ್ದು 20 ಕಿಲೋಮೀಟರ್ ದೂರಕ್ಕೆ ಕೇಳಿಸಿದ್ದು, ದಟ್ಟ ಹೊಗೆ ಬಾನೆತ್ತರಕ್ಕೆ ವ್ಯಾಪಿಸಿದೆ.

ಮಂಗಳೂರಿನ ಬಳಿ ಇರುವ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿ. ಘಟಕದಲ್ಲಿ ಬುಧವಾರ ಭಾರಿ ಸ್ಫೋಟ ಸಂಭವಿಸಿದ್ದು, ಒಬ್ಬ ಕಾರ್ಮಿಕ ಮೃತಪಟ್ಟು 9 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಸ್ಫೋಟದ ಸದ್ದು 20 ಕಿಲೋಮೀಟರ್ ದೂರಕ್ಕೆ ಕೇಳಿಸಿದ್ದು, ದಟ್ಟ ಹೊಗೆ ಬಾನೆತ್ತರಕ್ಕೆ ವ್ಯಾಪಿಸಿದೆ.

ಕೋಕರ್ ಹೈಡ್ರೋಟ್ರೇಟರ್ ಘಟಕದಲ್ಲಿ ಹೆಚ್ಚಿನ ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೋಲ್ಡ್ ಸೆಪರೇಟರ್ ಒಡೆದ ಪರಿಣಾಮ ಅಗ್ನಿ ಅವಘಡ ಸಂಭವಿಸಿದೆ ಎಂದು ಎಂಆರ್‌ಪಿಎಲ್ ಆಡಳಿತ ತಿಳಿಸಿದೆ.

ಆದರೆ ಕಂಪನಿಯು ಸ್ಫೋಟದ ಗಂಭೀರತೆಯನ್ನು ಲಘುಗೊಳಿಸಲು ಯತ್ನಿಸುತ್ತಿದೆ. ಇದು ಇನ್ನಷ್ಟು ಗಂಭೀರವಾದ ಸಂಗತಿ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಹಿಂದೆ ಕೂಡ ಎಂಆರ್‌ಪಿಎಲ್‌ಗೆ ಸಂಬಂಧಿಸಿದಂತೆ ಅವಘಡಗಳು ಸಂಭವಿಸಿವೆ ಹಾಗೂ ಪ್ರಾಣಹಾನಿ ಆಗಿವೆ. ಈ ಸಂಸ್ಥೆಯು ಕೇಂದ್ರ ದ ಪೆಟ್ರೋಲಿಯಂ ಇಲಾಖೆಯಡಿ ಕಾರ್ಯಾಚರಿಸುತ್ತಿದ್ದು, ಒಎನ್ಜಿಸಿಯ ಅಂಗಸಂಸ್ಥೆಯಾಗಿದೆ.

ಇದನ್ನೂ ಓದಿ: ಮಂಗಳೂರು MRPLನಲ್ಲಿ ಭಾರಿ ಸ್ಫೋಟ; ಓರ್ವ ಸಾವು, 9 ಮಂದಿಗೆ ಗಾಯ

2021ರ ಜೂನ್‌ನಲ್ಲೂ ಇಲ್ಲಿ ಇಂಥದೇ ಇನ್ನೊಂದು ಸ್ಫೋಟ ಸಂಭವಿಸಿ ಒಬ್ಬ ಕಾರ್ಮಿಕನನ್ನು ಬಲಿ ತೆಗೆದುಕೊಂಡಿತ್ತು. ಆ ನಂತರ ಈ ಘಟಕದಲ್ಲಿ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದಾರೋ ಇಲ್ಲವೋ ತಿಳಿಯದು. ತೆಗೆದುಕೊಂಡಿದ್ದರೆ ಅಂಥದೇ ದುರಂತ ಮರುಕಳಿಸಲು ಕಾರಣವಿಲ್ಲ. 2014 ಹಾಗೂ 2018ರಲ್ಲಿ ಇದೇ ಮೂರನೇ ಪ್ರಾಜೆಕ್ಟ್ ಘಟಕದಿಂದ ತೈಲ ಸೋರಿಕೆಯಾಗಿ ಸುತ್ತಮುತ್ತಲಿನ ಜೋಕಟ್ಟೆ, ಕುತ್ತೆತ್ತೂರು, ಸೂರಿಂಜೆ ಮೊದಲಾದ ಗ್ರಾಮಗಳ ಫಲವತ್ತಾದ ಹೊಲ ಗದ್ದೆಗಳಲ್ಲಿ ದಪ್ಪನೆಯ ತೈಲದ ಪದರ ಕುಳಿತುಕೊಂಡು, ಬಳಸಲು ಸಾಧ್ಯವಾಗದಂತೆ ಕಲುಷಿತಗೊಂಡಿದ್ದವು.

ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ಸೇರಿದಂತೆ ಸ್ಥಳೀಯ ಸಮುದಾಯದ ನಾಯಕರು ಹಾಗೂ ಸಂಘಟನೆಗಳು, ಭೂಗರ್ಭದಲ್ಲಿರುವ ಎಂಆರ್‌ಪಿಎಲ್ ಪೈಪ್‌ಲೈನ್‌ಗಳಲ್ಲಿ ಪತ್ತೆಯಾಗದ ಸೋರಿಕೆ ಗಳಿಂದ ಸುತ್ತಮುತ್ತಲಿನ ಅಂತರ್ಜಲ ಕಲುಷಿತವಾಗಬಹುದು ಮತ್ತು ಸಮೀಪದ ಫಲ್ಗುಣಿ ನದಿಗೂ ತೈಲ ಸೋರಿಕೆಯಾಗಬಹುದು ಎಂದು ಹಲವು ಬಾರಿ ಆರೋಪಿಸಿದ್ದಾರೆ.

ಭಾರಿ ಮಳೆ ಹಾಗೂ ಯಾಂತ್ರಿಕ ದೋಷ ಉಂಟಾದಾಗ ಒಳಚರಂಡಿ ವ್ಯವಸ್ಥೆಯಲ್ಲಿ ಸೋರಿಕೆ ಸಂಭವಿಸಿರುವ ವರದಿಗಳಿವೆ. ಕಪ್ಪು ಬಣ್ಣದ, ಎಣ್ಣೆಯುಕ್ತ ನೀರು ಆಕಸ್ಮಿಕವಾಗಿ ಸ್ಥಳೀಯ ಮಳೆನೀರು ಚರಂಡಿಗಳಿಗೆ ಹರಿದಿರುವ ಘಟನೆಗಳು ವರದಿಯಾಗಿವೆ. ಹೀಗಾಗಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಂಸ್ಥೆಯಿಂದಾಗುತ್ತಿರುವ ಪರಿಸರ ಮಾಲಿನ್ಯದ ಬಗ್ಗೆ ಆತಂಕ ವ್ಯಕ್ತವಾಗುತ್ತಲೇ ಇದೆ. ಆದರೆ ಸಂಬಂಧಪಟ್ಟವರು ಇದನ್ನೆಲ್ಲ ಸರಿಪಡಿಸಲು ಏನನ್ನೂ ಮಾಡಿದಂತಿಲ್ಲ. ಈ ದುರಂತ ದಿಂದಲಾದರೂ ಪಾಠ ಕಲಿತು ಸುರಕ್ಷತಾ ಕ್ರಮಗಳನ್ನು ಅಳವಡಿಸಲಿ.