ಡಾ.ಕೆ.ಕಸ್ತೂರಿ ರಂಗನ್ ವರದಿ ಜಾರಿಯ ಕುರಿತು ಕರೆಯಲಾಗಿರುವ ವಿಧಾನ ಮಂಡಲದ ಮೂರು ದಿನಗಳ ವಿಶೇಷ ಅಧಿವೇಶನ ಆರಂಭವಾಗಿದೆ. ಕೇಂದ್ರ ಪರಿಸರ ಸಚಿವಾಲಯ ವರದಿ ಆಧರಿಸಿ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶದ ಏಳನೇ ಕರಡು ಅಧಿಸೂಚನೆ ಹೊರಡಿಸುತ್ತಿದ್ದಂತೆ, ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಆತಂಕ ವ್ಯಾಪಿಸಿದೆ.
ಕಳೆದ ಆರು ಬಾರಿಯೂ ಕರ್ನಾಟಕ ಈ ವರದಿಯ ಜಾರಿಯನ್ನು ಒಪ್ಪಿರಲಿಲ್ಲ. ಈ ಬಾರಿಯೂ ಪಕ್ಷಭೇದವಿಲ್ಲದೆ ಇದನ್ನು ಎಲ್ಲರೂ ವಿರೋಧಿಸುತ್ತಾರೆ ಎಂಬುದು ಸ್ಪಷ್ಟ. ಆದರೆ ವರದಿಯ ಜಾರಿ ಯಾಕೆ ಬೇಡ, ಎಷ್ಟು ಜಾರಿ ಮಾಡಿದರೆ ಒಳಿತು ಎಂಬ ಬಗ್ಗೆ ಸ್ಪಷ್ಟ ನಿಲುವು, ನಿಖರ ಅಂಕಿಅಂಶ ಹಾಗೂ ಪ್ರಾದೇಶಿಕ ಚಿತ್ರಣ ಬಹುತೇಕರ ಬಳಿ ಇಲ್ಲ.
ಸುಪ್ರೀಂ ಕೋರ್ಟ್ ಮತ್ತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಪಶ್ಚಿಮ ಘಟ್ಟಗಳ ರಕ್ಷಣಾ ಅಧಿಸೂಚನೆಯನ್ನು ಅಂತಿಮಗೊಳಿಸಲು ಕೇಂದ್ರ ಸರಕಾರಕ್ಕೆ ಕಟ್ಟು ನಿಟ್ಟಿನ ಗಡುವು ನೀಡುತ್ತಿವೆ. ಕೇಂದ್ರ ಸರಕಾರ ಕರಡು ಅಧಿಸೂಚನೆ ಹೊರಡಿಸಿದ ನಂತರ 60 ದಿನಗಳ ಕಾಲಾವಕಾಶ ನೀಡುತ್ತದೆ. ಈ ಅವಧಿಯಲ್ಲಿ ರಾಜ್ಯಗಳು ವೈಜ್ಞಾನಿಕ ದತ್ತಾಂಶಗಳೊಂದಿಗೆ ಆಕ್ಷೇಪಣೆ ಸಲ್ಲಿಸದಿದ್ದರೆ, ಏಕಪಕ್ಷೀಯವಾಗಿ ಅಧಿಸೂಚನೆಯನ್ನು ಅಂತಿಮಗೊಳಿಸುವ ಅಧಿಕಾರ ಕೇಂದ್ರ ಸರಕಾರಕ್ಕಿದೆ.
