ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishwavani Editorial: ಆಹಾರ ಸುರಕ್ಷತೆಯ ಪ್ರಶ್ನೆ

ನಮ್ಮ ದೇಶ ಪಾಮ್ ಆಯಿಲ್ ದೊಡ್ಡ ಆಮದುದಾರ. ಆದರೆ ಹಲವು ದೇಶಗಳು ಪಾಮ್ ಆಯಿಲ್ ಅನ್ನು ನಿಷೇಧಿಸಿವೆ. ಆಹಾರದ ರುಚಿ ಹೆಚ್ಚಿಸುವುದಕ್ಕೆ ಅಜಿನೊಮೊಟೊ ಸಾಕಷ್ಟು ಬಳಸಲಾಗು ತ್ತಿದೆ. ಇದು ಕೂಡ ಹಾನಿಕರ. ಬಳಸುವ ಕಚ್ಚಾವಸ್ತುಗಳನ್ನು ಗ್ರಾಹಕರ ಗಮನಕ್ಕೆ ತರುವ ವ್ಯವಸ್ಥೆ ಇಲ್ಲ. ಆಹಾರ ಉತ್ಪನ್ನಗಳ ಗ್ರೇಡಿಂಗ್ ನಮ್ಮಲ್ಲಿ ಸಮರ್ಪಕವಾಗಿಲ್ಲ

ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (ಎಫ್‌ʼಎಸ್‌ಎಸ್‌ಎಐ) ಎವರೆಸ್ಟ್ ಮತ್ತು ಲಾಲ್‌ಜಿ ಗೋಧು ಕಂಪನಿಗಳ ಇಂಗು ಪುಡಿ ಮಾರಾಟವನ್ನು ನಿಷೇಧಿಸಿದೆ. ಪ್ರಯೋಗಾಲಯ ಪರೀಕ್ಷೆಗಳಲ್ಲಿ ಈ ಉತ್ಪನ್ನಗಳು ಕಳಪೆ ಮಟ್ಟದ್ದಾಗಿದ್ದು, ನಿಗದಿತ ಮಾನದಂಡಗಳನ್ನು ಪೂರೈಸು ವಲ್ಲಿ ವಿಫಲವಾಗಿವೆ ಎಂಬ ಹಿನ್ನೆಲೆಯಲ್ಲಿ ಪ್ರಾಧಿಕಾರ ಈ ಕ್ರಮ ಕೈಗೊಂಡಿದೆ. ಇಂಗು ಗುಣಮಟ್ಟದ ಕೆಲವು ಪರೀಕ್ಷೆಗಳನ್ನು ಪಾಸಾಗಿಲ್ಲ. ಇದೇನೂ ಹೊಸದಲ್ಲ. ಈ ಹಿಂದೆಯೂ ಪ್ರಾಧಿಕಾರ ಹಲವು ಉತ್ಪನ್ನಗಳನ್ನು ನಿಷೇಧಿಸಿದೆ. ವರ್ಷಗಳ ಹಿಂದೆ, ಪ್ಯಾಕೇಜ್ ಮಾಡಲಾದ ಕುಡಿಯುವ ಮಿನರಲ್ ವಾಟರ್ ಮತ್ತು ಖನಿಜಯುಕ್ತ ನೀರನ್ನು ‘ಹೆಚ್ಚಿನ ಅಪಾಯದ ಆಹಾರ ವರ್ಗ’ ಎಂದು ಪ್ರಾಧಿಕಾರ ಪರಿಗಣಿಸಿತ್ತು.

ಹೀಗೆ ಪರಿಗಣಿಸಲಾದ ಆಹಾರ ವಸ್ತುಗಳು ಕಡ್ಡಾಯವಾಗಿ ಅಪಾಯ ಆಧಾರಿತ ತಪಾಸಣೆಗೆ ಒಳಗಾಗಬೇಕಾಗುತ್ತದೆ. ಕೆಲವು ಆಹಾರ ಪದಾರ್ಥಗಳಿಗೆ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ ಪ್ರಮಾಣೀಕರಣ ಕಡ್ಡಾಯವಾಗಿದೆ. ಇನ್ನು ಕೆಲವು ಪ್ರಾಧಿಕಾರದಿಂದ, ಹಾಗೂ ಇನ್ನು ಕೆಲವು ಎರಡರಿಂದಲೂ ಪಡೆಯಬೇಕಿದೆ.

