ನೈಸ್ ರಸ್ತೆಯ ಕುರಿತಾದ ವಿವಾದ ಜೋರಾಗಿದೆ. ‘ನೈಸ್ ರಸ್ತೆ ವಿಚಾರದಲ್ಲಿ ಯಾವುದೂ ನೈಸ್ ಆಗಿಲ್ಲ’ ಎಂದು ಜುಲೈ 29ರಂದು ನೀಡಿದ ತೀರ್ಪಿನಲ್ಲಿ ಕರ್ನಾಟಕ ಹೈಕೋರ್ಟ್ ಹೇಳಿತ್ತು. ನೈಸ್ ಯೋಜನೆಯಲ್ಲಿ ರೈತರ ಭೂಮಿ ಮತ್ತು ಜೀವನೋಪಾಯ ಕಸಿದುಕೊಳ್ಳಲಾಗಿದೆಯೇ ಹೊರತು ಒಳ್ಳೆಯದೇನೂ ಇಲ್ಲ ಎಂದು ಕಠಿಣವಾಗಿ ಹೇಳಿದ್ದ ಪೀಠ, ಈ ಯೋಜನೆಯು ರಾಜ್ಯದ ದೊಡ್ಡ ಹಗರಣಗಳಲ್ಲಿ ಒಂದಾಗಿದ್ದು, ಈ ಬಗ್ಗೆ ತನಿಖೆಯಾಗಬೇಕು ಎಂದು ಅಭಿಪ್ರಾಯ ನೀಡಿತ್ತು.
ಆದರೆ ಈ ತೀರ್ಪು ನಮ್ಮ ಮುಂದಿಟ್ಟಿರುವ ಅಭಿಪ್ರಾಯವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಲಾಗ ದಷ್ಟು ನಮ್ಮ ರಾಜಕಾರಣಿಗಳು, ಅಧಿಕಾರಿಗಳು ಮೊಂಡರೂ, ಭಂಡರೂ ಆಗಿದ್ದಾರೆ. ಯಾಕೆಂದರೆ ನೈಸ್ ಉದ್ಯಮಪತಿ, ರಾಜಕಾರಣಿಗಳು, ಅಧಿಕಾರಿಗಳು ಎಲ್ಲರೂ ಸೇರಿಯೇ ಆಗಿರುವ ಬಹುಕೋಟಿ ಮಹಾ ಹಗರಣ.
ಇದನ್ನೂ ಓದಿ: Vishwavani Editorial: ಅಡಿಕೆಗೆ ಹಾನಿಯಾಗದು
ಟೌನ್‌ಶಿಪ್ ಗಳಿಗೆಂದು ಕಾಯ್ದಿರಿಸಿದ್ದ 2,469.86 ಎಕರೆ ಭೂಮಿಯನ್ನು ಟೋಲ್ ರಸ್ತೆ ನಿರ್ಮಾಣಕ್ಕೆ ಮರುಹಂಚಿಕೆ ಮಾಡಿರುವುದೂ ಇನ್ನೊಂದು ಹಗರಣ. 1996ರ ಆಗಿನ ಮುಖ್ಯಮಂತ್ರಿ ದೇವೇಗೌಡರು ಮಾಡಿಕೊಂಡ ಒಪ್ಪಂದದಿಂದ ನೈಸ್ ಹಗರಣ ಆರಂಭವಾಗಿದೆ.
ಮೂವತ್ತು ವರ್ಷಗಳಿಂದ ಬೆಂಗಳೂರಿನಂಥ ಮೆಗಾ ಸಿಟಿಯ ಬಲು ಬೆಲೆಬಾಳುವ ಹೆಕ್ಟೇರ್‌ಗಟ್ಟಲೆ ಭೂಮಿ ಅಶೋಕ್ ಖೇಣಿ, ಬಾಬಾ ಕಲ್ಯಾಣಿ ಮುಂತಾದ ಉದ್ಯಮಪತಿಗಳ ತೆಕ್ಕೆಯಲ್ಲಿದೆ. ಭೂಮಿ ನೀಡಿದ ರೈತರಿಗೆ ಇನ್ನೂ ಪುನರ್ವಸತಿ ಕಲ್ಪಿಸಲು ಸಾಧ್ಯವಾಗಿಲ್ಲ. ಇದೀಗ ದೇವೇಗೌಡರು ಕೂಡ, ನೈಸ್ ರಸ್ತೆಗೆ ಭೂಮಿ ನೀಡಿದ್ದು ತನ್ನ ಜೀವಮಾನದ ಮಹಾ ತಪ್ಪು ಎಂದು ಒಪ್ಪಿಕೊಂಡಿದ್ದಾರೆ.
ಪ್ರತಿ ಆರು ತಿಂಗಳಿಗೊಮ್ಮೆ ಟೋಲ್ ದರ ಹೆಚ್ಚಿಸುವ ನೈಸ್, ತಾನು ವೆಚ್ಚ ಮಾಡಿರುವುದರ ಹತ್ತು ಪಟ್ಟು ಹಣವನ್ನು ಈಗಾಗಲೇ ಸಂಗ್ರಹಿಸಿದೆ. ಈ ರಸ್ತೆಯು ಬೆಂಗಳೂರನ್ನು ಉಳ್ಳವರು ಹಾಗೂ ಬಡವರು ಎಂದು ಎರಡಾಗಿ ವಿಭಜಿಸಿದೆ. ಮಾತ್ರವಲ್ಲ ಹಲವಾರು ಪ್ರದೇಶಗಳ ಸಂಪರ್ಕವನ್ನೂ ಕತ್ತರಿಸಿದೆ. ನೈಸ್‌ನಿಂದ ಲಾಭಕ್ಕಿಂತ, ಅದರಲ್ಲಿ ಆಗಿರುವ ಲೂಟಿಯೇ ಅಧಿಕ. ಈಗಲಾದರೂ ನೈಸ್ ರಸ್ತೆ ಪಡೆದು ಪಾಳುಬಿಟ್ಟಿರುವ ಜಾಗವನ್ನು ವಶಪಡಿಸಿಕೊಳ್ಳುವ, ಸಂತ್ರಸ್ತರಿಗೆ ನೈಜ ಪರಿಹಾರ ಕಲ್ಪಿಸುವ, ಅಕ್ರಮಗಳ ತನಿಖೆ ನಡೆಸುವ ವ್ಯವಸ್ಥೆಯನ್ನು ಸರಕಾರ ಮಾಡಬೇಕಿದೆ.