ಸೆ.25ರೊಳಗೆ ರಾಜ್ಯ ಸರಕಾರ ತನ್ನ ಆಕ್ಷೇಪಣೆ ದಾಖಲಿಸಬೇಕಿದೆ. ಆದರೆ 10 ಜಿಲ್ಲೆಗಳ 1449 ಗ್ರಾಮಗಳ ವಾಸ್ತವ ಗಡಿ ಗುರುತಿಸುವಿಕೆ ಮೂಲಕ ವೈಜ್ಞಾನಿಕ ದತ್ತಾಂಶಗಳನ್ನು ಸಲ್ಲಿಸುವುದು ಮುಖ್ಯವಾಗಿದೆ. ಕಸ್ತೂರಿ ರಂಗನ್ ಸಮಿತಿಯ ವರದಿ ಪ್ರಕಾರ ರಾಜ್ಯದ 1449ಕ್ಕೂ ಹೆಚ್ಚು ಗ್ರಾಮಗಳು ಹಾಗೂ 20,668 ಚದರ ಕಿಲೋಮೀಟರ್ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಒಳಪಟ್ಟಿದೆ. ಆದರೆ ವರದಿ ಯಲ್ಲಿ ಎಲ್ಲಿಯೂ ಜನವಸತಿಗಳನ್ನು ಸ್ಥಳಾಂತರಿಸುವ, ಜನರನ್ನು ಒಕ್ಕಲೆಬ್ಬಿಸುವ ಪ್ರಸ್ತಾಪವಿಲ್ಲ.
ಸಾಂಪ್ರದಾಯಿಕ ಕೃಷಿ, ತೋಟಗಾರಿಕೆ ಅಥವಾ ಪ್ಲಾಂಟೇಶನ್ ಚಟುವಟಿಕೆಗೆ ಯಾವುದೇ ನಿರ್ಬಂಧ ವಿಲ್ಲ. ಬೆಳೆ ಮಾರಾಟ, ಜಮೀನು ಪರಭಾರೆಗೆ ಸ್ವಾತಂತ್ರ್ಯವಿದೆ. ರೈತರು ಬಳಸುವ ಕೃಷಿ ಔಷಧ, ಗೊಬ್ಬರಗಳ ಬಳಕೆಯನ್ನು ವರದಿ ನಿರ್ಬಂಧಿಸುವುದಿಲ್ಲ. 20000 ಚದರ ಮೀಟರ್‌ಗಿಂತ ಹೆಚ್ಚಿನ ಕಟ್ಟಡ ನಿರ್ಮಾಣ, ಮಾಲಿನ್ಯಕಾರಕ ಕೈಗಾರಿಕೆಗಳು, ಬೃಹತ್ ಗಣಿಗಾರಿಕೆ, ಮರಳು ದಂಧೆ ಮತ್ತು ದೈತ್ಯ ಟೌನ್‌ಶಿಪ್‌ಗಳಿಗೆ ನಿರ್ಬಂಧವಿದೆ. ಇದನ್ನೆಲ್ಲ ಜನತೆಗೆ ತಲುಪಿಸಬೇಕಿದೆ.
ನೆರೆಯ ಕೇರಳ ರಾಜ್ಯ ಕಂದಾಯ ಮತ್ತು ಅರಣ್ಯ ಇಲಾಖೆಗಳ ಮೂಲಕ ಜಂಟಿ ಸಮೀಕ್ಷೆ ನಡೆಸಿ, ಜನವಸತಿ ಪ್ರದೇಶಗಳು ಮತ್ತು ಕೃಷಿ ಭೂಮಿಯನ್ನು ನಕ್ಷೆಯಿಂದ ಪ್ರತ್ಯೇಕಿಸಿ, ಭೌತಿಕ ಗಡಿಗಳನ್ನು ಸ್ಪಷ್ಟಪಡಿಸಿ ಕೇಂದ್ರಕ್ಕೆ ಹೊಸ ವೈeನಿಕ ಪ್ರಸ್ತಾವನೆ ಸಲ್ಲಿಸಿ, ಬಫರ್ ವಲಯವನ್ನು ಶೂನ್ಯಕ್ಕೆ ಇಳಿಸಿಕೊಂಡಿತು. ಕರ್ನಾಟಕದಲ್ಲೂ ಸರಕಾರ ಹೀಗೆ ಮಾಡಬೇಕು.