ಇದನ್ನೂ ಓದಿ; Vishwavani Editorial: ಪಾರ್ಕ್‌ಗಳಿಗೆ ಕೊಡಲಿ

ಇತ್ತೀಚೆಗೆ, ಕರ್ನಾಟಕ ಸೇರಿದಂತೆ ಹಲವು ಕಡೆ ಹೋಟೆಲ್‌ಗಳಲ್ಲಿ ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಹಾಳೆಗಳನ್ನು ಬಳಸುವ ಕುರಿತು ಎಫ್‌ʼಎಸ್‌ಎಸ್‌ಐಎ ವರದಿ ಕೇಳಿತ್ತು. ಅದು ಸುರಕ್ಷಿತವಲ್ಲ, ಅದರಿಂದ ಹಾನಿಕಾರ ರಾಸಾಯನಿಕ ಹೊಟ್ಟೆ ಸೇರುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಹಾನಿಕಾರಕ ರಾಸಾಯನಿಕ ವಸ್ತುಗಳು ಅನೇಕ ಬಗೆಯಲ್ಲಿ ಆಹಾರ ಉತ್ಪನ್ನಗಳು ಹಾಗೂ ಪ್ಯಾಕ್ಡ್ ಉತ್ಪನ್ನಗಳ ಮೂಲಕ ನಮ್ಮ ದೇಹ ಸೇರುತ್ತವೆ. ಇತ್ತೀಚೆಗೆ ಗೋಬಿ ಮಂಚೂರಿ ಮೊದಲಾದ ಉತ್ಪನ್ನಗಳಲ್ಲಿ ಕೃತಕ ಬಣ್ಣ ಸೇರಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ಕಡ್ಡಾಯ ನಿಷೇಧದ ವರೆಗೂ ಜನ ಇದರ ಬಗ್ಗೆ ಯಾವುದೇ ಜಾಗೃತಿಯಿಲ್ಲದೆ ಚಪ್ಪರಿಸಿಕೊಂಡು ಸೇವಿಸುತ್ತಿದ್ದರು! ಇದೇ ನಿಜವಾದ ಅಪಾಯ. ಯಾವುದು ಆರೋಗ್ಯಕರ ಉತ್ಪನ್ನ, ಯಾವುದು ಅನಾರೋಗ್ಯಕರ ಎಂಬುದರ ಬಗ್ಗೆ ನಮಗೆ ಸರಿಯಾದ ಕಲ್ಪನೆಯೇ ಇಲ್ಲ. ಮನೆಗಳಲ್ಲೂ ಇತರ ಕಡೆಯೂ ಆಹಾರಕ್ಕೆ ಪಾಮ್ ಆಯಿಲ್ ಯಥೇಚ್ಛವಾಗಿ ಬಳಸಲಾಗುತ್ತಿದೆ.

ನಮ್ಮ ದೇಶ ಪಾಮ್ ಆಯಿಲ್ ದೊಡ್ಡ ಆಮದುದಾರ. ಆದರೆ ಹಲವು ದೇಶಗಳು ಪಾಮ್ ಆಯಿಲ್ ಅನ್ನು ನಿಷೇಧಿಸಿವೆ. ಆಹಾರದ ರುಚಿ ಹೆಚ್ಚಿಸುವುದಕ್ಕೆ ಅಜಿನೊಮೊಟೊ ಸಾಕಷ್ಟು ಬಳಸಲಾಗು ತ್ತಿದೆ. ಇದು ಕೂಡ ಹಾನಿಕರ. ಬಳಸುವ ಕಚ್ಚಾವಸ್ತುಗಳನ್ನು ಗ್ರಾಹಕರ ಗಮನಕ್ಕೆ ತರುವ ವ್ಯವಸ್ಥೆ ಇಲ್ಲ. ಆಹಾರ ಉತ್ಪನ್ನಗಳ ಗ್ರೇಡಿಂಗ್ ನಮ್ಮಲ್ಲಿ ಸಮರ್ಪಕವಾಗಿಲ್ಲ. ಇದೆಲ್ಲ ಸರಿಹೋಗಬೇಕಿದೆ.