ಕಣ್ಣುಗಳಲ್ಲೇ ಭಾವನೆಗಳನ್ನು ದಾಟಿಸಬಲ್ಲ ಚತುರ ಕಲಾವಿದ ಅನಂತನಾಗ್ ಅವರು ದೇಶದ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ. ಕನ್ನಡಿಗರಾಗಿ ನಾವೆಲ್ಲ ಸಂಭ್ರಮಿಸಬೇಕಾದ ಸಂಗತಿ ಇದು. ಕನ್ನಡಿಗ ಡಾ.ರಾಜ್‌ಕುಮಾರ್ ಅವರಿಗೆ ಮೊದಲ ಫಾಲ್ಕೆ ಬಂದಾಗಲೂ ನಾಡು ಹೀಗೇ ಸಂಭ್ರಮಿಸಿತ್ತು.
ಅನಂತ್ ಫಾಲ್ಕೆ ಪಡೆದ ಎರಡನೇ ಕನ್ನಡದ ನಟ, ಮೂರನೇ ಕನ್ನಡಿಗ. ಅವರ ಅಭಿನಯ ಪ್ರತಿಭೆ ವೈವಿಧ್ಯಮಯವಾದುದು. ಆರಂಭದ ದಿನಗಳಲ್ಲಿ ಹಿಂದಿ ರಂಗಭೂಮಿಯಲ್ಲಿ ಪಳಗಿದ ಅವರು ಆ ಪರಿಣತಿಯನ್ನು ಹಿಂದಿ ಚಲನಚಿತ್ರಗಳಿಗೂ ತಂದರು. ಶಾಮ್ ಬೆನಗಲ್ ಜೊತೆಗೆ ಅವರು ನೀಡಿದ ಅಂಕುರ್, ಮಂಥನ್, ಭೂಮಿಕಾ, ನಿಶಾಂತ್ ಮೊದಲಾದ ಸಿನಿಮಾಗಳು ಹೊಸ ಅಲೆಯ ಸಿನಿಮಾಗಳಾಗಿ ಹವಾ ಎಬ್ಬಿಸಿದವು.
ಅನಂತ್ ಅವರನ್ನು ಸುಂದರಾಂಗ ಎನ್ನುತ್ತಾರೆ. ಆದರೆ ಅವರ ಪಾತ್ರಗಳು ಹಲವು ಬಗೆಯವು. ಹಂಸಗೀತೆಯ ಭಾವುಕ ಪಾತ್ರ, ಗಣೇಶನ ಮದುವೆಯ ಹಾಸ್ಯಮಯ ಪಾತ್ರ, ಬಯಲುದಾರಿಯ ರೊಮ್ಯಾಂಟಿಕ್ ಪಾತ್ರ, ಬೆಳದಿಂಗಳ ಬಾಲೆಯ ವಿಷಾದ ಒಡಮೂಡಿದ ಪಾತ್ರ, ನಾ ನಿನ್ನ ಬಿಡಲಾರೆಯ ಹಾರರ್ ಪಾತ್ರ, ಗೋಧಿ ಬಣ್ಣ ಸಾಧಾರಣ ಮೈಕಟ್ಟಿನ ಅಸಹಾಯಕ ವೃದ್ಧನ ಪಾತ್ರ- ಹೀಗೆ ಎಲ್ಲ ಬಗೆಯದ್ದನ್ನೂ ಅವರು ಸಲೀಸಾಗಿ ಮಾಡಿದ್ದಾರೆ.
ಫೈಟಿಂಗ್ ಹಾಗೂ ಡ್ಯಾನ್ಸ್ ಬಂದರೆ ಮಾತ್ರ ಹೀರೋ ಪಾತ್ರ ಮಾಡಬಹುದು ಎಂಬ ಪರಿಕಲ್ಪನೆ ಯನ್ನು ಅವರು ಒಡೆದು ಹಾಕಿದರು. ಹಾಗೆಯೇ ಅವರು ಕನ್ನಡ ಚಿತ್ರರಂಗದ ಬುದ್ಧಿವಂತ ನಟ ಕೂಡ. ಅವರು ಓದು ಅಗಾಧ. ಮುಂದೆ ಅವರು ರಾಜಕಾರಣಕ್ಕೂ ಬಂದು, ಮಲ್ಲೇಶ್ವರದ ಶಾಸಕ ರಾಗಿ, ಜೆಎಚ್ ಪಟೇಲ್ ಸರಕಾರದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಹಾಯಕ ಸಚಿವರಾಗಿ, ಪರಿಷತ್ ಸದಸ್ಯರಾಗಿಯೂ ತಮ್ಮ ಪ್ರಬುದ್ಧತೆಯ ಕೊಡುಗೆ ನೀಡಿದರು.
ಅವರಿಗೆ ಫಾಲ್ಕೆ ಬಂದ ಹೊತ್ತಿನಲ್ಲಿ ಕನ್ನಡಿಗರು ಸಂಭ್ರಮಿಸಬೇಕೇ ಹೊರತು, ಪಂಥೀಯತೆಯ ಸೋಗಿನಲ್ಲಿ ವಿರೋಧಿಸುವುದು ಹಾಗೂ ಕೊಂಕು ನುಡಿಯುವುದು ಸಲ್ಲದು. ಅವರು ಮೋದಿ ಯವರನ್ನು ಹೊಗಳಿದ್ದಾರೆ ಎಂಬ ಕಾರಣಕ್ಕೆ ಕೆಲವರು ಅವರನ್ನು ದ್ವೇಷಿಸಿ ಕೊಂಕು ನುಡಿದಿದ್ದಾರೆ. ಅವರ ಅಭಿನಯ ಚತುರತೆ, ಕೊಡುಗೆಗೆ ಎಡಪಂಥ- ಬಲಪಂಥ ಎಂಬ ಹಂಗಿಲ್ಲ. ಅದು ಎಲ್ಲ ಪಂಥೀಯತೆಯನ್ನು ಮೀರಿದ್ದು. ಅನಂತನಾಗ್, ಫಾಲ್ಕೆಗೆ ಅರ್ಹರು.